ADVERTISEMENT

ಕೊಡಂಕೂರಿನಲ್ಲಿ ತೀವ್ರ ನೀರಿನ ಸಮಸ್ಯೆ: ನೀರು ಕೊಡದಿದ್ದರೆ ಚುನಾವಣೆ ಬಹಿಷ್ಕಾರ

ಸಾರ್ವಜನಿಕರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2019, 14:18 IST
Last Updated 1 ಏಪ್ರಿಲ್ 2019, 14:18 IST
   

ಉಡುಪಿ: ಕೊಡಂಕೂರು ವಾರ್ಡ್‌ನಲ್ಲಿ ತೀವ್ರ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು, ನಗರಸಭೆ ಅಧಿಕಾರಿಗಳಾಗಲಿ ಅಥವಾ ಸದಸ್ಯರಾಗಲಿ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಅಧಿಕಾರಿಗಳು ಎಚ್ಚೆತ್ತುಕೊಂಡು ನೀರಿನ ಸಮಸ್ಯೆ ಬಗೆಹರಿಸಬೇಕು. ಇಲ್ಲದಿದ್ದರೆ ಚುನಾವಣೆ ಬಹಿಷ್ಕರಿಸುತ್ತೇವೆ ಎಂದು ಕೊಡಂಕೂರು ವಾರ್ಡ್‌ನ ನಾಗರಿಕರು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಸ್‌ ಇಂಡಿಯಾ ಸೇವಾ ಸಮಿತಿಯ ಕೊಡಂಕೂರು ಅಧ್ಯಕ್ಷ ರವಿರಾಜ್‌ ಶೆಟ್ಟಿ ಮಾತನಾಡಿ, ನಗರಸಭೆ ಅಧಿಕಾರಿಗಳು ಕೃತಕ ನೀರಿನ ಅಭಾವ ಸೃಷ್ಟಿಸುವ ಉದ್ದೇಶದಿಂದ 3 ದಿನಕ್ಕೊಮ್ಮೆ ನೀರು ಬಿಡುವ ತೀರ್ಮಾನ ಕೈಗೊಂಡಿದ್ದಾರೆ. ನಗರಸಭೆಯ ಏಕಾಏಕಿ ನಿರ್ಧಾರದಿಂದ ಕೊಡಂಕೂರು ಜನರು ನೀರಿನ ಸಮಸ್ಯೆಯಿಂದ ಪರದಾಡುವಂತಾಗಿದೆ. ಸಾರ್ವಜನಿಕರ ತೆರಿಗೆ ಹಣವನ್ನು ಲೂಟಿ ಹೊಡೆಯುವ ಉದ್ದೇಶದಿಂದ ಈ ರೀತಿಯ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ದೂರಿದರು.

ಕೊಡಂಕೂರು ಪರಿಸರದಲ್ಲಿ 500ಕ್ಕೂ ಹೆಚ್ಚು ಮನೆಗಳಿವೆ. ಕಳೆದ ಕೆಲವು ವರ್ಷಗಳಿಂದ ಬೇಸಗೆಯಲ್ಲಿ ನೀರಿನ ಸಮಸ್ಯೆ ಸೃಷ್ಟಿಯಾಗುತ್ತಿದ್ದರೂ ನಗರಸಭೆ ಪರ್ಯಾಯ ವ್ಯವಸ್ಥೆ ಮಾಡಿಲ್ಲ. ಪರಿಣಾಮ ಈ ಬಾರಿ ನೀರಿನ ಸಮಸ್ಯೆ ತೀವ್ರ ಸ್ವರೂಪಕ್ಕೆ ಹೋಗಿದೆ. ಇದಕ್ಕೆ ನಗರಸಭೆಯ ಅಧಿಕಾರಿಗಳ ಬೇಜವಾಬ್ದಾರಿಯೇ ಕಾರಣ ಎಂದು ಆರೋಪಿಸಿದರು.

ADVERTISEMENT

ಸ್ಥಳೀಯ ಜನಪ್ರತಿನಿಧಿಗಳನ್ನು ಕೇಳಿದರೆ ಇನ್ನೂ ಅಧಿಕಾರ ವಹಿಸಿಕೊಂಡಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ. ಅಧಿಕಾರಿಗಳು ಸ್ಪಂದನೆ ನೀಡುತ್ತಿಲ್ಲ. ಹಾಗಾಗಿ, ಮತದಾನ ಮಾಡಿಯೂ ಏನೂ ಪ್ರಯೋಜನ ಇಲ್ಲ ಎಂಬ ಭಾವನೆ ಮೂಡುತ್ತಿದ್ದು, ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಮತದಾನ ಬಹಿಷ್ಕಾರ ಮಾಡುವ ತೀರ್ಮಾನಕ್ಕೆ ಬಂದಿದ್ದೇವೆ ಎಂದು ಹೇಳಿದರು.

ಮಾಸ್‌ ಇಂಡಿಯಾ ಸೇವಾ ಸಮಿತಿಯ ಕರ್ನಾಟಕದ ಅಧ್ಯಕ್ಷ ಜಿ.ಎ.ಕೋಟೆಯಾರ್‌ ಮಾತನಾಡಿ, ಕಳೆದ ವರ್ಷ ನಗರಸಭೆ ನೀರಿಗಾಗಿ ₹ 95 ಲಕ್ಷ ಖರ್ಚು ಮಾಡಲಾಗಿದೆ ಎಂದು ಹೇಳಿಕೆ ಕೊಟ್ಟಿದೆ. ಕಳೆದ ಬಾರಿ ಕೊಡಂಕೂರು ವಾರ್ಡ್‌ಗೆ 5, 6 ಟ್ಯಾಂಕರ್‌ನಷ್ಟು ಮಾತ್ರ ನೀರು ಪೂರೈಕೆಯಾಗಿದೆ. ಇದನ್ನು ನೋಡಿದರೆ ಸಾರ್ವಜನಿಕರ ತೆರಿಗೆ ಹಣವನ್ನು ಲೂಟಿ ಮಾಡುವ ತಂತ್ರವಾಗಿರುವಂತೆ ಕಾಣುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡುತ್ತೇನೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಕೊಡಂಕೂರು ನಿವಾಸಿ ಅಶೋಕ್‌ ಪೂಜಾರಿ, ರಾಜೇಶ್‌ ಪಿರೇರಾ ಬ್ರಹ್ಮಾವರ, ಮಾಸ್ ಇಂಡಿಯಾ ಮಹಿಳಾ ಪ್ರತಿನಿಧಿ ಗೀತಾ ಪೂಜಾರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.