ADVERTISEMENT

ವಾರಾಣಸಿಯಲ್ಲಿ ಮೋದಿ ಕೇಜ್ರಿವಾಲ್‌ ಹಣಾಹಣಿ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2014, 19:30 IST
Last Updated 25 ಮಾರ್ಚ್ 2014, 19:30 IST
ವಾರಾಣಸಿಯಲ್ಲಿ ಮಂಗಳವಾರ ಪ್ರಚಾರ ನಡೆಸುತ್ತಿದ್ದ ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್‌ ಅವರ ಮೇಲೆ  ಬಿಜೆಪಿ ಕಾರ್ಯಕರ್ತರು ಮೊಟ್ಟೆ ಎಸೆದು, ಕಪ್ಪು ಮಸಿ ಚೆಲ್ಲಿದರು 	– ಪಿಟಿಐ ಚಿತ್ರ
ವಾರಾಣಸಿಯಲ್ಲಿ ಮಂಗಳವಾರ ಪ್ರಚಾರ ನಡೆಸುತ್ತಿದ್ದ ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್‌ ಅವರ ಮೇಲೆ ಬಿಜೆಪಿ ಕಾರ್ಯಕರ್ತರು ಮೊಟ್ಟೆ ಎಸೆದು, ಕಪ್ಪು ಮಸಿ ಚೆಲ್ಲಿದರು – ಪಿಟಿಐ ಚಿತ್ರ   

ವಾರಾಣಸಿ (ಪಿಟಿಐ/ಐಎಎನ್‌ಎಸ್‌):  ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಸ್ಪರ್ಧಿಸುತ್ತಿರುವ ಉತ್ತರ ಪ್ರದೇಶದ ವಾರಾಣಸಿ ಲೋಕಸಭಾ ಕ್ಷೇತ್ರದಿಂದ ತಾವು ಕಣಕ್ಕೆ ಇಳಿಯುವುದಾಗಿ  ದೆಹಲಿ ಮಾಜಿ ಮುಖ್ಯಮಂತ್ರಿ, ಎಎಪಿ ಮುಖ್ಯಸ್ಥ ಅರವಿಂದ್‌ ಕೇಜ್ರಿವಾಲ್‌ ಮಂಗಳವಾರ ಘೋಷಿಸಿದ್ದಾರೆ.

ಇಲ್ಲಿ ನಡೆದ ಪಕ್ಷದ ಸಮಾವೇಶದಲ್ಲಿ ಮಾತನಾಡಿದ ಕೇಜ್ರಿವಾಲ್‌, ‘ಹಿಂದೂಗಳ ಪವಿತ್ರ ನಗರವಾದ ವಾರಾಣಸಿ­ಯಿಂದಲೇ  ಮೋದಿ ವಿರುದ್ಧ ಸ್ಪರ್ಧಿಸುವ ಸವಾಲು ಸ್ವೀಕರಿ­ಸುವೆ’ ಎಂದರು. ಪಕ್ಷದ  ಚಿಹ್ನೆಯಾದ ಪೊರಕೆಯೊಂದಿಗೆ  ಜಮಾಯಿಸಿದ್ದ ನೂರಾರು ಕಾರ್ಯಕರ್ತರು ಹರ್ಷೋದ್ಗಾರ­ಗಳ ಮೂಲಕ ಇದಕ್ಕೆ ಸಮ್ಮತಿ ನೀಡಿದರು.

ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ದಿಗ್ವಿಜಯ್ ಸಿಂಗ್ ಅವರನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ. ಮೋದಿ ಸ್ಪರ್ಧಿಸಿರುವ ಇನ್ನೊಂದು ಕ್ಷೇತ್ರವಾದ ಗುಜರಾತ್‌ನ ವಡೋದರಾದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಧುಸೂದನ ಮಿಸ್ತ್ರಿ ಅವರಿಗೆ ಕಾಂಗ್ರೆಸ್‌ ಟಿಕೆಟ್ ನೀಡಲಾಗಿದೆ.

