ADVERTISEMENT

ಲೋಕಸಭೆ ಚುನಾವಣೆ: 45 ಕ್ಷೇತ್ರಗಳಿಗೆ ಕಾಂಗ್ರೆಸ್‌ ಅಭ್ಯರ್ಥಿ ಘೋಷಣೆ

ಪಿಟಿಐ
Published 23 ಮಾರ್ಚ್ 2024, 22:33 IST
Last Updated 23 ಮಾರ್ಚ್ 2024, 22:33 IST
ಕಾಂಗ್ರೆಸ್
ಕಾಂಗ್ರೆಸ್   

ನವದೆಹಲಿ: ಲೋಕಸಭೆ ಚುನಾವಣೆಗಾಗಿ ಕಾಂಗ್ರೆಸ್‌ ಪಕ್ಷ ಶನಿವಾರ ರಾತ್ರಿ ಅಭ್ಯರ್ಥಿಗಳ ನಾಲ್ಕನೇ ಪಟ್ಟಿಯನ್ನು ಪ್ರಕಟಿಸಿದ್ದು, 45 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ. 

ಪ್ರಧಾನಿ ನರೇಂದ್ರ ಮೋದಿ ಅವರು ಸ್ಪರ್ಧಿಸಲಿರುವ ಉತ್ತರ ಪ್ರದೇಶದ ವಾರಾಣಸಿ ಕ್ಷೇತ್ರಕ್ಕೆ ಆ ರಾಜ್ಯದ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಅಜಯ್‌ ರೈ ಅವರನ್ನು ಕಣಕ್ಕಿಳಿಸಿದೆ. ರಾಜಸ್ಥಾನದಲ್ಲಿ ನಾಗೌರ್ ಕ್ಷೇತ್ರವನ್ನು ಹನುಮಾನ್‌ ಬೆನಿವಾಲ್‌ ನೇತೃತ್ವದ ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷಕ್ಕೆ ಬಿಟ್ಟುಕೊಟ್ಟಿದೆ.

ಕಾಂಗ್ರೆಸ್‌ನ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಅವರು ಮಧ್ಯಪ್ರದೇಶದ ರಾಜಘರ್ ಕ್ಷೇತ್ರದಲ್ಲಿ ಮತ್ತು ಹೊಸದಾಗಿ ಪಕ್ಷಕ್ಕೆ ಸೇರಿದ್ದ ಲಾಲ್ ಸಿಂಗ್ ಅವರು ಜಮ್ಮು ಮತ್ತು ಕಾಶ್ಮೀರದ ಉದಂಪುರ್‌ನಿಂದ ಸ್ಪರ್ಧಿಸಲಿದ್ದಾರೆ. 

ADVERTISEMENT

ತಮಿಳುನಾಡಿನಲ್ಲಿ ಶಿವಗಂಗಾ ಕ್ಷೇತ್ರಕ್ಕೆ ಕಾರ್ತಿ ಚಿದಂಬರಂ ಹಾಗೂ ತಿರುವಳ್ಳೂರು ಮೀಸಲು ಕ್ಷೇತ್ರಕ್ಕೆ ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್‌ ಅವರ ಹೆಸರನ್ನು ಘೋಷಿಸಲಾಗಿದೆ. ಸಸಿಕಾಂತ್‌ ಸೆಂಥಿಲ್ ಅವರು ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಕಾರ್ಯತಂತ್ರ ಕುರಿತು ಪ್ರಮುಖವಾಗಿ ಕಾರ್ಯನಿರ್ವಹಿಸಿದ್ದರು.

ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಜೊತೆಗೆ ಕಾಂಗ್ರೆಸ್‌ ಮೈತ್ರಿ ಮಾಡಿಕೊಂಡಿದ್ದು, 17 ಕ್ಷೇತ್ರ
ಗಳಲ್ಲಿ ಸ್ಪರ್ಧಿಸುತ್ತಿದೆ. ಈ ಪೈಕಿ ವಾರಾಣಸಿ ಸೇರಿದಂತೆ 9 ಕ್ಷೇತ್ರಗಳಿಗೆ ಶನಿವಾರ ಅಭ್ಯರ್ಥಿ
ಗಳನ್ನು ಘೋಷಿಸಿತು.

ಅಮ್ರೋಲಾ ಕ್ಷೇತ್ರದಿಂದ ಡ್ಯಾನಿಶ್‌ ಅಲಿ, ಸಹರಣ್‌ಪುರ್‌ನಿಂದ ಇಮ್ರಾನ್‌ ಮಸೂದ್‌, ಕಾನ್ಪುರದಿಂದ ಅಲೋಕ್‌ ಮಿಶ್ರಾ ಅವರನ್ನು ಕಣಕ್ಕಿಳಿಸಿದೆ. ಈ ಮೂಲಕ ಪಕ್ಷವು ಒಟ್ಟು 183 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿದಂತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.