ADVERTISEMENT

ಬೇಸರದ ಮಧ್ಯೆಯೂ ಬೆಂಬಲದ ನುಡಿಯಾಡಿದ ಕವಿತಾ ಖನ್ನಾ

ಗುರುದಾಸ್‌ಪುರದಿಂದ ಟಿಕೆಟ್ ವಂಚಿತೆ

​ಪ್ರಜಾವಾಣಿ ವಾರ್ತೆ
Published 9 ಮೇ 2019, 18:01 IST
Last Updated 9 ಮೇ 2019, 18:01 IST
ಕವಿತಾ ಖನ್ನಾ
ಕವಿತಾ ಖನ್ನಾ   

ನವದೆಹಲಿ: ಗುರುದಾಸ್‌ಪುರ ಲೋಕಸಭಾ ಕ್ಷೇತ್ರದಿಂದ ಬಾಲಿವುಡ್ ನಟ ಸನ್ನಿ ಡಿಯೋಲ್‌ಗೆ ಟಿಕೆಟ್ ನೀಡಿರುವುದಕ್ಕೆ ವಿನೋದ್ ಖನ್ನಾ ಅವರ ಪತ್ನಿ ಕವಿತಾ ಖನ್ನಾ ಅವರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ನಿರ್ಧಾರದಿಂದ ತಮ್ಮಲ್ಲಿ ಪರಿತ್ಯಕ್ತ ಮತ್ತು ತಿರಸ್ಕೃತ ಭಾವ ಮೂಡಿದೆ ಎಂದು ಅವರು ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ಹೊರಹಾಕಿದರು.

‘ವಿನೋದ್ ಖನ್ನಾ ನಾಲ್ಕು ಬಾರಿ ಪ್ರತಿನಿಧಿಸಿದ್ದ ಗುರುದಾಸ್‌ಪುರಕ್ಕೆ ತಮ್ಮನ್ನು ಪರಿಗಣಿಸದೇ ವಂಚಿಸಲಾಗಿದೆ ಎಂದು ಅವರು ಪಕ್ಷವನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ADVERTISEMENT

ಆದರೆ, ‘ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಿಲ್ಲ. ಬಿಜೆಪಿ ಮೇಲೆ ನಂಬಿಕೆಯಿದ್ದು, ಪ್ರಧಾನಿ ಮೋದಿ ಅವರನ್ನು ಬೆಂಬಲಿಸುತ್ತೇನೆ’ ಎಂದು ಸ್ಪಷ್ಟನೆ ನೀಡಿದ್ದಾರೆ.

‘ಕ್ಷೇತ್ರಕ್ಕೆ ಮತ್ತೊಬ್ಬ ಅಭ್ಯರ್ಥಿ ಇರುವುದಾಗಿ ಪಕ್ಷದ ಯಾವ ನಾಯಕರೂ ನನಗೆ ತಿಳಿಸಲಿಲ್ಲ. ನಾನು ದೆಹಲಿಯಲ್ಲಿದ್ದಾಗ ಸನ್ನಿ ಡಿಯೋಲ್ ಅವರು ಪಕ್ಷಕ್ಕೆ ಸೇರ್ಪಡೆಗೊಂಡರು. ನನಗೆ ಹಲವು ಪಕ್ಷಗಳಿಂದ ಆಹ್ವಾನ ಬಂದಿತ್ತು. 2017ರಲ್ಲಿ ಉಪಚುನಾವಣೆಗೆ ಸ್ವರ್ಣ್ ಸಲಾರಿಯಾ ಅವರಿಗೆ ಪಕ್ಷ ಟಿಕೆಟ್ ನೀಡಿತು. ಇದೀಗ ಡಿಯೋಲ್‌ ಅವರಿಗೆ ಮಣೆ ಹಾಕಿದೆ. ನನಗೆ ಎರಡು ಬಾರಿ ಪಕ್ಷ ನಿರಾಸೆ ಮೂಡಿಸಿದೆ’ ಎಂದು ಕವಿತಾ ಹೇಳಿದ್ದಾರೆ. ಸದ್ಯ ಗುರುದಾಸ್‌ಪುರ ಕ್ಷೇತ್ರವನ್ನು ಕಾಂಗ್ರೆಸ್‌ನ ಸುನೀಲ್ ಜಕ್ಕರ್ ಅವರು ಪ್ರತಿನಿಧಿಸುತ್ತಿದ್ದಾರೆ.

‘ಸ್ವತಂತ್ರವಾಗಿ ಸ್ಪರ್ಧಿಸಿ ಗೆಲ್ಲಬಲ್ಲೆ ’

ಕ್ಷೇತ್ರದ ಕುಗ್ರಾಮಗಳಿಗೂ ಸಂಪರ್ಕ ಸೌಲಭ್ಯ ಕಲ್ಪಿಸಿದ್ದರಿಂದ ವಿನೋದ್ ಖನ್ನಾ ಅವರು ‘ಸಂಪರ್ಕದ ಸರದಾರ’ ಎಂದೇ ಖ್ಯಾತರಾಗಿದ್ದರು. ಅವರ ಜತೆ ತಳಮಟ್ಟದಿಂದ ದುಡಿದಿದ್ದೇನೆ. ಹೀಗಾಗಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದರೂ ನಾನು ಗೆಲ್ಲಬಲ್ಲೆ. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ನನ್ನ ಮೇಲೆ ಭಾರಿ ಒತ್ತಡವಿದೆ. ಕಾಂಗ್ರೆಸ್, ಆಮ್ ಆದ್ಮಿಯಿಂದಲೂ ನನಗೆ ಆಹ್ವಾನ ಬಂದಿತ್ತು ಎಂದು ಕವಿತಾ ಖನ್ನಾಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.