ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ, ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ, ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ
ನವದೆಹಲಿ: ನರೇಂದ್ರ ಮೋದಿ ಅವರು ಸತತ ಮೂರನೇ ಅವಧಿಗೆ ದೇಶದ ಪ್ರಧಾನಿಯಾಗಿ ಇಂದು ರಾತ್ರಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ರಾತ್ರಿ 7.15ಕ್ಕೆ ಸಮಾರಂಭ ನಡೆಯಲಿದೆ. ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ, ಬಿಜೆಪಿ ನಾಯಕರಾದ ಪ್ರಲ್ಹಾದ ಜೋಶಿ, ಶೋಭಾ ಕರಂದ್ಲಾಜೆ, ತಮಿಳುನಾಡಿನಲ್ಲಿ ಸೋಲು ಕಂಡಿರುವ ಬಿಜೆಪಿ ನಾಯಕ ಕೆ.ಅಣ್ಣಾಮಲೈ ಅವರಿಗೆ ಮೋದಿ ಸಂಪುಟದಲ್ಲಿ ಸ್ಥಾನ ಸಿಗಲಿದೆ ಎನ್ನಲಾಗುತ್ತಿದೆ.
ಕಳೆದೆರಡು ಅವಧಿಗಳಲ್ಲಿ ಏಕಾಂಗಿಯಾಗಿಯೇ ಬಹುಮತ ಸಾಧಿಸಿದ್ದ ಬಿಜೆಪಿಗೆ, ನಿರೀಕ್ಷಿತ ಸ್ಥಾನಗಳಲ್ಲಿ ಗೆಲುವು ಸಿಕ್ಕಿಲ್ಲ. ಹೀಗಾಗಿ, ಎನ್‌ಡಿಎ ಮೈತ್ರಿಕೂಟದಲ್ಲಿರುವ ಮಿತ್ರ ಪಕ್ಷಗಳ ಬೆಂಬಲದೊಂದಿಗೆ ಸರ್ಕಾರ ರಚನೆ ಮಾಡುತ್ತಿದೆ.
ಮೋದಿ ಸಂಪುಟಕ್ಕೆ ಸುಮಾರು 30 ಮಂದಿ ಸೇರ್ಪಡೆಯಾಗುವ ಸಾಧ್ಯತೆ ಇದೆ. ಮೊದಲ ಹಂತದಲ್ಲಿ ಮೈತ್ರಿ ಪಕ್ಷಗಳ 12ರಿಂದ 15 ಮಂದಿಗೆ ಅವಕಾಶ ಸಿಗಲಿದೆ ಎನ್ನಲಾಗಿದೆ. ಯಾರಿಗೆಲ್ಲ ಸಚಿವ ಸ್ಥಾನ ಸಿಗಲಿದೆ ಎಂಬುದು ಇನ್ನೂ ಖಚಿತವಾಗಿಲ್ಲ.
ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಅಮಿತ್ ಶಾ ಅವರು, ಸಂಪುಟಕ್ಕೆ ಸೇರಲಿರುವವರ ಹೆಸರುಗಳನ್ನು ಅಂತಿಮಗೊಳಿಸಲು ಶನಿವಾರ ಸರಣಿ ಸಭೆಗಳನ್ನು ನಡೆಸಿದ್ದಾರೆ. ತೆಲುಗು ದೇಶಂ ಪಕ್ಷದ (ಟಿಡಿಪಿ) ಮುಖ್ಯಸ್ಥ ಎನ್.ಚಂದ್ರಬಾಬು ನಾಯ್ಡು, ಜೆಡಿಯು ನಾಯಕರೂ ಆಗಿರುವ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಗೂ ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಶಿಂದೆ ಅವರೊಂದಿಗೂ ಸಮಾಲೋಚನೆ ನಡೆಸಿದ್ದಾರೆ. ಬಳಿಕ ಸಂಭಾವ್ಯರ ಪಟ್ಟಿಯನ್ನು ನರೇಂದ್ರ ಮೋದಿ ಅವರಿಗೆ ನೀಡಿದ್ದಾರೆ. ಮೋದಿ ಅವರು ಇಂದು ಆ ಪಟ್ಟಿಯನ್ನು ರಾಷ್ಟ್ರಪತಿ ಭವನಕ್ಕೆ ಕಳುಹಿಸಲಿದ್ದಾರೆ.
ಕಳೆದ ಸರ್ಕಾರಗಳ ಅವಧಿಗಳಲ್ಲಿ ಸಚಿವರಾಗಿದ್ದ ಅಮಿತ್ ಶಾ, ರಾಜನಾಥ್ ಸಿಂಗ್, ನಿತಿನ್ ಗಡ್ಕರಿ, ಪಿಯೂಷ್ ಗೋಯಲ್, ಅಶ್ವಿನಿ ವೈಷ್ಣವ್, ನಿರ್ಮಲಾ ಸೀತಾರಾಮನ್, ಕಿರಣ್ ರಿಜುಜು, ಸರ್ಬಾನಂದ ಸೋನವಾಲಾ ಮನಸುಖ್ ಮಾಂಡವೀಯ ಅವರು ಪ್ರಧಾನಿ ಅವರೊಂದಿಗೆ ಪ್ರಮಾಣವಚನ ಸ್ವೀಕರಿಸುವುದು ಬಹುತೇಕ ಖಚಿತವಾಗಿದೆ. ಅವರೊಂದಿಗೆ, ಹರಿಯಾಣದ ಮಾಜಿ ಮುಖ್ಯಮಂತ್ರಿ ಮೋಹನ್ ಲಾಲ್ ಖಟ್ಟರ್, ಮಧ್ಯಪ್ರದೇಶ ಮಾಜಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಮತ್ತು ತೆಲಂಗಾಣ ನಾಯಕ ಬಂಡಿ ಸಂಜಯ್ ಕುಮಾರ್ ಅವರೂ ಹೊಸದಾಗಿ ಸಂಪುಟ ಸೇರಲಿದ್ದಾರೆ ಎನ್ನಲಾಗುತ್ತಿದೆ.
