ಚಿತ್ರದುರ್ಗ: ಇಲ್ಲಿನ ವಿಜ್ಞಾನ ಕಾಲೇಜು ಮೈದಾನದಲ್ಲಿ ಬಿಜೆಪಿ ಆಯೋಜಿಸಿದ ಪ್ರಧಾನಿ ನರೇಂದ್ರ ಮೋದಿರ‍್ಯಾಲಿಗೆ ಕ್ಷಣಗಣನೆ ಆರಂಭವಾಗಿದೆ.
ಚಿತ್ರದುರ್ಗ, ದಾವಣಗೆರೆ ಹಾಗೂ ತುಮಕೂರು ಲೋಕಸಭಾ ಕ್ಷೇತ್ರದ ಸಾವಿರಾರು ಬಿಜೆಪಿ ಕಾರ್ಯಕರ್ತರು ಮೈದಾನದತ್ತ ತಂಡೋಪ ತಂಡವಾಗಿ ಬರುತ್ತಿದ್ದಾರೆ. ಮೋದಿ, ಮೋದಿ ಎಂಬ ಜಯಘೋಷ ಮೈದಾನದಲ್ಲಿ ಅನುರಣಿಸುತ್ತಿದೆ.
ಚಳ್ಳಕೆರೆ ತಾಲ್ಲೂಕಿನ ಡಿಆರ್ ಡಿ ಒ ಆವರಣದಲ್ಲಿರುವ ವಿಮಾನ ನಿಲ್ದಾಣಕ್ಕೆ ಮಧ್ಯಾಹ್ನ 1.50ಕ್ಕೆ ಬರುವ ಮೋದಿ, ಹೆಲಿಕಾಪ್ಟರ್ ಮೂಲಕ ಮೈದಾನಕ್ಕೆ 2.30ಕ್ಕೆ ಆಗಮಿಸಲಿದ್ದಾರೆ. ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎ.ನಾರಾಯಣಸ್ವಾಮಿ, ದಾವಣಗೆರೆ ಕ್ಷೇತ್ರದ ಅಭ್ಯರ್ಥಿ ಜಿ.ಎಂ.ಸಿದ್ದೇಶ್ವರ ಹಾಗೂ ತುಮಕೂರು ಅಭ್ಯರ್ಥಿ ಬಸವರಾಜು ಪರ ಮತಯಾಚನೆ ಮಾಡಲಿದ್ದಾರೆ.
ಬಸ್, ಟ್ರ್ಯಾಕ್ಟರ್, ಕಾರು ಸೇರಿ ಹಲವು ವಾಹನಗಳಲ್ಲಿ ಜನ ಬರುತ್ತಿದ್ದಾರೆ. ಮೈದಾನದಿಂದ ಒಂದು ಕಿ.ಮೀ ದೂರದಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಬಿ.ಡಿ.ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ.
ಪ್ರಧಾನಿ ಮೋದಿ ಅವರಿಗೆ ಬಿಳಿ ಕಂಬಳಿ ಹಾಗೂ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ರಥದ ಪ್ರತಿಕೃತಿ ಉಡುಗೊರೆಯಾಗಿ ನೀಡಲಾಗುತ್ತಿದೆ. ಕಂಬಳಿಗೆ ಬಿಜೆಪಿ ಚಿಹ್ನೆ ಕಮಲದ ಹೂ ಎಂಬ್ರಾಯ್ದರಿ ಮಾಡಲಾಗಿದೆ.
ಬಿಜೆಪಿ ಪ್ರಚಾರ ಸಮಿತಿ ಅಧ್ಯಕ್ಷ ಆರ್.ಅಶೋಕ್, ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ಎಂ.ಚಂದ್ರಪ್ಪ ಇದ್ದಾರೆ.
(ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ರಥದ ಪ್ರತಿಕೃತಿ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.