ADVERTISEMENT

ಚಿತ್ರದುರ್ಗ ಲೋಕಸಭಾ ಕ್ಷೇತ್ರ: ನದಿಯಂತೆ ಬೋರ್ಗರೆದ ‘ಕೈ’ ರೋಡ್‌ ಶೋ

‘ಮಂಕುತಿಮ್ಮನ ಕಗ್ಗ’ ಬಳಸಿ ಬಿಜೆಪಿಗೆ ತಿವಿದ ಕಾಂಗ್ರೆಸ್‌ ಅಭ್ಯರ್ಥಿ ಬಿ.ಎನ್‌.ಚಂದ್ರಪ್ಪ

ಜಿ.ಬಿ.ನಾಗರಾಜ್
Published 23 ಏಪ್ರಿಲ್ 2024, 4:55 IST
Last Updated 23 ಏಪ್ರಿಲ್ 2024, 4:55 IST
ಹೊಸದುರ್ಗದಲ್ಲಿ ಸೋಮವಾರ ಕಾಂಗ್ರೆಸ್‌ ನಡೆಸಿದ ಭರ್ಜರಿ ರೋಡ್‌ ಶೋನಲ್ಲಿ ಪಾಲ್ಗೊಂಡಿದ್ದ ಜನರು
ಹೊಸದುರ್ಗದಲ್ಲಿ ಸೋಮವಾರ ಕಾಂಗ್ರೆಸ್‌ ನಡೆಸಿದ ಭರ್ಜರಿ ರೋಡ್‌ ಶೋನಲ್ಲಿ ಪಾಲ್ಗೊಂಡಿದ್ದ ಜನರು   

ಹೊಸದುರ್ಗ (ಚಿತ್ರದುರ್ಗ): ‘ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು

ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ

ಬೆಲ್ಲ ಸಕ್ಕರೆಯಾಗು ದೀನದುರ್ಬಲರಿಂಗೆ

ADVERTISEMENT

ಎಲ್ಲರೊಳಗೊಂದಾಗು ಮಂಕುತಿಮ್ಮ..’

ಸ್ವಾರಸ್ಯಕರ ಬದುಕಿನ ಗುಟ್ಟನ್ನು ತಿಳಿಸಿದ ಡಿ.ವಿ. ಗುಂಡಪ್ಪನವರ ಕಗ್ಗದ ಸಾಲುಗಳನ್ನು ಉಲ್ಲೇಖಿಸಿದ್ದು ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಬಿ.ಎನ್‌.ಚಂದ್ರಪ್ಪ. ಹೊಸದುರ್ಗ ತಾಲ್ಲೂಕಿನಲ್ಲಿ ಸೋಮವಾರ ನಡೆಸಿದ ರೋಡ್‌ ಶೋ ವೇಳೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಲು ಅವರು ಮಂಕುತಿಮ್ಮನ ಕಗ್ಗದ ಮೊರೆಹೋದರು. ರಾಜಕಾರಣಿಗಳ ದ್ವೇಷಕಾರುವ ಮಾತು ಆಲಿಸಿದ್ದ ಜನರ ಕಿವಿಗಳು ಕಗ್ಗದ ಸಾಲುಗಳಿಗೆ ಅರಳಿದವು.

‘ಲೋಕಸಭಾ ಕ್ಷೇತ್ರವನ್ನು ಐದು ವರ್ಷಗಳಿಂದ ಪ್ರತಿನಿಧಿಸಿದ ಎ.ನಾರಾಯಣಸ್ವಾಮಿ ಮತದಾರರಿಗೆ ಮುಖ ತೋರಿಸಲು ಸಾಧ್ಯವಾಗದೇ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಮುಧೋಳ ವಿಧಾನಸಭಾ ಕ್ಷೇತ್ರದ ಮತದಾರರಿಂದ ತಿರಸ್ಕೃತರಾದ ಗೋವಿಂದ ಕಾರಜೋಳ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಕ್ಷೇತ್ರದ ಪರಿಚಯವೇ ಇಲ್ಲದ ಇವರು ಜನರೊಂದಿಗೆ ಉಳಿಯುವ ವಿಶ್ವಾಸವಿಲ್ಲ. ನಾನು ಸೋತಾಗಲೂ ನಿಮ್ಮೊಂದಿಗಿದ್ದೆ, ಗೆದ್ದರೆ ಎಲ್ಲರೊಳಗೆ ಒಂದಾಗುವೆ..’ ಎಂದಾಗ ಜನರು ಚಪ್ಪಾಳೆ ತಟ್ಟಿ, ಕರತಾಡನ ಮಾಡಿ ಅವರನ್ನು ಹುರಿದುಂಬಿಸಿದರು.