ಶಿವಸೇನಾ ನಾಯಕ ಪ್ರತಾಪ್‌ರಾವ್ ಜಾಧವ್, ಬಿಜೆಪಿ ನಾಯಕರುಗಳಾದ ಗುಜರಾತ್‌ನ ಸಿ.ಆರ್. ಪಾಟೀಲ್, ಮಧ್ಯಪ್ರದೇಶ ಜ್ಯೋತಿರಾದಿತ್ಯ ಸಿಂಧಿಯಾ, ಹರಿಯಾಣದ ರಾವ್ ಇಂದ್ರಜಿತ್ ಸಿಂಗ್, ಬಿಹಾರದ ನಿತ್ಯಾನಂದ ರೈ, ರಾಜಸ್ಥಾನದ ಭಗೀರಥ್ ಚೌಧರಿ, ದೆಹಲಿಯ ಹರ್ಷ ಮಲ್ಹೋತ್ರಾ ಸಹ ರೇಸ್‌ನಲ್ಲಿದ್ದಾರೆ.
ಬಿಜೆಪಿ ಅಧ್ಯಕ್ಷರಾಗಿ ನಡ್ಡಾ ಅವರ ಅವಧಿಯೂ ಇದೇ ತಿಂಗಳು ಕೊನೆಗೊಳ್ಳಲಿದ್ದು, ಅವರೂ ಸಂಪುಟಕ್ಕೆ ಮರಳುವ ಸಾಧ್ಯತೆ ಇದೆ. ಮೋದಿ ಮೊದಲ ಸಲ ಪ್ರಧಾನಿಯಾದಾಗ ಅವರು ಸಂಪುಟದಲ್ಲಿದ್ದರು. 2019ರಲ್ಲಿ ಪಕ್ಷದ ಹೊಣೆ ಹೊತ್ತಿದ್ದರು.
ಚಾಲ್ತಿಯಲ್ಲಿರುವ ಮತ್ತಷ್ಟು ಹೆಸರುಗಳು
ಟಿಡಿಪಿಯ ರಾಮ್ ಮೋಹನ್ ನಾಯ್ಡು, ಚಂದ್ರಶೇಖರ್ ಪೆಮ್ಮಾಸಂಜ್, ಜೆಡಿಯು ನಾಯಕರಾದ ಲಲನ್ ಸಿಂಗ್, ರಾಮನಾಥ್ ಠಾಕೂರ್, ಎಲ್‌ಜೆಪಿಯ ಚಿರಾಗ್ ಪಸ್ವಾನ್, ಎಚ್‌ಎಎಂ ಪಕ್ಷದ ಜೀತನ್ ರಾಮ್ ಮಾಂಝಿ ಮತ್ತು ಆರ್‌ಎಲ್‌ಡಿ ನಾಯಕ ಜಯಂತ್ ಚೌಧರಿ ಅವರ ಹೆಸರುಗಳೂ ಚಾಲ್ತಿಯಲ್ಲಿವೆ.
ಸೋತವರಿಗೂ ಸ್ಥಾನ?
ಪಂಜಾಬ್ ಹಾಗೂ ತಮಿಳುನಾಡಿನಲ್ಲಿ ಬಿಜೆಪಿ ಸಂಘಟನೆಗೆ ಒತ್ತು ನೀಡಿರುವ ರಣವೀತ್ ಸಿಂಗ್ ಬಿಟ್ಟು ಮತ್ತು ಕೆ.ಅಣ್ಣಾಮಲೈ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡರೂ ಅಚ್ಚರಿಯಿಲ್ಲ.
ಬಿಟ್ಟು ಅವರು ಲುಧಿಯಾನದಲ್ಲಿ ಕಾಂಗ್ರೆಸ್‌ನ ಅಮರೀಂದರ್ ಸಿಂಗ್ ರಾಜಾ ವಿರುದ್ಧ 20,942 ಮತಗಳಿಂದ ಪರಾಭವಗೊಂಡಿದ್ದಾರೆ. ಮಾಜಿ ಐಪಿಎಸ್ ಅಧಿಕಾರಿಯೂ ಆಗಿರುವ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ, ಕೊಯಮತ್ತೂರ್ ಕ್ಷೇತ್ರದಿಂದ ಡಿಎಂಕೆ ಅಭ್ಯರ್ಥಿ ಗಣಪತಿ ರಾಜಕುಮಾರ್ ಎದುರು 118068 ಮತಗಳಿಂದ ಸೋಲು ಕಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.