
ಸೋನಾಪುರ/ಕೋಲ್ಕತ್ತ (ಪಶ್ಚಿಮ ಬಂಗಾಳ): ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಲೋಕಸಭಾ ಚುನಾವಣೆಯ ನಂತರ ಪ್ರಜಾತಾಂತ್ರಿಕ ರೀತಿಯಲ್ಲಿ ಆಯ್ಕೆಯಾಗಿರುವ ಟಿಎಂಸಿ ಸರ್ಕಾರವನ್ನು ಉರುಳಿಸುವ ಅದರ ಕನಸು ಈಡೇರುವುದಿಲ್ಲ ಎಂದು ಪ್ರತಿಪಾದಿಸಿದರು.
ಜಾದವ್‌ಪುರ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ನಡೆಸಿದ ಅವರು, ‘ಟಿಎಂಸಿ ಸರ್ಕಾರವು ಕೊನೆಯ ದಿನಗಳನ್ನು ಎಣಿಸುತ್ತಿದೆ ಎನ್ನುವ ಅವರ ಹೇಳಿಕೆ ಬೆದರಿಕೆ ಒಡ್ಡುವಂಥದ್ದಾಗಿದೆ’ ಎಂದು ಹೇಳಿದರು.
‘ಜನರಿಂದ ಆಯ್ಕೆಯಾದ ಸರ್ಕಾರ ಉರುಳಿಸುವ ಧೈರ್ಯವನ್ನು ಬಿಜೆಪಿ ತೋರಬಾರದು. ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವ ಅವರ ಆಶಯ ಈಡೇರುವುದಿಲ್ಲ. ಏಕೆಂದರೆ, ಜನರ ತೀರ್ಪು ಟಿಎಂಸಿ ಪರವಾಗಿದೆ’ ಎಂದು ಅಭಿಪ್ರಾಯಪಟ್ಟರು.
ರಾಜ್ಯದಲ್ಲಿ ಬಿಜೆಪಿಯನ್ನು ಟಿಎಂಸಿ ಏಕಾಂಗಿಯಾಗಿ ಎದುರಿಸುತ್ತಿದ್ದು, ಕಾಂಗ್ರೆಸ್ ಮತ್ತು ಸಿಪಿಎಂ ಕೇಸರಿ ಪಾಳಯದೊಂದಿಗೆ ಶಾಮೀಲಾಗಿವೆ ಎಂದು ಆರೋಪಿಸಿದರು.
‘ಮೋದಿ ಸರ್ಕಾರವು ಅದಾನಿ, ಅಂಬಾನಿ ಅಂತಹವರ ಪರವಾಗಿದ್ದು, ಅವರಿಗೆ ರಕ್ಷಣಾ ವಲಯದಲ್ಲಿ ಪಾಲುದಾರಿಕೆ ನೀಡಿ, ಪ್ರಮುಖ ಸಾರ್ವಜನಿಕ ಉದ್ದಿಮೆಗಳನ್ನು ಮಾರಾಟ ಮಾಡಿತು. ಅಡುಗೆ ಅನಿಲ ಸಿಲಿಂಡರ್ ಅನ್ನು ಸಾವಿರದ ಗಡಿ ದಾಟಿಸಿತು’ ಎಂದು ವಾಗ್ದಾಳಿ ನಡೆಸಿದರು.
ಪ್ರಧಾನಿ ಅಲ್ಲ ‘ಬಿಜೆಪಿ ನಾಯಕ’
ಚುನಾವಣಾ ಪ್ರಚಾರದ ವೇಳೆ ನರೇಂದ್ರ ಮೋದಿ ಅವರನ್ನು ಬಿಜೆಪಿ ನಾಯಕ ಎನ್ನಬೇಕೇ ಹೊರತು ಪ್ರಧಾನಿ ಎಂದು ಅಲ್ಲ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರತಿಪಾದಿಸಿದ್ದಾರೆ.
ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದ ಅವರು ‘ಮೋದಿ ಅವರಿಗೆ ಪ್ರಚಾರದಲ್ಲಿ ಪಾಲ್ಗೊಳ್ಳುವ ಎಲ್ಲ ಹಕ್ಕೂ ಇದೆ. ಆದರೆ ಪಕ್ಷದ ಪ್ರಚಾರ ಜಾಹೀರಾತುಗಳಲ್ಲಿ ಅವರನ್ನು ಪ್ರಧಾನಿ ಎಂದು ಉಲ್ಲೇಖಿಸಿರುವುದು ನನಗೆ ಆಶ್ಚರ್ಯಕರವಾಗಿದೆ. ಇದು ವಿಧಾನಸಭಾ ಚುನಾವಣೆ ಅಲ್ಲದಿದ್ದರೂ ನಮ್ಮ ಪ್ರಚಾರದ ನಿರ್ವಹಣೆ ಮಾಡುವವರು ನನ್ನ ಬಗ್ಗೆ ಟಿಎಂಸಿ ಅಧ್ಯಕ್ಷೆ ಎಂದು ಉಲ್ಲೇಖಿಸುತ್ತಾರೆ. ನಾನು ಚುನಾವಣಾ ನೀತಿ ಸಂಹಿತೆಗೆ ಬದ್ಧ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.