ಹೊಸದುರ್ಗದ ಅಂಬೇಡ್ಕರ್‌ ವೃತ್ತದಲ್ಲಿ ನೆತ್ತಿ ಸುಡುವ ಬಿಸಿಲಿನಲ್ಲಿ ಸಾವಿರಾರು ಜನ ಸೇರಿದ್ದರು. ಕೇಸರಿ, ಬಿಳಿ ಹಾಗೂ ಹಸಿರು ಬಣ್ಣದ ಟೋಪಿಗಳು ಇವರ ತಲೆ ಮೇಲಿದ್ದವು. ‘ಕೈ’ ಚಿಹ್ನೆಯನ್ನು ಹೊಂದಿದ ಬಾವುಟಗಳು ಜನರ ಕೈಗಳಲ್ಲಿ ಹಾರಾಡುತ್ತಿದ್ದವು. ತಾಲ್ಲೂಕಿನ ಹಲವು ಗ್ರಾಮಗಳಿಂದ ತಂಡೋಪತಂಡವಾಗಿ ಬರುತ್ತಿದ್ದ ಜನರು ಚಿಕ್ಕ ತೊರೆಗಳು ನದಿ ಸೇರಿ ಬೋರ್ಗರೆದಂತೆ ಭಾಸವಾಗುತ್ತಿತ್ತು. ಬಿಸಿಲಿನಲ್ಲಿ ನಿಲ್ಲಿಸಿ ಭಾಷಣ ಮಾಡುತ್ತಿರುವುದಕ್ಕೆ ಜನರ ಕ್ಷಮೆಯಾಚಿಸಿ ಅಭ್ಯರ್ಥಿ ಮಾತು ಆರಂಭಿಸಿದರು.

ಮತದಾನಕ್ಕೆ ನಾಲ್ಕು ದಿನಗಳಷ್ಟೇ ಬಾಕಿ ಇರುವುದರಿಂದ ಕಾಂಗ್ರೆಸ್‌ ಪಾಳೆಯ ಅಬ್ಬರದ ಪ್ರಚಾರಕ್ಕೆ ಇಳಿದಿದೆ. ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಸುತ್ತುತ್ತಿರುವ ಅಭ್ಯರ್ಥಿ ಬಿ.ಎನ್‌. ಚಂದ್ರಪ್ಪ ಅವರ ಪ್ರಚಾರದ ದಿನಚರಿ ಸೋಮವಾರ ಬೆಳಿಗ್ಗೆ 6.30ರಿಂದ ಶುರುವಾಯಿತು. ಸ್ನಾನ, ಪೂಜೆ ಮುಗಿಸಿದ ಅವರು ಪಕ್ಷದ ಮುಖಂಡರು, ಆಪ್ತರೊಂದಿಗೆ ಕೆಲ ಹೊತ್ತು ಚರ್ಚೆ ನಡೆಸಿದರು. ಬ್ರಹ್ಮವಿದ್ಯಾನಗರದ ಭಗೀರಥ ಗುರುಪೀಠಕ್ಕೆ ಭೇಟಿ ನೀಡಿ ಪುರುಷೋತ್ತಮಾನಂದಪುರಿ ಸ್ವಾಮೀಜಿ ಆಶೀರ್ವಾದ ಪಡೆದರು. ಮಠದಲ್ಲಿಯೇ ಉಪ್ಪಿಟ್ಟು, ಅವಲಕ್ಕಿ ಸೇವಿಸಿ ಪ್ರಚಾರಕ್ಕೆ ಅಣಿಯಾದರು.

ಶಾಸಕ ಬಿ.ಜಿ. ಗೋವಿಂದಪ್ಪ ಪಕ್ಷದ ಅಭ್ಯರ್ಥಿಯನ್ನು ಕ್ಷೇತ್ರಕ್ಕೆ ಬರಮಾಡಿಕೊಂಡರು. ತೆರದ ವಾಹನ ಏರಿದ ಅವರು ಮಧುರೆ ಮೂಲಕ ರೋಡ್‌ ಶೋನಲ್ಲಿ ಹೊರಟರು. ಕಾಂಗ್ರೆಸ್‌, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಪರ ಘೋಷಣೆಗಳು ಮೊಳಗುತ್ತಿದ್ದವು. ಅಭ್ಯರ್ಥಿ ಪರ ಮತ ಯಾಚನೆಗೆ ರೂಪಿಸಿದ ಜಿಂಗಲ್ಸ್‌ ಹಾಗೂ ರ‍್ಯಾಪ್‌ ಸಂಗೀತ ಯುವ ಸಮೂಹವನ್ನು ಮೋಡಿ ಮಾಡಿತು. ಸಂಗೀತಕ್ಕೆ ತಕ್ಕಂತೆ ಬಾವುಟ ತಿರುಗಿಸುತ್ತಿದ್ದ ಅಭಿಮಾನಿಗಳು ಹುಮ್ಮಸ್ಸಿನಿಂದ ಮೆರವಣಿಗೆಯಲ್ಲಿ ಸಾಗಿದರು.

