ADVERTISEMENT

ಭಾರತದಲ್ಲಿ ನ್ಯಾಯಯುತ ಚುನಾವಣೆಯ ನಿರೀಕ್ಷೆ: ವಿಶ್ವಸಂಸ್ಥೆ

ಕೇಜ್ರಿವಾಲ್ ಬಂಧನ, ‘ಕೈ’ ಪಕ್ಷದ ಖಾತೆ ಜಪ್ತಿ ಹಿನ್ನಲೆ ಭಾರತದ ಸ್ಥಿತಿ ಬಗ್ಗೆ ವಿಶ್ವಸಂಸ್ಥೆ ಪ್ರತಿಕ್ರಿಯೆ

ಪಿಟಿಐ
Published 29 ಮಾರ್ಚ್ 2024, 15:41 IST
Last Updated 29 ಮಾರ್ಚ್ 2024, 15:41 IST
ವಿಶ್ವಸಂಸ್ಥೆಯ ಲಾಂಛನ
ವಿಶ್ವಸಂಸ್ಥೆಯ ಲಾಂಛನ   

ವಿಶ್ವಸಂಸ್ಥೆ: ‘ಸಾರ್ವತ್ರಿಕ ಚುನಾವಣೆ ನಡೆಯುತ್ತಿರುವ ಭಾರತದಲ್ಲಿ ‘ಪ್ರತಿಯೊಬ್ಬರ ಹಕ್ಕುಗಳ’ ರಕ್ಷಣೆ ಆಗಲಿದೆ ಹಾಗೂ ಮುಕ್ತ– ನ್ಯಾಯಯುತ ಚುನಾವಣೆ ನಡೆಯಲಿದೆ ಎಂಬ ನಿರೀಕ್ಷೆ ಇದೆ’ ಎಂದು ವಿಶ್ವಸಂಸ್ಥೆಯು ಹೇಳಿದೆ. 

ಭಾರತದಲ್ಲಿ ಚುನಾವಣೆಗೆ ಮುನ್ನ ರಾಜಕೀಯ ಅನಿಶ್ಚಿತತೆ ತಲೆದೋರಿದೆ ಎಂಬ ಹಿನ್ನೆಲೆಯಲ್ಲಿ ಕೇಳಲಾದ ಪ್ರಶ್ನೆಗೆ, ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸ್ಟೀಫನ್ ಡುಜಾರಿಕ್ ಗುರುವಾರ ಈ ಪ್ರತಿಕ್ರಿಯೆ ನೀಡಿದರು.

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಬಂಧನ ಹಾಗೂ ಕಾಂಗ್ರೆಸ್‌ ಪಕ್ಷದ ಬ್ಯಾಂಕ್‌ ಖಾತೆಗಳನ್ನು ಜಪ್ತಿ ಮಾಡಿರುವ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಗಮನಸೆಳೆಯಲಾಗಿತ್ತು.

ADVERTISEMENT

‘ಚುನಾವಣೆ ನಡೆಯಲಿರುವ ಎಲ್ಲ ದೇಶಗಳಂತೆ ಭಾರತದಲ್ಲಿಯೂ ನಾಗರಿಕರ ಹಕ್ಕುಗಳನ್ನೂ ಒಳಗೊಂಡಂತೆ ಎಲ್ಲರ ಹಕ್ಕುಗಳ ರಕ್ಷಣೆ ಆಗಲಿದೆ ಹಾಗೂ ಪ್ರತಿಯೊಬ್ಬರೂ ಮತಹಕ್ಕು ಚಲಾಯಿಸುವಂತಹ ಮುಕ್ತ– ನ್ಯಾಯಸಮ್ಮತ ವಾತಾವರಣ ನಿರ್ಮಾಣ ಆಗಲಿದೆ ಎಂಬ ವಿಶ್ವಾಸ ನಮ್ಮದಾಗಿದೆ’  ಎಂದು ಅವರು ಪ್ರತಿಕ್ರಿಯಿಸಿದರು.

