ADVERTISEMENT

ತನಿಖಾ ಸಂಸ್ಥೆಗಳಂತೆ ಚುನಾವಣಾ ಆಯೋಗವನ್ನೂ BJP ದುರ್ಬಳಕೆ ಮಾಡಿಕೊಳ್ಳುತ್ತಿದೆ: AAP

ಪಿಟಿಐ
Published 6 ಏಪ್ರಿಲ್ 2024, 10:03 IST
Last Updated 6 ಏಪ್ರಿಲ್ 2024, 10:03 IST
<div class="paragraphs"><p>ಅತಿಶಿ</p></div>

ಅತಿಶಿ

   

ಪಿಟಿಐ ಚಿತ್ರ

ನವದೆಹಲಿ: ‘ಪ್ರಸಕ್ತ ಚುನಾವಣೆಯಲ್ಲಿ ಎಎಪಿಯನ್ನು ಎದುರಿಸಲು ತನಿಖಾ ಸಂಸ್ಥೆಗಳನ್ನು ಮುಂದಿಟ್ಟುಕೊಂಡು ಆಟವಾಡುವುದನ್ನು ಬಿಜೆಪಿ ಕೈಬಿಡಬೇಕು’ ಎಂದು ಎಎಪಿ ನಾಯಕಿ ಅತಿಶಿ ಎಚ್ಚರಿಕೆ ನೀಡಿದ್ದಾರೆ.

ADVERTISEMENT

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ‘ಚುನಾವಣಾ ಆಯೋಗ ಸಹ ಭಾರತೀಯ ಜನತಾ ಪಾರ್ಟಿಯ ಇಚ್ಛೆಯಂತೆಯೇ ಕಾರ್ಯ ನಿರ್ವಹಿಸುತ್ತಿದೆ. ಸಿಬಿಐ, ಐಟಿ ಹಾಗೂ ಜಾರಿ ನಿರ್ದೇಶನಾಲಯ ಹಾಗೂ ಇತರ ತನಿಖಾ ಸಂಸ್ಥೆಗಳಂತೆಯೇ ಚುನಾವಣಾ ಆಯೋಗವನ್ನೂ ಬಿಜೆಪಿ ದುರ್ಬಳಕೆ ಮಾಡಿಕೊಳ್ಳುತ್ತಿದೆ. ತನಿಖಾ ಸಂಸ್ಥೆಗಳಂತೆಯೇ ಈಗ ಚುನಾವಣಾ ಆಯೋಗವೂ ಎಎಪಿ ನಾಯಕರನ್ನು ಗುರಿಯಾಗಿಸಿಕೊಂಡು ನೋಟಿಸ್ ನೀಡುತ್ತಿದೆ’ ಎಂದು ಅತಿಶಿ ಆರೋಪಿಸಿದ್ದಾರೆ.

‘ಬಿಜೆಪಿ ಮುಖಂಡರ ವಿರುದ್ಧ ಹಣದ ಅಕ್ರಮ ವರ್ಗಾವಣೆಯಲ್ಲಿ ಜಾರಿ ನಿರ್ದೇಶನಾಲಯವು ಯಾವ ರೀತಿಯ ಕ್ರಮವನ್ನೂ ಕೈಗೊಂಡಿಲ್ಲ. ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಚುನಾವಣಾ ಬಾಂಡ್ ರೂಪದಲ್ಲಿ ಬಿಜೆಪಿ ನಾಯಕರಿಗೆ ಕೋಟಿಗಟ್ಟಲೆ ಹಣ ಸಂದಾಯವಾಗಿದೆ. ಆದರೆ ಜಾರಿ ನಿರ್ದೇಶನಾಲಯವು ಈವರೆಗೂ ಬಿಜೆಪಿ ನಾಯಕರಿಗೆ ಯಾವ ನೋಟಿಸ್ ಕೂಡಾ ನೀಡಿಲ್ಲ’ ಎಂದು ಅತಿಶಿ ದೂರಿದ್ದಾರೆ.

‘ಹಣದ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕರ ವಿರುದ್ಧ ಯಾವ ಬಗೆಯ ಕ್ರಮಗಳನ್ನು ಜಾರಿ ನಿರ್ದೇಶನಾಲಯ (ED) ಕೈಗೊಂಡಿದೆ ಎಂಬುದನ್ನು ಬಹಿರಂಗಪಡಿಸಬೇಕು. ಅನುಮಾನದ ಆಧಾರದ ಮೇಲೆ ಜಾರಿ ನಿರ್ದೇಶನಾಲಯವು ಎಎಪಿ ಮುಖಂಡರಾದ ಸಂಜಯ ಸಿಂಗ್, ಮನೀಶ್ ಸಿಸೋಡಿಯಾ ಹಾಗೂ ಅರವಿಂದ ಕೇಜ್ರಿವಾಲ್ ಅವರನ್ನು ಬಂಧಿಸಿದೆ. ಆದರೆ ಇವರ ವಿರುದ್ಧ ಹಣ ಅಕ್ರಮ ವರ್ಗಾವಣೆಯ ಯಾವುದೇ ಕುರುಹು ಕೂಡಾ ಸಿಕ್ಕಿಲ್ಲ’ ಎಂದಿದ್ದಾರೆ.

ಬಿಜೆಪಿ ನಾಯಕರು ತಮ್ಮನ್ನು ಸಂಪರ್ಕಿಸಿದ್ದು, ಪಕ್ಷವನ್ನು ಸೇರು ಇಲ್ಲವೇ ತಿಂಗಳ ಒಳಗಾಗಿ ಜಾರಿ ನಿರ್ದೇಶನಾಲಯದ ಬಂಧನ ಎದುರಿಸು ಎಂಬ ಅತಿಶಿ ಅವರ ಹೇಳಿಕೆಗೆ ಚುನಾವಣಾ ಆಯೋಗವು ನೋಟಿಸ್ ಜಾರಿಗೊಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.