ADVERTISEMENT

8,375 ಲೀ. ಮದ್ಯ ವಶ; 184 ಮಂದಿ ಬಂಧನ

20 ದಿನಗಳ ಅವಧಿಯಲ್ಲಿ 382 ಕಡೆಗಳಲ್ಲಿ ಅಬಕಾರಿ ದಾಳಿ, 215 ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 3 ಮೇ 2019, 16:48 IST
Last Updated 3 ಮೇ 2019, 16:48 IST
ವಶಕ್ಕೆ ಪಡೆದಿರುವ ಮದ್ಯ
ವಶಕ್ಕೆ ಪಡೆದಿರುವ ಮದ್ಯ   

ಚಾಮರಾಜನಗರ: ಲೋಕಸಭಾ ಚುನಾವಣೆ ಮಾದರಿ ನೀತಿಸಂಹಿತೆ ಜಾರಿಗೆ ಬಂದ ನಂತರ (ಮಾರ್ಚ್‌ 10) ಅಕ್ರಮ ಮದ್ಯ ವಹಿವಾಟಿನ ಮೇಲೆ ಕಣ್ಣಿಟ್ಟುರುವ ಜಿಲ್ಲಾ ಅಬಕಾರಿ ಇಲಾಖೆ 20 ದಿನಗಳ ಅವಧಿಯಲ್ಲಿ 382 ದಾಳಿಗಳನ್ನು ನಡೆಸಿ, 215 ಪ್ರಕರಣ ದಾಖಲಿಸಿದೆ.184 ಮಂದಿಯನ್ನು ಬಂಧಿಸಿದೆ.

ಬಿಯರ್‌ ಸೇರಿದಂತೆ 8,375 ಲೀಟರ್‌ ಮದ್ಯವನ್ನು ಜಪ್ತಿ ಮಾಡಿದೆ. ಆರೋಪಿಗಳು ಬಳಸಿದ್ದ 18 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಇವುಗಳ ಒಟ್ಟು ಮೌಲ್ಯ ₹ 45 ಲಕ್ಷ.

‘ಮಾರ್ಚ್‌ 10ರಿಂದ ಮಾರ್ಚ್‌ 30ರ ಅವಧಿಯಲ್ಲಿ ಜಿಲ್ಲೆಯಾದ್ಯಂತ ದಾಳಿ ನಡೆಸಿ, 215 ಪ್ರಕರಣಗಳನ್ನು ದಾಖಲಿಸಿದ್ದೇವೆ. ಈ ಪೈಕಿ 23 ಅತ್ಯಂತ ಘೋರ ಪ್ರಕರಣಗಳು. ಪರವಾನಗಿ ಷರತ್ತು ಉಲ್ಲಂಘನೆಗೆ ಸಂಬಂಧಿಸಿದಂತೆ 23 ಹಾಗೂ ಪರವಾನಗಿ ಹೊಂದಿಲ್ಲದ ಪ್ರದೇಶದಲ್ಲಿ ಮದ್ಯ ಸೇವಿಸಲು ಅವಕಾಶ ಮಾಡಿಕೊಟ್ಟ 169 ಮೊಕದ್ದಮೆಗಳನ್ನು ದಾಖಲಿಸಿದ್ದೇವೆ’ ಎಂದು ಜಿಲ್ಲಾ ಅಬಕಾರಿ ಉಪ ಆಯುಕ್ತ ಕೆ.ಎಸ್‌.ಮುರಳಿ ಹೇಳಿದರು.

ADVERTISEMENT

ಅಕ್ರಮದ ಮೇಲೆ ನಿಗಾ: ‘ಚುನಾವಣೆ ಸಂದರ್ಭದಲ್ಲಿ ನಡೆಯುವ ಅಕ್ರಮ ವಹಿವಾಟಿನ ಮೇಲೆ ಮುಂದೆಯೂ ದಾಳಿಗಳನ್ನು ನಡೆಸುತ್ತೇವೆ. ದೂರುಗಳನ್ನು ಸ್ವೀಕರಿಸುವುದಕ್ಕಾಗಿಯೇ ಕಂಟ್ರೋಲ್‌ ರೂಂ ತೆರೆದಿದ್ದೇವೆ. ನಾಲ್ಕು ಫ್ಲೈಯಿಂಗ್‌ ಸ್ಕ್ವಾಡ್‌ಗಳನ್ನೂ (ಚಾಮರಾಜನಗರ–2, ಕೊಳ್ಳೇಗಾಲ–1 ಮತ್ತು ಗುಂಡ್ಲುಪೇಟೆ–1) ರಚಿಸಿದ್ದೇವೆ. ದೂರು ದಾಖಲಾದ ತಕ್ಷಣ ಫ್ಲೈಯಿಂಗ್‌ ಸ್ಕ್ವಾಡ್‌ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುತ್ತಾರೆ. ಇದಲ್ಲದೇಗಡಿ ಪ್ರದೇಶಗಳಲ್ಲಿ ಚೆಕ್‌ ಪೋಸ್ಟ್‌ಗಳನ್ನೂ ತೆರೆಯಲಾಗಿದೆ’ ಎಂದು ಅವರು ಮಾಹಿತಿ ನೀಡಿದರು.

