ADVERTISEMENT

ಗುಸು ಗುಸು: ನಂಬಿಸಿ ‘ಕೈ’ ಕೊಟ್ಟ ರೆಡ್ಡಿ‌

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2024, 22:03 IST
Last Updated 24 ಮಾರ್ಚ್ 2024, 22:03 IST
ಜನಾರ್ದನ ರೆಡ್ಡಿ
ಜನಾರ್ದನ ರೆಡ್ಡಿ   

ರಾಜ್ಯಸಭೆಯ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯನ್ನು ಬೆಂಬಲಿಸಿ ತನ್ನ ಕ್ಷೇತ್ರಕ್ಕೆ ಸಂಬಂಧಿಸಿದ ಹತ್ತಾರು ಕಡತಗಳನ್ನು ಸಲೀಸಾಗಿ ವಿಲೇವಾರಿ ಮಾಡಿಸಿಕೊಂಡಿದ್ದ ಗಂಗಾವತಿ ಶಾಸಕ ಜಿ. ಜನಾರ್ದನ ರೆಡ್ಡಿ, ಈಗ ತಮ್ಮ ನೇತೃತ್ವದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷವನ್ನೇ (ಕೆಆರ್‌ಪಿಪಿ) ಬಿಜೆಪಿಯೊಳಗೆ ವಿಲೀನ ಮಾಡಲು ನಿರ್ಧರಿಸಿದ್ದಾರೆ. ರೆಡ್ಡಿ ಅವರ ಈ ನಡೆ ಆಡಳಿತಾರೂಢ ‘ಕೈ’ ಪಾಳಯ ಮತ್ತು ವಿರೋಧ ಪಕ್ಷದಲ್ಲಿರುವ ‘ಕಮಲ ಪಡೆ’ ಇಬ್ಬರನ್ನೂ ಏಕಕಾಲಕ್ಕೆ ದಿಗ್ಭ್ರಾಂತರಾಗುವಂತೆ ಮಾಡಿದೆಯಂತೆ.

ಬಿಜೆಪಿ ವಿರುದ್ಧ ಬುಸುಗುಡುತ್ತಲೇ ಕೆಆರ್‌ಪಿಪಿ ಕಟ್ಟಿದ್ದ ರೆಡ್ಡಿ, ಗಂಗಾವತಿಯಿಂದ ಗೆದ್ದು ಬಂದರು. ಮತ್ತೆ ಬಿಜೆಪಿಯೊಳಕ್ಕೆ ಪ್ರವೇಶಿಸಲು ಸತತ ಪ್ರಯತ್ನ ನಡೆಸುತ್ತಲೇ ಇದ್ದರು. ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜದ ವಿವಾದ ಕಾವು ಪಡೆದಿದ್ದಾಗ ಬಿಜೆಪಿ ನಾಯಕರ ಜತೆ ಅಲ್ಲಿಗೆ ತೆರಳಿ ಕೇಸರಿ ಶಾಲು ಧರಿಸಿಕೊಂಡು ಮೆರವಣಿಗೆ ನಡೆಸಿದ್ದರು.

‘ರೆಡ್ಡಿ ಬಿಜೆಪಿ ಸೇರಲು ಪ್ರಯತ್ನಿಸುತ್ತಿದ್ದಾರೆ. ಆದರೆ, ರೆಡ್ಡಿ ಮನವಿಯನ್ನು ಕೇಂದ್ರ ಗೃಹ ಸಚಿವ ಅಮಿತ್‌ ಶಾ  ತಿರಸ್ಕರಿಸಿದ್ದಾರೆ’ ಎಂದು ಬಿಜೆಪಿಯ ಪ್ರಮುಖ ನಾಯಕರೇ ಹೇಳುತ್ತಿದ್ದರು. ನಂತರ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ರೆಡ್ಡಿ ಕಾಂಗ್ರೆಸ್‌ ಅಭ್ಯರ್ಥಿಗೆ ಮತ ಚಲಾಯಿಸಿದ್ದರು. ಅತ್ತ ಬಿಜೆಪಿಯವರು ರೆಡ್ಡಿಯವರ ಮತ ಪಡೆಯುವ ಪ್ರಯತ್ನವನ್ನೂ ನಡೆಸಿರಲಿಲ್ಲ. ರಾಜ್ಯಸಭೆ ಚುನಾವಣೆಯ ಅವಕಾಶ ಬಳಸಿಕೊಂಡ ರೆಡ್ಡಿ, ಕಾಂಗ್ರೆಸ್‌ ಸರ್ಕಾರದಿಂದ ದೊಡ್ಡ ಮೊತ್ತದ ಅನುದಾನ ಪಡೆದುಕೊಂಡಿದ್ದಾರೆ ಎಂಬ ಮಾತುಗಳು ವಿಧಾನಸಭೆಯ ಮೊಗಸಾಲೆಯಲ್ಲಿ ಓಡಾಡುತ್ತಿದ್ದವು.

ADVERTISEMENT

ಸಹೋದರರ ನಡುವೆ ಸಂಘರ್ಷ ತಂದಿಕ್ಕಿದ್ದಾರೆ ಎಂಬ ಕಾರಣಕ್ಕೆ ಬಿ. ಶ್ರೀರಾಮುಲು ವಿರುದ್ಧ ರೆಡ್ಡಿ ಮುನಿಸಿಕೊಂಡಿದ್ದರು. ಬಳ್ಳಾರಿಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಶ್ರೀರಾಮುಲು ಕಣಕ್ಕಿಳಿದರೆ ಸೋಲಿಸಲು ಸಜ್ಜಾಗಿದ್ದಾರೆ ಎಂಬ ಸುದ್ದಿ ಜೋರಾಗಿತ್ತು. ಇದರಿಂದ ಕಾಂಗ್ರೆಸ್‌ ನಾಯಕರ ಖುಷಿ ಇಮ್ಮಡಿಸಿತ್ತು. ಈಗ ದಿಢೀರನೆ ಪಕ್ಷವನ್ನೇ ಬಿಜೆಪಿಯಲ್ಲಿ ವಿಲೀನಗೊಳಿಸಲು ರೆಡ್ಡಿ ನಿರ್ಧರಿಸಿದ್ದಾರೆ. ಬಿಜೆಪಿ ನಾಯಕರು ಮತ್ತು ಜನಾರ್ದನ ರೆಡ್ಡಿ ಇಬ್ಬರ ನಿಲುವಿನಲ್ಲೂ ಹಠಾತ್‌ ಬದಲಾವಣೆ ತಂದ ‘ಅಸ್ತ್ರ’ ಯಾವುದು ಎಂಬುದು ಮಾತ್ರ ನಿಗೂಢವಾಗಿಯೇ ಉಳಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.