ಮೋದಿ, ರಾಹುಲ್‌ ವಿರುದ್ಧ ವಾಗ್ದಾಳಿ: ‘ಪ್ರಧಾನಿಯಾಗುವ ಹಪಾಹಪಿಯಲ್ಲಿ ಮೋದಿ ಕಳಂಕಿತ ರಾಜಕಾರಣಿಗಳ ಜತೆ ಸಖ್ಯ ಮಾಡಿಕೊಂಡಿದ್ದಾರೆ. ಅವರು ಕಾರ್ಪೊರೇಟ್‌ ಕ್ಷೇತ್ರದ ಏಜೆಂಟರು. ಗುಜರಾತ್‌‌ ಅಭಿವೃದ್ಧಿ ಕುರಿತ ವ್ಯಾಖ್ಯಾನಗಳೆಲ್ಲ ಕಟ್ಟುಕಥೆಯಾಗಿವೆ’ ಎಂದು ಕೇಜ್ರಿವಾಲ್‌ ವಾರಾಣಸಿಯಲ್ಲಿ ಮೂದಲಿಸಿದರು.

ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರತ್ತಲೂ ಮಾತಿನ ಬಾಣ ಪ್ರಯೋಗಿಸಿದ ಅವರು, ‘ಕಾಂಗ್ರೆಸ್‌ ಚಕ್ರವರ್ತಿ ಕೂಡ ಮೋದಿ ಅವರಿಗಿಂತ ಭಿನ್ನವಾಗಿಲ್ಲ. ಇವರಿಬ್ಬರೂ ಒಂದೇ ನಾಣ್ಯದ ಎರಡು ಮುಖಗಳು’ ಎಂದು ಲೇವಡಿ ಮಾಡಿದರು.

‘ಕಾಂಗ್ರೆಸ್‌ ಮಂದಿ ತಮ್ಮ ಪಕ್ಷ ತೊರೆದು ಬಿಜೆಪಿ ಸೇರುತ್ತಿದ್ದಾರೆ. ಹೀಗಿರುವಾಗ  ಈ ಎರಡೂ ಪಕ್ಷಗಳ ಮಧ್ಯೆ ಯಾವ ವ್ಯತ್ಯಾಸವೂ ಕಾಣದು. ಯುಪಿಎ ಹತ್ತು ವರ್ಷಗಳ ಆಡಳಿತಕ್ಕೆ ಜನ ರೋಸಿ ಹೋಗಿದ್ದಾರೆ. ಈ ಬಾರಿ ಯುಪಿಎ ಹಾಗೂ ಎನ್‌ಡಿಎ ಮೈತ್ರಿಕೂಟಗಳಿಗೆ ಮಣ್ಣುಮುಕ್ಕಿ­ಸಬೇಕು. ದೇಶದಲ್ಲಿ ಹೊಸ ರೀತಿಯ ರಾಜಕೀಯಕ್ಕೆ ಅವಕಾಶ ಮಾಡಿಕೊಡ­ಬೇಕು’ ಎಂದು  ಕರೆ ನೀಡಿದರು.

‘ನನ್ನ ಸಹೋದ್ಯೋಗಿ ಕುಮಾರ್‌ ವಿಶ್ವಾಸ್‌ ಅವರು ಉತ್ತರಪ್ರದೇಶದ ಅಮೇಠಿಯಿಂದ ರಾಹುಲ್‌‌ ಗಾಂಧಿ ವಿರುದ್ಧ ಸೆಣಸುತ್ತಿದ್ದಾರೆ. ನಾನು ವಾರಾಣಸಿಯಿಂದ ಮೋದಿ ವಿರುದ್ಧ ಅಖಾಡಕ್ಕೆ ಇಳಿಯುತ್ತಿದ್ದೇನೆ. ರಾಹುಲ್‌ ಹಾಗೂ ಮೋದಿ ಸೋತಲ್ಲಿ ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಮೂಡಲಿದೆ’ ಎಂದು ವಿಶ್ಲೇಷಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.