ಚಂದ್ರಪ್ಪ ಅವರು ಸಂಸದರಾಗಿದ್ದ ಅವಧಿಯಲ್ಲಿ ಮಾಡಿದ ಸಾಧನೆಗಳನ್ನು ಪಕ್ಷದ ನಾಯಕರು ಸ್ಮರಿಸಿದರು. ಭದ್ರಾ ಮೇಲ್ದಂಡೆ ಯೋಜನೆಯ ಅನುಷ್ಠಾನಕ್ಕೆ ಎದುರಾಗಿದ್ದ ತಾಂತ್ರಿಕ ತೊಡಕುಗಳನ್ನು ನಿವಾರಿಸಿದ ರೀತಿಯನ್ನು ಬಣ್ಣಿಸಿದರು. ಪ್ರಧಾನಿ ನರೇಂದ್ರ ಮೋದಿ ಆಡಳಿತ ವೈಖರಿಯನ್ನು ಟೀಕಿಸುತ್ತ, ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡರು. ಗ್ಯಾರಂಟಿ ಯೋಜನೆ, ಕಾಂಗ್ರೆಸ್‌ ಪ್ರಣಾಳಿಕೆಯನ್ನು ಬಿಡಿಸಿ ಹೇಳುತ್ತ ಜನರಿಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದರು.

ಹೊಸದುರ್ಗದ ರೋಡ್‌ ಶೋಗೆ ತಾಲ್ಲೂಕಿನ ವಿವಿಧೆಡೆಯಿಂದ ಕಾಂಗ್ರೆಸ್‌ ಕಾರ್ಯಕರ್ತರ ದಂಡು ಹರಿದು ಬಂದಿತ್ತು. ಮಾಜಿ ಶಾಸಕ ಎ.ವಿ. ಉಮಾಪತಿ ಇಲ್ಲಿ ಅಭ್ಯರ್ಥಿ ಜೊತೆಯಾದರು. ರಸ್ತೆಯ ಇಕ್ಕೆಲಗಳಲ್ಲಿ ಜಮಾಯಿಸಿದ್ದ ಜನರತ್ತ ಕೈಬೀಸಿ ಮತಯಾಚನೆ ಮಾಡಲಾಯಿತು. ಅಂಬೇಡ್ಕರ್‌ ವೃತ್ತದಿಂದ ಹೊರಟ ಮೆರವಣಿಗೆ ಗಾಂಧಿ ವೃತ್ತ, ಬಸವೇಶ್ವರ ವೃತ್ತ, ಹುಳಿಯಾರು ವೃತ್ತದ ಮೂಲಕ ಸಾಗಿತು. ಕೆಲ್ಲೋಡು ಗ್ರಾಮದಲ್ಲಿ ಮತಯಾಚನೆ ನಡೆಸಿ ಉಗ್ರಪ್ಪ ಅವರ ಮನೆಯಲ್ಲಿ ಊಟ ಮಾಡಿದರು. ಕಾರೇಹಳ್ಳಿ ಹ್ಯಾಂಡ್‌ಪೋಸ್ಟ್‌, ಕೈನಡು, ಎಸ್‌.ನೇರಲಕೆರೆ, ಶ್ರೀರಾಂಪುರದಲ್ಲಿ ಪ್ರಚಾರ ನಡೆಸಲಾಯಿತು.

ಹೊಸದುರ್ಗ ಪಟ್ಟಣದಲ್ಲಿ ಸೋಮವಾರ ನಡೆದ ರೋಡ್‌ ಶೋನಲ್ಲಿ ಮತಯಾಚನೆ ಮಾಡಿದ ಕಾಂಗ್ರೆಸ್‌ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ. ಶಾಸಕ ಬಿ.ಜಿ.ಗೋವಿಂದಪ್ಪ ಇದ್ದರು

‘ಸುಳ್ಳಿನ ಸ್ವರ್ಗ ತೋರಿಸಿದ ಮೋದಿ’

