ವಿ.ಕೆ. ಸಿಂಗ್
ಪಿಟಿಐ ಚಿತ್ರ
ಗಾಜಿಯಾಬಾದ್: ಲೋಕಸಭೆ ಚುನಾವಣೆಗೆ ನಾನು ಸ್ಪರ್ಧಿಸುವುದಿಲ್ಲ ಎಂದು ಕೇಂದ್ರ ಸಚಿವ ಹಾಗೂ ಗಾಜಿಯಾಬಾದ್‌ನ ಬಿಜೆಪಿ ಸಂಸದ ( ನಿವೃತ್ತ ಜನರಲ್) ವಿ.ಕೆ. ಸಿಂಗ್ ಹೇಳಿದ್ದಾರೆ.
ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ‘ಸೈನಿಕನಾಗಿ ನನ್ನ ಇಡೀ ಜೀವನವನ್ನು ದೇಶದ ಸೇವೆಗೆ ಮುಡಿಪಾಗಿಟ್ಟಿದ್ದೇನೆ. ಕಳೆದ 10 ವರ್ಷಗಳಿಂದ ಗಾಜಿಯಾಬಾದ್ಅನ್ನು ವಿಶ್ವದರ್ಜೆಯ ನಗರವನ್ನಾಗಿ ಮಾಡುವ ಕನಸನ್ನು ನನಸಾಗಿಸಲು ಅವಿರತವಾಗಿ ಶ್ರಮಿಸಿದ್ದೇನೆ. ಗಾಜಿಯಾಬಾದ್ ಜನರು ಹಾಗೂ ಬಿಜೆಪಿ ಕಾರ್ಯಕರ್ತರಿಂದ ಸಿಕ್ಕ ಪ್ರೀತಿ ಅಮೂಲ್ಯವಾಗಿದೆ. ಈ ಬಂಧ ಭಾವನಾತ್ಮಕವಾಗಿ ಬೆಳೆದುಕೊಂಡಿದೆ‘ ಎಂದು ಬರೆದುಕೊಂಡಿದ್ದಾರೆ.
‘ನನಗೆ ಈ ನಿರ್ಧಾರವನ್ನು ತೆಗೆದುಕೊಳ್ಳಲು ಬಹಳ ಕಷ್ಟವಾಯಿತು, ಆದರೆ ಹೊಸ ರೀತಿಯಲ್ಲಿ ದೇಶದ ಸೇವೆಗೆ ನನ್ನ ಜೀವನವನ್ನು ಸಮರ್ಪಿಸಿಕೊಳ್ಳಬೇಕೆಂಬ ನನ್ನ ಅಚಲ ಸಂಕಲ್ಪದಿಂದಾಗಿ ಈ ತೀರ್ಮಾನಕ್ಕೆ ಬಂದಿದ್ದೇನೆ‘. 2024ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಬಿಜೆಪಿಯ ವರಿಷ್ಠರಿಗೂ ಧನ್ಯವಾದ ತಿಳಿಸಿದ್ದಾರೆ.
ಕೇಂದ್ರ ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವ ವಿ.ಕೆ. ಸಿಂಗ್ ಅವರು 2014ರಿಂದ ಗಾಜಿಯಾಬಾದ್ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ.
ಲೋಕಸಭಾ ಚುನಾವಣೆಗೆ ಬಿಜೆಪಿ 5ನೇ ಪಟ್ಟಿ ಬಿಡುಗಡೆ ಮಾಡಿದ್ದು, ವಿ.ಕೆ. ಸಿಂಗ್ ಅವರಿಗೆ ಟಿಕೆಟ್ ನಿರಾಕರಿಸಿದೆ.
ಕೇಂದ್ರ ಸಚಿವ ವಿ.ಕೆ.ಸಿಂಗ್ ಪ್ರತಿನಿಧಿಸುತ್ತಿದ್ದ ಉತ್ತರ ಪ್ರದೇಶದ ಗಾಜಿಯಾಬಾದ್ ಕ್ಷೇತ್ರದಿಂದ ಅತುಲ್ ಗರ್ಗ್ ಅವರಿಗೆ ಅವಕಾಶ ದೊರತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.