ADVERTISEMENT

ಕ್ಚೇತ್ರ ಮಹಾತ್ಮೆ: ರಾಜಗಢ (ಮಧ್ಯಪ್ರದೇಶ)

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2024, 20:40 IST
Last Updated 2 ಏಪ್ರಿಲ್ 2024, 20:40 IST
ರಾಜಗಢ
ರಾಜಗಢ   

ಕಳೆದೆರಡು ಲೋಕಸಭಾ ಚುನಾವಣೆಗಳಲ್ಲಿ ಮಧ್ಯಪ್ರದೇಶದ ರಾಜಗಢ ಕ್ಷೇತ್ರದಲ್ಲಿ ಗೆಲುವಿನ ಸಿಹಿ ಉಂಡಿದ್ದ ಬಿಜೆಪಿಯ ರೋಡ್ಮಲ್‌ ನಾಗರ್‌ ಅವರು ಈ ಬಾರಿಯೂ ಸ್ಪರ್ಧೆಗಿಳಿದಿದ್ದಾರೆ. ಇವರ ಗೆಲುವಿನ ಓಟಕ್ಕೆ ಕಡಿವಾಣ ಹಾಕಲು ಕಾಂಗ್ರೆಸ್‌ ಪಕ್ಷವು, ಹಿರಿಯ ಮುಖಂಡ ದಿಗ್ವಿಜಯ ಸಿಂಗ್‌ ಅವರನ್ನು ಅಖಾಡಕ್ಕಿಳಿಸಿದೆ. ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್‌ ಸಿಂಗ್‌ ಸ್ಪರ್ಧೆಗಿಳಿದಿರುವುದರಿಂದ ಕಣವು ಇನ್ನಷ್ಟು ರಂಗೇರಿದೆ. ಸದ್ಯ ರಾಜ್ಯಸಭಾ ಸದಸ್ಯರಾಗಿರುವ ಅವರು ಈ ಬಾರಿ ಅದೃಷ್ಟ ಕೈಹಿಡಿಯಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.

2019ರ ಲೋಕಸಭಾ ಚುನಾವಣೆಯಲ್ಲಿ ಭೋಪಾಲ್‌ ಕ್ಷೇತ್ರದಿಂದ ಸ್ಪರ್ಧಿಸಿದ್ದ ದಿಗ್ವಿಜಯ್‌ ಅವರನ್ನು ಬಿಜೆಪಿಯ ಪ್ರಗ್ಯಾಸಿಂಗ್‌ ಠಾಕೂರ್ ಅವರು ಸೋಲಿಸಿದ್ದರು. ಕಳೆದ ಚುನಾವಣೆಯಲ್ಲಿ ಬಿಜೆಪಿಯ ರೋಡ್ಮಲ್‌ ಅವರು 8,23,824 ಮತಗಳನ್ನು ಪಡೆದು ಭರ್ಜರಿ ಜಯ ತಮ್ಮದಾಗಿಸಿಕೊಂಡಿದ್ದರು. ಆರ್‌ಎಸ್‌ಎಸ್‌ ಪ್ರಭಾವವಿರುವ ಈ ಕ್ಷೇತ್ರದಲ್ಲಿ ರೋಡ್ಮಲ್‌ ಅವರು ಮೂರನೇ ಬಾರಿಯೂ ಜಯಗಳಿಸಲಿದ್ದಾರೆ ಎಂಬ ವಿಶ್ವಾಸ ಕಮಲ ಪಕ್ಷದ್ದು. 2009ರಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ನಾರಾಯಣ ಸಿಂಗ್‌ ಅಮ್ಲಾಬೆ ಅವರು ಇಲ್ಲಿಂದ ಸಂಸತ್‌ಗೆ ಆಯ್ಕೆಯಾಗಿದ್ದರು. ನಂತರದ ಚುನಾವಣೆಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಈ ಬಾರಿಯಾದರೂ ಕ್ಷೇತ್ರವನ್ನು ಮರಳಿ ತೆಕ್ಕೆಗೆ ಪಡೆಯಬೇಕೆಂದು ಕಾಂಗ್ರೆಸ್‌ ಕೂಡ ಶ್ರಮಿಸುತ್ತಿದೆ. ದಿಗ್ವಿಜಯ್‌ ಅವರು ಆರ್‌ಎಸ್‌ಎಸ್‌ ಮುಖಂಡರೊಬ್ಬರನ್ನು ಟೀಕಿಸಿ, ಫೇಸ್‌ಬುಕ್‌ ಪೋಸ್ಟ್‌ ಹಾಕಿದ್ದು ಕಳೆದ ವರ್ಷ ವಿವಾದಕ್ಕೆ ಕಾರಣವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT