ADVERTISEMENT

ಮೆಡಿಕಲ್‌, ಎಂಜಿನಿಯರಿಂಗ್‌ ಬಿಟ್ಟರೆ ಬೇರೇನು ಅವಕಾಶಗಳಿವೆ?

ಪ್ರದೀಪ್ ಕುಮಾರ್ ವಿ.
Published 25 ಫೆಬ್ರುವರಿ 2024, 23:52 IST
Last Updated 25 ಫೆಬ್ರುವರಿ 2024, 23:52 IST
   

ನಾನು ಪಿಯುಸಿ (ವಿಜ್ಞಾನ ಓದುತ್ತಿದ್ದು) ಮುಂದೆ ಮೆಡಿಕಲ್ ಹಾಗೂ ಎಂಜಿನಿಯರಿಂಗ್ ಎರಡರಲ್ಲೂ ಆಸಕ್ತಿಯಿಲ್ಲ. ಹಾಗಾಗಿ, ಮುಂದೇನು ಮಾಡಬಹುದು?

ಹೆಸರು, ಊರು ತಿಳಿಸಿಲ್ಲ.

ಪಿಯುಸಿ (ವಿಜ್ಞಾನ) ನಂತರ ಹಲವು ಕೋರ್ಸ್ ಆಯ್ಕೆಗಳಿವೆ. ಬಿ.ಎಸ್ಸಿ (ಕಂಪ್ಯೂಟರ್ ಸೈನ್ಸ್, ಐಟಿ, ವಿಜ್ಞಾನ, ಕೃಷಿ, ತೋಟಗಾರಿಕೆ, ಮೀನುಗಾರಿಕೆ, ರೇಷ್ಮೆ ಕೃಷಿ, ಪಶುಸಂಗೋಪನೆ, ಹೈನುಗಾರಿಕೆ, ಬಯೋಟೆಕ್ನಾಲಜಿ, ನರ್ಸಿಂಗ್, ಪ್ಯಾರಾಮೆಡಿಕಲ್, ಆಹಾರ ತಂತ್ರಜ್ಞಾನ, ಫೊರೆನ್ಸಿಕ್, ಫಾರೆಸ್ಟ್ರಿ ಸೇರಿದಂತೆ ಹಲವಾರು ಆಯ್ಕೆಗಳು), ಬಿ.ಫಾರ್ಮಾ, ಬಿ.ಕಾಂ, ಬಿ.ಕಾಂ (ಹಾನರ್ಸ್), ಬಿ.ಎ, ಬಿ.ಎ (ಹಾನರ್ಸ್) ಬಿ.ಸಿ.ಎ, ಬಿ.ಬಿ.ಎ, ಬಿ.ಡಿಸೈನ್, ಸಿಎ, ಎಸಿಎಸ್, ಸಿಎಂಎ ಕೋರ್ಸ್‌ಗಳನ್ನು ಮಾಡಬಹುದು. ಈ ಕೋರ್ಸ್‌ಗಳಿಗೆ ಸಂಬಂಧ ಪಟ್ಟಂತೆ ವೃತ್ತಿಯ ಯಶಸ್ಸಿಗೆ ಬೇಕಾಗುವ ಆಸಕ್ತಿ, ಕೌಶಲಗಳು ವಿಭಿನ್ನವಾಗಿರುವುದು ಸಹಜ. ಹಾಗಾಗಿ, ನಿಮ್ಮ ಆಕಾಂಕ್ಷೆ, ಆಸಕ್ತಿ, ಅಭಿರುಚಿ, ಕೌಶಲಗಳ ಮೌಲ್ಯಮಾಪನ ಮಾಡಿ, ಯಾವ ವೃತ್ತಿ ನಿಮಗೆ ಸೂಕ್ತವೆಂದು ನಿರ್ಧರಿಸಿ, ಅದರಂತೆ ಕೋರ್ಸ್ ಆಯ್ಕೆ ಮಾಡುವುದು ಸೂಕ್ತ. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://youtu.be/AwlDno1YduQ