ಕೇಜ್ರಿವಾಲ್‌ ಅವರ ಬಂಧನ ಹಾಗೂ ಕಾಂಗ್ರೆಸ್‌ ಪಕ್ಷದ ಬ್ಯಾಂಕ್‌ ಖಾತೆಗಳ ಜಪ್ತಿ ಕುರಿತಂತೆ ಅಮೆರಿಕವು ತನ್ನ ನಿಲುವು ಪುನರುಚ್ಚರಿಸಿದ ಹಿಂದೆಯೇ ವಿಶ್ವಸಂಸ್ಥೆ ಕೂಡ ಅದೇ ಧಾಟಿಯಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದೆ.

ಅಮೆರಿಕದ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದ ಭಾರತ ಸರ್ಕಾರ, ಆ ದೇಶದ ರಾಯಭಾರಿಯನ್ನು ಕರೆಸಿ ತನ್ನ ಪ್ರತಿಭಟನೆ ದಾಖಲಿಸಿತ್ತು. ನಂತರವೂ ಅಮೆರಿಕ ಮತ್ತೆ ಗುರುವಾರ ತನ್ನ ಅಭಿಪ್ರಾಯ ಪುನರುಚ್ಚರಿಸಿತ್ತು. ಕೇಜ್ರಿವಾಲ್ ಪ್ರಕರಣದಲ್ಲಿ ಕಾಲಮಿತಿ ವಿಚಾರಣೆ ಹಾಗೂ ನ್ಯಾಯಯುತ ಚುನಾವಣೆ ಬಗ್ಗೆ ನಿಲುವು ಪ್ರತಿಪಾದಿಸಿತ್ತು.

‘ಭಾರತವು ತನ್ನ ರಾಯಭಾರಿಯನ್ನು ಕರೆಸಿ ಪ್ರತಿಭಟಿಸಿದೆ ಎಂಬ ವರದಿಗೆ ಪ್ರತಿಕ್ರಿಯಿಸಿ, ‘ಖಾಸಗಿ ಚರ್ಚೆ ಕುರಿತು ಪ್ರತಿಕ್ರಿಯಿಸುವುದಿಲ್ಲ. ನ್ಯಾಯಸಮ್ಮತ ಚುನಾವಣೆ ಕುರಿತ ನಿಲುವನ್ನು ಪುನರುಚ್ಚರಿಸುತ್ತೇವೆ. ಬಹುಶಃ ಇದಕ್ಕೆ ಯಾರ ಆಕ್ಷೇಪವೂ ಇರಲಾರದು’ ಎಂದು ವಿದೇಶಾಂಗ ಇಲಾಖೆ ವಕ್ತಾರ ಮ್ಯಾಥ್ಯೂ ಮಿಲ್ಲರ್ ಅವರು ಹೇಳಿದ್ದರು. 

‘ಕೇಜ್ರಿವಾಲ್‌ ಬಂಧನ ಕುರಿತಂತೆ ಅಮೆರಿಕದ ಹೇಳಿಕೆ ಅನಪೇಕ್ಷಿತ. ದೇಶದ ಪ್ರಜಾಸತ್ತಾತ್ಮಕ ಸಂಸ್ಥೆಗಳ ಬಗ್ಗೆ ಹೆಮ್ಮೆ ಇದೆ. ಬಾಹ್ಯ ಪ್ರಭಾವಕ್ಕೆ ಒಳಗಾಗದಂತೆ ಮತದಾರರ ಹಕ್ಕುಗಳ ರಕ್ಷಿಸಲಿದೆ’ ಎಂದು ಭಾರತ ಪ್ರತಿಕ್ರಿಯಿಸಿತ್ತು.

‘ಭಾರತದ ಚುನಾವಣೆ ಮತ್ತು ಕಾನೂನು ಪ್ರಕ್ರಿಯೆ ಕುರಿತಂತೆ ಹೊರಗಿನವರ ಅಭಿಪ್ರಾಯ ಮತ್ತು ಆಪಾದನೆ ಅನಪೇಕ್ಷಿತ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್‌ ಜೈಸ್ವಾಲ್‌ ಪ್ರತಿಕ್ರಿಯಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.