ADVERTISEMENT

ಚುನಾವಣೆ ಅಧಿಕಾರಿಗಳು ಬಿಜೆಪಿ ಏಜೆಂಟರಂತೆ ವರ್ತಿಸುತ್ತಿದ್ದಾರೆ: ಜೆ.ಎನ್‌.ಗಣೇಶ್

​ಪ್ರಜಾವಾಣಿ ವಾರ್ತೆ
Published 1 ಮೇ 2023, 13:39 IST
Last Updated 1 ಮೇ 2023, 13:39 IST
ಕಂಪ್ಲಿ ತಾಲ್ಲೂಕು ನಂ.10 ಮುದ್ದಾಪುರದಲ್ಲಿ ಶಾಸಕ ಜೆ.ಎನ್. ಗಣೇಶ್ ಬಿಜೆಪಿ ಯುವಕರಿಂದ ವಶಕ್ಕೆ ಪಡೆದ ವಿದ್ಯುನ್ಮಾನ ಉಪಕರಣ, ