ADVERTISEMENT

ಹಿಮಾಚಲ ಪ್ರದೇಶ | 9 ಮಾಜಿ ಶಾಸಕರು ಬಿಜೆಪಿಗೆ; ಮುಂದುವರಿದ ರಾಜಕೀಯ ಬಿಕ್ಕಟ್ಟು

ಪಿಟಿಐ
Published 23 ಮಾರ್ಚ್ 2024, 9:39 IST
Last Updated 23 ಮಾರ್ಚ್ 2024, 9:39 IST
<div class="paragraphs"><p>ಕೇಂದ್ರ ಸಚಿವ ಅನುರಾಗ್ ಠಾಕೂರ್, ಮಾಜಿ ಮುಖ್ಯಮಂತ್ರಿ ಜೈರಾಮ್ ಠಾಕೂರ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಸಮ್ಮುಖದಲ್ಲಿ ಹಿಮಾಚಲ ಪ್ರದೇಶದ&nbsp; ಮಾಜಿ ಶಾಸಕರು ನವದೆಹಲಿಯಲ್ಲಿ ಶನಿವಾರ ಬಿಜೆಪಿ ಸೇರ್ಪಡೆಯಾದರು&nbsp;</p></div>

ಕೇಂದ್ರ ಸಚಿವ ಅನುರಾಗ್ ಠಾಕೂರ್, ಮಾಜಿ ಮುಖ್ಯಮಂತ್ರಿ ಜೈರಾಮ್ ಠಾಕೂರ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಸಮ್ಮುಖದಲ್ಲಿ ಹಿಮಾಚಲ ಪ್ರದೇಶದ  ಮಾಜಿ ಶಾಸಕರು ನವದೆಹಲಿಯಲ್ಲಿ ಶನಿವಾರ ಬಿಜೆಪಿ ಸೇರ್ಪಡೆಯಾದರು 

   

ಪಿಟಿಐ ಚಿತ್ರ

ನವದೆಹಲಿ: ಹಿಮಾಚಲ ಪ್ರದೇಶದ ಕಾಂಗ್ರೆಸ್‌ನ ಆರು ಅನರ್ಹ ಶಾಸಕರು ಹಾಗೂ ವಿಧಾನಸಭೆಗೆ ರಾಜೀನಾಮೆ ನೀಡಿದ್ದ ಮೂವರು ಪಕ್ಷೇತರ ಶಾಸಕರು ಸೇರಿ ಒಟ್ಟು 9 ಮಾಜಿ ಶಾಸಕರು ಶನಿವಾರ ಬಿಜೆಪಿ ಸೇರ್ಪಡೆಯಾದರು.

ADVERTISEMENT

ಕೇಂದ್ರ ಸಚಿವ ಅನುರಾಗ್ ಠಾಕೂರ್, ಮಾಜಿ ಮುಖ್ಯಮಂತ್ರಿ ಜೈರಾಮ್ ಠಾಕೂರ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಮತ್ತು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ರಾಜೀವ್ ಬಿಂದಾಲ್ ಸಮ್ಮುಖದಲ್ಲಿ ಶಾಸಕರು ಬಿಜೆಪಿ ಸೇರಿದರು.

ಬಳಿಕ ಮಾತನಾಡಿದ ಅನುರಾಗ್ ಠಾಕೂರ್ ಮಾತನಾಡಿ, ‘ಪಕ್ಷವು ರಾಜ್ಯದಲ್ಲಿ ಮತ್ತಷ್ಟು ಬಲಿಷ್ಠವಾಗಲಿದ್ದು, ಆಡಳಿತಾರೂಢ ಕಾಂಗ್ರೆಸ್, ಜನರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ’ ಎಂದು ಆರೋಪಿಸಿದರು.

‘ಕಾಂಗ್ರೆಸ್ ಶಾಸಕರಾಗಿದ್ದರೂ, ಸರ್ಕಾರದ ವಿರುದ್ಧ ಜನರಲ್ಲಿರುವ ಸಿಟ್ಟನ್ನು ತೋರಿಸಲು ಇವರೆಲ್ಲ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿದ್ದರು’ ಎಂದು ಹೇಳಿದರು.

ರಾಜ್ಯ ವಿಧಾನಸಭೆಯಲ್ಲಿ ಹಣಕಾಸು ಮಸೂದೆ ಮಂಡನೆಗೆ ಸರ್ಕಾರದ ಪರ ಮತದಾನ ಮಾಡಬೇಕೆಂಬ ಪಕ್ಷದ ವಿಪ್ ಉಲ್ಲಂಘಿಸಿದ್ದ ಆರೋಪದಲ್ಲಿ ಸುಧೀರ್‌ ಶರ್ಮಾ, ರವಿ ಠಾಕೂರ್, ರಾಜೀಂದರ್ ರಾಣಾ, ಇಂದೇರ್ ದತ್ ಲಖನ್‌ಪಾಲ್, ಚೇತನ್ಯ ಶರ್ಮಾ ಮತ್ತು ದೇವಿಂದರ್‌ ಕುಮಾರ್‌ ಭುಟ್ಟೊ ಅವರನ್ನು ಫೆಬ್ರುವರಿ 29ರಂದು ಸಭಾಧ್ಯಕ್ಷ ಕುಲದೀಪ್ ಸಿಂಗ್ ಪಟಾನಿಯಾ ಅನರ್ಹಗೊಳಿಸಿದ್ದರು.

ಚುನಾವಣಾ ಆಯೋಗವು ಇವರ ಕ್ಷೇತ್ರಗಳಿಗೆ ಉಪ ಚುನಾವಣೆ ದಿನಾಂಕ ಘೋಷಣೆ ಮಾಡಿದೆ.

ಪಕ್ಷೇತರ ಶಾಸಕರಾದ ಆಶಿಷ್‌ ಶರ್ಮಾ, ಹೊಶಿಯಾರ್‌ ಸಿಂಗ್‌ ಮತ್ತು ಕೆ.ಎಲ್‌.ಠಾಕುರ್‌ ಅವರು ತಮ್ಮ ಶಾಸಕತ್ವಕ್ಕೆ ಶುಕ್ರವಾರ ರಾಜೀನಾಮೆ ನೀಡಿದ್ದರು.

ಇನ್ನೂ ಕೆಲವು ಕಾಂಗ್ರೆಸ್‌ ಶಾಸಕರು ಬಿಜೆಪಿ ಸೇರ್ಪಡೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದ್ದು, ಹಿಮಾಚಲ ಪ್ರದೇಶ ಸರ್ಕಾರಕ್ಕೆ ಆತಂಕ ಎದುರಾಗಿದೆ.

ಹಿಮಾಚಲ ಪ್ರದೇಶ ವಿಧಾನಸಭೆಯು 68 ಸದಸ್ಯರ ಬಲ ಹೊಂದಿದೆ. ಆರು ಶಾಸಕರನ್ನು ಅನರ್ಹಗೊಳಿಸುವುದಕ್ಕೂ ಮೊದಲು ಕಾಂಗ್ರೆಸ್‌ 40 ಹಾಗೂ ಬಿಜೆಪಿ 25 ಶಾಸಕರನ್ನು ಹೊಂದಿದ್ದವು. ಮೂವರು ಪಕ್ಷೇತರ ಶಾಸಕರು ಇದ್ದರು.

ಆದರೆ, ಇಲ್ಲಿರುವ ಏಕೈಕ ರಾಜ್ಯಸಭೆ ಸ್ಥಾನಕ್ಕೆ ಕಳೆದ ತಿಂಗಳು ನಡೆದ ಚುನಾವಣೆಯಲ್ಲಿ, ಕಾಂಗ್ರೆಸ್‌ನ (ಈಗ ಬಿಜೆಪಿ ಸೇರಿರುವ) ಆರು ಮಂದಿ ಹಾಗೂ ಮೂವರು ಪಕ್ಷೇತರ ಶಾಸಕರು ಬಿಜೆಪಿ ಅಭ್ಯರ್ಥಿ ಪರ ಮತ ಚಲಾಯಿಸಿದ್ದರು.

ಇದರಿಂದಾಗಿ, ಕಾಂಗ್ರೆಸ್‌ ಹಾಗೂ ಬಿಜೆಪಿ ಅಭ್ಯರ್ಥಿಗಳು ತಲಾ 34 ಮತ ಗಳಿಸಿದ್ದರು. ಹೀಗಾಗಿ, ವಿಜೇತರನ್ನು ಘೋಷಿಸಲು ಚೀಟಿ ಎತ್ತಲಾಗಿತ್ತು. ಆಗ ಬಿಜೆಪಿಯ ಹರ್ಷ ಮಹಾಜನ್‌ ಅವರಿಗೆ ಕಾಂಗ್ರೆಸ್‌ ಅಭ್ಯರ್ಥಿ ಅಭಿಷೇಕ್‌ ಮನು ಸಿಂಘ್ವಿ ಎದುರು ಅದೃಷ್ಟ ಒಲಿದಿತ್ತು. ಇದಾದ ಬಳಿಕ, ಮುಖ್ಯಮಂತ್ರಿ ಸುಖ್ವಿಂದರ್‌ ಸಿಂಗ್‌ ಸುಖು ಸರ್ಕಾರದ ಅಸ್ತಿತ್ವಕ್ಕೆ ಸವಾಲು ಎದುರಾಗಿದೆ.

ಅಡ್ಡ ಮತದಾನ ಮಾಡಿದ ಆರು ಶಾಸಕರನ್ನು ಪಕ್ಷದ ವಿಪ್‌ ಉಲ್ಲಂಘಿಸಿದ ಆರೋಪದಲ್ಲಿ ಅನರ್ಹಗೊಳಿಸಲಾಗಿದೆಯಾದರೂ, ಅಪಾಯ ಸಂಪೂರ್ಣವಾಗಿ ದೂರವಾಗಿಲ್ಲ.

ಶಾಸಕರ ಅನರ್ಹತೆ ಮತ್ತು ಪಕ್ಷೇತರ ಶಾಸಕರ ರಾಜೀನಾಮೆಯಿಂದಾಗಿ, ಸದ್ಯ ವಿಧಾನಸಭೆಯ ಬಲ 59ಕ್ಕೆ ಕುಸಿದಿದೆ. ಸದ್ಯ ಕಾಂಗ್ರೆಸ್‌ 34 ಮತ್ತು ಬಿಜೆಪಿ 25 ಸದಸ್ಯರ ಬಲ ಹೊಂದಿದ್ದು, ಜೂನ್‌ 1ರಂದು ನಡೆಯುವ ಉಪಚುನಾವಣೆ ಬಳಿಕ ಅಧಿಕಾರ ಯಾರಿಗೆ ಒಲಿಯಲಿದೆ ಎಂಬುದನ್ನು ಕಾದುನೋಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.