ADVERTISEMENT

ರಾಜಕೀಯ ನಿವೃತ್ತಿಯಾಗುವಂತೆ ಶೆಟ್ಟರ್‌, ಈಶ್ವರಪ್ಪಗೆ ಬಿಜೆಪಿ ಹೈಕಮಾಂಡ್ ಸೂಚನೆ

ಹಿರಿಯ ಮುಖಂಡರಿಗೆ ಕರೆ ಮಾಡಿದ ಸಚಿವ ಧರ್ಮೇಂದ್ರ ಪ್ರಧಾನ್

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2023, 9:36 IST
Last Updated 14 ಏಪ್ರಿಲ್ 2023, 9:36 IST
 ಕೆ.ಎಸ್‌. ಈಶ್ವರಪ್ಪ ಹಾಗೂ ಜಗದೀಶ್‌ ಶೆಟ್ಟರ್‌
ಕೆ.ಎಸ್‌. ಈಶ್ವರಪ್ಪ ಹಾಗೂ ಜಗದೀಶ್‌ ಶೆಟ್ಟರ್‌    

ಬಳ್ಳಾರಿ: ಹಿರಿಯ ಬಿಜೆಪಿ ಮುಖಂಡರಾದ ಜಗದೀಶ್‌ ಶೆಟ್ಟರ್‌ ಹಾಗೂ ಕೆ.ಎಸ್‌. ಈಶ್ವರಪ್ಪ ಅವರಿಗೆ ಚುನಾವಣಾ ರಾಜಕಾರಣದಿಂದ ನಿವೃತ್ತಿಯಾಗುವಂತೆ ಬಿಜೆಪಿ ಹೈಕಮಾಂಡ್‌ ಸೂಚನೆ ನೀಡಿದೆ.

ತಮ್ಮ ಮಗ ಕಾಂತೇಶ್‌ ಅವರಿಗೆ ಪಕ್ಷದ ಟಿಕೆಟ್‌ ದೊರಕಿಸುವಂತೆ ದೇವರಲ್ಲಿ ಪ್ರಾರ್ಥಿಸಲು ಬಳ್ಳಾರಿ ನಗರದಲ್ಲಿರುವ ಮನೆ ದೇವರು ಚೌಡೇಶ್ವರಿ ದೇವಾಲಯಕ್ಕೆ ಕುಟುಂಬ ಸಮೇತ ಬಂದಿದ್ದ ಈಶ್ವರಪ್ಪ ಶುಕ್ರವಾರ ನಡೆಸಿದ ಪತ್ರಿಕಾ ಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್‌ ತಮಗೆ ಹಾಗೂ ಜಗದೀಶ್‌ ಶೆಟ್ಟರ್‌ ಅವರಿಗೆ ದೂರವಾಣಿ ಕರೆ ಮಾಡಿ ಚುನಾವಣಾ ರಾಜಕೀಯದಿಂದ ಹಿಂದೆ ಸರಿಯುವಂತೆ ಸೂಚಿಸಿದ್ದಾರೆ. ಬಿ.ಎಸ್‌. ಸಂತೋಷ್‌ ಅವರೂ ಮಾತನಾಡಿದ್ದಾರೆ ಎಂದು ಈಶ್ವರಪ್ಪ ಹೇಳಿದರು.

‘ಪಕ್ಷದ ಸೂಚನೆ ಹಿನ್ನೆಲೆಯಲ್ಲಿ ನಾನು ಪಕ್ಷ ರಾಜಕಾರಣದಿಂದ ಹಿಂದೆ ಸರಿಯಲು ನಿರ್ಧರಿಸಿದ್ದೇನೆ. ಬಿಜೆಪಿ ನನಗೆ ಎಲ್ಲ ಸ್ಥಾನಮಾನ, ಗೌರವ ಕೊಟ್ಟಿದೆ. ಪಕ್ಷ ವಹಿಸಿದ್ದ ಜವಾಬ್ದಾರಿಗಳನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಿದ ತೃಪ್ತಿ ಇದೆ. ಈ ಚುನಾವಣೆಯಲ್ಲೂ ಪಕ್ಷ ಕೊಟ್ಟ ಕೆಲಸ ಮಾಡುತ್ತೇನೆ’ ಎಂದು ಈಶ್ವರಪ್ಪ ಸ್ಪಷ್ಟಪಡಿಸಿದರು.

ಪಕ್ಷಕ್ಕೆ ಬಿಟ್ಟ ನಿರ್ಧಾರ: ಶಿವಮೊಗ್ಗ ವಿಧಾನಸಭಾ ಕ್ಷೇತ್ರದಿಂದ ತಮ್ಮ ಮಗನಿಗೆ ಟಿಕೆಟ್‌ ಕೊಡುವ ವಿಚಾರ ಪಕ್ಷದ ತೀರ್ಮಾನಕ್ಕೆ ಬಿಟ್ಟ ವಿಚಾರ. ಆ ಬಗ್ಗೆ ತಮಗೇನೂ ಗೊತ್ತಿಲ್ಲ ಎಂದು ಈಶ್ವರಪ್ಪ ನುಡಿದರು.

ಪಕ್ಷದ ಟಿಕೆಟ್‌ ಸಿಗದವರು ಸ್ವಾಭಾವಿಕವಾಗಿ ರಾಜೀನಾಮೆ ಕೊಡುತ್ತಾರೆ. ಯಾರೂ ಕೂಡ ಬ್ಲಾಕ್ ಮೇಲ್ ಮಾಡಬಾರದು. ಅಸಮಾಧಾನಗೊಂಡವರನ್ನ ಪಕ್ಷದ ವರಿಷ್ಠರು ಮನವೊಲಿಸುತ್ತಿದ್ದಾರೆ ಎಂದು ಅವರು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.