ನರೇಂದ್ರ ಮೋದಿ
(ಪಿಟಿಐ ಚಿತ್ರ)
ಮುಂಬೈ: ಪ್ರಧಾನಿ ನರೇಂದ್ರ ಮೋದಿ ಅವರು ಮುಂಬೈನ ಘಾಟ್‌ಕೋಪರ್‌ನಲ್ಲಿ ನಡೆಸಿರುವ ರೋಡ್ ಶೋ ವಿರೋಧ ಪಕ್ಷಗಳ ಟೀಕೆಗೆ ಗುರಿಯಾಗಿದೆ.
ಜಾಹೀರಾತು ಫಲಕ ಕುಸಿದು 16 ಮಂದಿ ಮೃತಪಟ್ಟಿರುವ ಪ್ರದೇಶದಲ್ಲೇ ರೋಡ್ ಶೋ ಹಮ್ಮಿಕೊಳ್ಳುವ ಮೂಲಕ ಜನರಿಗೆ ತೊಂದರೆ ನೀಡಲಾಗಿದೆ ಎಂದು ವಿರೋಧ ಪಕ್ಷಗಳು ಬಿಜೆಪಿ ವಿರುದ್ಧ ಹರಿಹಾಯ್ದಿವೆ.
ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್, ಶಿವಸೇನಾ ಉದ್ಧವ್ ಠಾಕ್ರೆ ಬಣದ ಮುಖಂಡ ಸಂಜಯ್ ರಾವುತ್ ಅವರು ಬಿಜೆಪಿಯ ಈ ನಡೆಯನ್ನು ಟೀಕಿಸಿದ್ದಾರೆ.
‘ಮುಂಬೈನಲ್ಲಿ ರೋಡ್ ಶೋ ನಡೆಸುವುದು ಸರಿಯಲ್ಲ’ ಎಂದು ಶರದ್ ಪವಾರ್ ಹೇಳಿದ್ದಾರೆ.
ಆಡಳಿತಾರೂಢ ‘ಮಹಾಯುತಿ’ ಮೈತ್ರಿಕೂಟಕ್ಕೆ ಸೋಲಿನ ಭೀತಿ ಎದುರಾಗಿದೆ ಎಂದಿರುವ ಸಂಜಯ್ ರಾವುತ್, ‘ಬಿಜೆಪಿಯು ಎಷ್ಟು ಸಂವೇದನಾರಹಿತವಾಗಿದೆ ಎಂಬುದು ರೋಡ್ ಶೋನಿಂದ ಬಹಿರಂಗಗೊಂಡಿದೆ’ ಎಂದಿದ್ದಾರೆ.
‘ಜಾಹೀರಾತು ಫಲಕ ಕುಸಿದು ಮೃತಪಟ್ಟವರ ಕುಟುಂಬದವರ ಗಾಯಕ್ಕೆ ಬಿಜೆಪಿಯು ಉಪ್ಪು ಸವರಿದೆ ಮತ್ತು ಜನರಿಗೆ ಅನನುಕೂಲ ಉಂಟುಮಾಡಿದೆ’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಚಿನ್ ಸಾವಂತ್ ಅವರು ಆರೋಪಿಸಿದ್ದಾರೆ.
‘ಮೃತರ ಕುಟುಂಬದವರು ರೋದಿಸುತ್ತಿದ್ದಾಗ, ಬಿಜೆಪಿ ಮುಖಂಡರು ರೋಡ್ ಶೋ ನಡೆಸಿದ್ದಾರೆ. ಮೋದಿ ಅವರು ಅಲ್ಲೇ ಆಸುಪಾಸಿನಲ್ಲಿದ್ದರು. ರೋಡ್ ಶೋಗಾಗಿ ಮೆಟ್ರೊ ರೈಲು, ರೈಲು ಮತ್ತು ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸುವ ಮೂಲಕ ಮುಂಬೈನ ಜನರಿಗೆ ತೊಂದರೆ ಉಂಟುಮಾಡಲಾಗಿದೆ’ ಎಂದು ಎನ್‌ಸಿಪಿ ಶರದ್ ಪವಾರ್ ಬಣದ ರಾಷ್ಟ್ರೀಯ ವಕ್ತಾರ ಕ್ಲೈಡ್ ಕ್ರಾಸ್ಟೊ ಟೀಕಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.