ADVERTISEMENT

ಸರ್, ನಾನೀಗ ಬಿಕಾಂ ಅಂತಿಮ ವರ್ಷದ ವಿದ್ಯಾರ್ಥಿ. ಹಾಗೂ, ಎಸಿಎಸ್ (ಎಕ್ಸಿಕ್ಯೂಟಿವ್) ಮಾಡುತ್ತಿದ್ದೇನೆ. ಆದರೆ, ಈ ಎರಡೂ ಕೋರ್ಸ್‌ಗ ಪರೀಕ್ಷೆ ಸಮೀಪಿಸುತ್ತಿದ್ದು, ಇವೆರಡರ ನಡುವೆ ಸಮತೋಲನ ಸಾಧಿಸಲು ಸಾಧ್ಯವಾಗದೆ, ಕಷ್ಟವಾಗುತ್ತಿದೆ. ಹಾಗೂ, ಎಸಿಎಸ್ ಕೋರ್ಸ್ ಜೊತೆಗೆ ಎಲ್‌ಎಲ್‌ಬಿ ಕೋರ್ಸ್ ಮಾಡಬಹುದೇ?

ಹೆಸರು, ಊರು ತಿಳಿಸಿಲ್ಲ.

ಎರಡು ಪ್ರಮುಖ ಕೋರ್ಸ್‌ಗಳನ್ನು ಒಟ್ಟಿಗೆ ಮಾಡುವುದು ಸುಲಭವಲ್ಲ, ಹಾಗಾಗಿ, ನಿಮ್ಮ ಕಷ್ಟ ಅರ್ಥವಾಗುತ್ತದೆ. ನಮ್ಮ ಅಭಿಪ್ರಾಯದಂತೆ, ಏಕಾಗ್ರತೆ ಮತ್ತು ಪರಿಶ್ರಮದಿಂದ, ಬಿ.ಕಾಂ ಪರೀಕ್ಷೆಯನ್ನು ಬರುವ ಮಾರ್ಚ್/ಏಪ್ರಿಲ್ ತಿಂಗಳಲ್ಲಿ ಮುಗಿಸಿ, ಈ ವರ್ಷದ ಡಿಸೆಂಬರ್‌ನಲ್ಲಿ ಎಕ್ಸಿಕ್ಯೂಟಿವ್ ಕಂಪನಿ ಸೆಕ್ರೆಟರಿ ಕೋರ್ಸ್ (ಎಸಿಎಸ್) ಪರೀಕ್ಷೆಯನ್ನು ಬರೆಯುವುದು ಸೂಕ್ತ. ಎಸಿಎಸ್ ಕೋರ್ಸ್ ಜೊತೆಗೆ ಎಲ್‌ಎಲ್‌ಬಿ ಕೋರ್ಸ್ ಮಾಡುವುದರಿಂದ ಕಂಪನಿ ಸೆಕ್ರೆಟರಿ ವೃತ್ತಿಯಲ್ಲಿ ಪ್ರಗತಿ ಸಾಧಿಸಲು ಸಹಾಯವಾಗುತ್ತದೆ. ಆದರೆ, ಬಾರ್ ಕೌನ್ಸಿಲ್‌ ಮಾನ್ಯತೆಯಿರುವ ಎಲ್‌ಎಲ್‌ಬಿ (ರೆಗ್ಯುಲರ್) ಕೋರ್ಸ್ ಮಾಡಬೇಕೆನ್ನುವುದು ನಿಮ್ಮ ಗಮನದಲ್ಲಿರಲಿ.

ವಿದ್ಯಾರ್ಥಿಗಳೇ, ನಿಮ್ಮ ಮುಂದಿನ ಕೋರ್ಸ್‌ ಮತ್ತು ಸೂಕ್ತವಾದ ವೃತ್ತಿಯ ಆಯ್ಕೆ ಹಾಗೂ ಭವಿಷ್ಯವನ್ನು ರೂಪಿಸಿಕೊಳ್ಳುವ ಬಗ್ಗೆ ಗೊಂದಲಗಳಿವೆಯೇ? ನಮಗೆ ಬರೆಯಿರಿ. ನಿಮ್ಮ ಪ್ರಶ್ನೆಗಳಿಗೆ ಶಿಕ್ಷಣತಜ್ಞ ಮತ್ತು ವೃತ್ತಿ ಸಲಹೆಗಾರ ವಿ. ಪ್ರದೀಪ್‌ಕುಮಾರ್‌ ಉತ್ತರಲಿಸಲಿದ್ದಾರೆ. ಪ್ರಶ್ನೆಗಳನ್ನು shikshana@prajavani.co.inಕ್ಕೆ ಕಳಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.