‘ದೇಶದ ಪ್ರಧಾನಿಯಾಗಿ ಹತ್ತು ವರ್ಷಗಳಿಂದ ಆಡಳಿತ ನಡೆಸುತ್ತಿರುವ ನರೇಂದ್ರ ಮೋದಿ ಸುಳ್ಳಿನ ಸ್ವರ್ಗ ತೋರಿಸಿದ್ದಾರೆ. ಜನರ ಕಣ್ಣಿಗೆ ಮಣ್ಣೆರಚಿ ಕಿವಿಗೆ ಹೂ ಇಟ್ಟು ಕೈಗೆ ಚೊಂಬು ಕೊಟ್ಟಿದ್ದಾರೆ’ ಎಂದು ಕಾಂಗ್ರೆಸ್‌ ಅಭ್ಯರ್ಥಿ ಬಿ.ಎನ್‌. ಚಂದ್ರಪ್ಪ ತೀವ್ರ ವಾಗ್ದಾಳಿ ನಡೆಸಿದರು. ‘ಮನುವಾದಿಗಳು (ಬಿಜೆಪಿ) ಹಾಗೂ ಭೀಮವಾದಿಗಳ (ಅಂಬೇಡ್ಕರ್‌ ಅನುಯಾಯಿಗಳು) ನಡುವೆ ನಡೆಯುತ್ತಿರುವ ಚುನಾವಣೆ ಇದು. ಶ್ರೀರಾಮನನ್ನು ಹಿಂದೂ ಧರ್ಮವನ್ನು ರಾಜಕೀಯಕ್ಕೆ ಬಳಸಿಕೊಂಡವರಿಗೆ ತಕ್ಕ ಉತ್ತರ ಕೊಡುವ ಸಮಯ ಬಂದಿದೆ. ಶ್ರೀರಾಮ ಕೇವಲ ನಿಮ್ಮವನಲ್ಲ. ನಾವೂ ಹಿಂದೂಗಳು ನಮ್ಮ ಮನೆಯಲ್ಲಿ ಶ್ರೀರಾಮನ ಜೊತೆಗೆ ಲಕ್ಷ್ಮಣ ಸೀತೆ ಕೂಡ ಇದ್ದಾರೆ’ ಎಂದು ಹೇಳಿದರು.

ಕಾರಜೋಳ ವಿರುದ್ಧ ಆಕ್ರೋಶ

‘ಜಲಸಂಪನ್ಮೂಲ ಸಚಿವರಾಗಿದ್ದಾಗ ಭದ್ರಾ ಮೇಲ್ದಂಡೆ ಯೋಜನೆ ನಿರ್ಲಕ್ಷ್ಯ ತೋರಿದ ಗೋವಿಂದ ಕಾರಜೋಳ ಈಗ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಯೋಜನೆಯ ಬಗ್ಗೆ ಇವರಿಗೆ ಪರಿಜ್ಞಾನವೂ ಇಲ್ಲ. ಯೋಜನೆ ವ್ಯಾಪ್ತಿಯ ತಾಲ್ಲೂಕುಗಳೆಷ್ಟು? ನೀರು ಹೇಗೆ ಹರಿಯುತ್ತದೆ ಎಂಬುದೇ ಅವರಿಗೆ ಗೊತ್ತಿಲ್ಲ’ ಎಂದು ಹೊಸದುರ್ಗ ಶಾಸಕ ಬಿ.ಜಿ. ಗೋವಿಂದಪ್ಪ ಆಕ್ರೋಶ ವ್ಯಕ್ತಪಡಿಸಿದರು. ‘ಸಂಸದ ಎ.ನಾರಾಯಣಸ್ವಾಮಿ 2019ರ ಚುನಾವಣೆಯಲ್ಲಿ ಹಲವು ಆಶ್ವಾಸನೆ ನೀಡಿದ್ದರು. ಗೆದ್ದ ಬಳಿಕ ಯಾರ ಕೈಗೂ ಸಿಗಲಿಲ್ಲ. ಕಾಂಗ್ರೆಸ್ ಅಭ್ಯರ್ಥಿ ಚಂದ್ರಪ್ಪ ಅವರು 10 ವರ್ಷಗಳಿಂದ ಜನರೊಂದಿಗೆ ಇದ್ದಾರೆ. ಸಂಸದರಾಗಿದ್ದಾಗ ಅವರು ಮಾಡಿದ ಕೆಲದ ಋಣ ತೀರಿಸೋಣ’ ಎಂದರು.

ಲೋಕಸಭಾ ಕ್ಷೇತ್ರಕ್ಕೆ ಹಣದ ಚೀಲ ಇಟ್ಟುಕೊಂಡು ಸಂತೆ ಮಾಡಲು ಬಂದಿದ್ದಾರೆ. ವ್ಯಾಪಾರ ಮುಗಿದ ಬಳಿಕ ಜಾಗ ಖಾಲಿ ಮಾಡುತ್ತಾರೆ. ಇವರ ಬೂಟಾಟಿಕೆಯ ಮಾತುಗಳಿಗೆ ಮರುಳಾಗಬೇಡಿ.
–ಬಿ.ಎನ್‌.ಚಂದ್ರಪ್ಪ, ಕಾಂಗ್ರೆಸ್‌ ಅಭ್ಯರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.