ADVERTISEMENT

ಸೈನ್ಯ ಟೀಕಿಸಿಲ್ಲ; ಸರ್ಕಾರದ ನೀತಿ ಪ್ರಶ್ನಿಸಿದ್ದೇವೆ: ರೋಹಿತ್‌ ಚೌಧರಿ

ಪಿಟಿಐ
Published 24 ಮೇ 2024, 14:29 IST
Last Updated 24 ಮೇ 2024, 14:29 IST
.
.   

ನವದೆಹಲಿ: ಸಶಸ್ತ್ರ ಪಡೆಗಳ ವಿಚಾರವಾಗಿ ರಾಜಕೀಯ ಮಾಡಬೇಡಿ ಎಂದು ಚುನಾವಣಾ ಆಯೋಗವು ಸೂಚಿಸಿರುವುದಕ್ಕೆ ಶುಕ್ರವಾರ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ನ ಮಾಜಿ ಸೈನಿಕರ ವಿಭಾಗದ ಮುಖ್ಯಸ್ಥ ಕರ್ನಲ್‌ (ನಿವೃತ್ತ) ರೋಹಿತ್‌ ಚೌಧರಿ, ‘ನಾವು ಸಶಸ್ತ್ರ ಪಡೆಗಳನ್ನು ಟೀಕಿಸಿಲ್ಲ. ಸರ್ಕಾರದ ನೀತಿಗಳನ್ನಷ್ಟೇ ಪ್ರಶ್ನಿಸಿದ್ದೇವೆ’ ಎಂದು ಹೇಳಿದರು.

ಚುನಾವಣಾ ಆಯೋಗವು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಹಾಯ ಮಾಡುತ್ತಿದೆ ಎಂದೂ ಅವರು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

‘ದೇಶವನ್ನು ಸಂರಕ್ಷಿಸಲು ಸಶಸ್ತ್ರ ಪಡೆಗಳು ಉತ್ತ‌ಮವಾಗಿ ಕೆಲಸ ಮಾಡುತ್ತಿವೆ. ‘ಅಗ್ನಿಪಥ’ ಯೋಜನೆಯ ಕುರಿತು ಹೇಳಿಕೆ ನೀಡುವಾಗ ಪಕ್ಷವು ನೀತಿ ಸಂಹಿತೆಯನ್ನು ಉಲ್ಲಂಘಿಸಿಲ್ಲ’ ಎಂದರು.

ADVERTISEMENT

‘ಅಗ್ನಿಪಥ’ ಯೋಜನೆಯನ್ನು ಜಾರಿಗೊಳಿಸುವ ಮೂಲಕ ಮೋದಿ ಸರ್ಕಾರವು ಸೇನೆಯನ್ನು ದುರ್ಬಲಗೊಳಿಸಿದೆ. ದೇಶ, ಸೇನಾಪಡೆ ಮತ್ತು ಸೈನಿಕರ ಹಿತದೃಷ್ಟಿಯನ್ನು ಗಣನೆಗೆ ತೆಗೆದುಕೊಳ್ಳದೆ ಜಾರಿಗೊಳಿಸಿರುವ ಈ ಯೋಜನೆಗೆ ನಾವು ಸವಾಲು ಹಾಕುತ್ತೇವೆ ಎಂದರು.

ತಾರಾ ಪ್ರಚಾರಕರು ಸಶಸ್ತ್ರ ಪಡೆಗಳ ಕುರಿತು ಮಾತನಾಡಬಾರದು ಎಂದು ಚುನಾವಣಾ ಆಯೋಗವು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರ ಬರೆದಿದೆ ಎಂದೂ ವಿವರಿಸಿದರು.

‘ಮೋದಿ ಅವರು ಯಾವಾಗೆಲ್ಲ ತೊಂದರೆಗೆ ಸಿಲುಕುತ್ತಾರೋ ಆಗ ಅವರು ಬೇರೆಯವರ ಸಹಾಯ ಪಡೆದುಕೊಳ್ಳುತ್ತಾರೆ. ಈ ಹಿಂದೆ ಸಶಸ್ತ್ರ ಪಡೆಗಳ ಹಿಂದೆ ಅಡಗಿಕೊಂಡಿದ್ದರು. ಈಗ ಚುನಾವಣಾ ಆಯೋಗದ ಸಹಾಯ ಪಡೆದುಕೊಳ್ಳುತ್ತಿದ್ದಾರೆ’ ಎಂದು ರೋಹಿತ್‌ ಚೌಧರಿ ಹೇಳಿದರು‌.

‘ಅಗ್ನಿಪಥ’ ಯೋಜನೆಯು ಸೇನೆಯಲ್ಲಿ ತಾರತಮ್ಯ ಉಂಟು ಮಾಡುತ್ತಿದೆ ಮತ್ತು ದೇಶದ ಭದ್ರತೆಯನ್ನು ದುರ್ಬಲಗೊಳಿಸುತ್ತದೆ’ ಎಂದು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.