ಕರ್ನಾಟಕ ರಾಜ್ಯ ಪಾನೀಯ ನಿಗಮದಿಂದ (ಕೆಎಸ್‌ಬಿಸಿಎಲ್‌) ಮದ್ಯ ಖರೀದಿಸುವ ಪರವಾನಗಿ ಪಡೆದ ಮಳಿಗೆಗಳಲ್ಲಿ ನಡೆಯುತ್ತಿರುವ ವಹಿವಾಟಿನ ಮೇಲೂ ನಿಗಾ ಇಟ್ಟಿದ್ದೇವೆ. ಈ ಮಳಿಗೆಗಳು ಮೂರು ವರ್ಷಗಳಲ್ಲಿ ಖರೀದಿಸಿರುವ ಮದ್ಯದ ಸರಾಸರಿ ಪ್ರಮಾಣ ಶೇ 10ರಷ್ಟು ಹೆಚ್ಚಿರುವುದು ಕಂಡು ಬಂದರೆ, ಚುನಾವಣಾ ಉದ್ದೇಶಕ್ಕೆ ಮದ್ಯ ಬಳಸಲಾಗುತ್ತಿದೆಯೇ ಎಂಬುದನ್ನು ಪರಿಶೀಲಿಸುತ್ತೇವೆ. ಇದಲ್ಲದೇ ನಿಯಮಿತವಾಗಿ ಮಳಿಗೆಗಳಲ್ಲಿ ತಪಾಸಣೆಯನ್ನೂ ನಡೆಸುತ್ತಿದ್ದೇವೆ’ ಎಂದರು.

‘ಇದುವರೆಗೂ ಜಿಲ್ಲೆಯ ಮದ್ಯದ ಅಂಗಡಿಗಳು ಹೆಚ್ಚುವರಿ ಖರೀದಿಸಿರುವುದು ಕಂಡು ಬಂದಿಲ್ಲ. ಪರವಾನಗಿ ಪಡೆದವರಿಗೆ ಕಟ್ಟುನಿಟ್ಟಿನ ನಿರ್ಬಂಧಗಳನ್ನು ಹಾಕಿದ್ದೇವೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಈಗ ವಶಪಡಿಸಿಕೊಳ್ಳಲಾಗಿರುವ ಮದ್ಯ ಯಾವುದೇ ಪಕ್ಷ ಅಥವಾ ರಾಜಕಾರಣಿಗೆ ಸಂಬಂಧಿಸಿದ್ದಲ್ಲ. ಇವೆಲ್ಲವೂ ಆರೋಪಿಗಳು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದು ಇಲ್ಲವೇ ಅಕ್ರಮವಾಗಿ ಸಾಗಿಸುತ್ತಿದ್ದುದು ಅಥವಾ ಅಕ್ರಮ ಮಾಡುತ್ತಿರುವಾಗ ಜಪ್ತಿ ಮಾಡಿರುವುದು ಎಂದು ಅವರು ಸ್ಪಷ್ಟಪಡಿಸಿದರು.

ನಕಲಿ ಮದ್ಯದ ಎಚ್ಚರಿಕೆ

‘ಚುನಾವಣಾ ಸಂದರ್ಭದಲ್ಲಿ ಮದ್ಯ ಸಿಗುತ್ತದೆ ಎಂದುಕೊಂಡು ಸಿಕ್ಕಿದ್ದನ್ನೆಲ್ಲ ಯಾರೂ ಸೇವಿಸಬಾರದು. ಎಷ್ಟೋ ಸಂದರ್ಭದಲ್ಲಿ ಅದು ಕಳಪೆ ಗುಣಮಟ್ಟದ ಮದ್ಯ ಆಗಿರಬಹುದು ಅಥವಾ ಕಳ್ಳಭಟ್ಟಿಯೂ ಆಗಿರುವ ಸಾಧ್ಯತೆಯೂ ಇರುತ್ತದೆ. ಇಂತಹದ್ದನ್ನು ಸೇವಿಸಿದರೆ ಆರೋಗ್ಯದ ಮೇಲೆ ಪರಿಣಾಮವಾಗುತ್ತದೆ. ಮದ್ಯ ಸೇವಿಸುವವರು, ಅಬಕಾರಿ ಇಲಾಖೆಯಿಂದ ಪರವನಾಗಿ ಪಡೆದ ಮಳಿಗೆಗಳಿಂದ ಬಿಟ್ಟು ಬೇರೆಲ್ಲೂ ಅದನ್ನು ಖರೀದಿಸಬೇಡಿ’ ಎಂದು ಮುರಳಿ ಅವರು ಹೇಳಿದರು.


* ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸುವ ಸಲುವಾಗಿ ಅಮಲಿನ ಪ್ರಭಾವದಿಂದ ಮುಕ್ತವಾಗಿರುವ ಚುನಾವಣಾ ಪರಿಸರ ನಿರ್ಮಿಸುವುದು ಇಲಾಖೆ ಗುರಿ
–ಕೆ.ಎಸ್‌.ಮುರಳಿ, ಜಿಲ್ಲಾ ಅಬಕಾರಿ ಉಪ ಆಯುಕ್ತ

ಅಂಕಿ ಅಂಶ

* 6,605 ಲೀಟರ್‌ ವಶಪಡಿಸಿಕೊಂಡಿರುವ ಮದ್ಯದ ಪ್ರಮಾಣ

* 1,772 ಲೀಟರ್‌ ಜಪ್ತಿ ಮಾಡಲಾಗಿರುವ ಬಿಯರ್‌ ಪ್ರಮಾಣ

* ₹ 45 ಲಕ್ಷ ವಶಕ್ಕೆ ಪಡೆದಿರುವ ಮದ್ಯ ಹಾಗೂ ದ್ವಿಚಕ್ರ ವಾಹನಗಳ ಮೌಲ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.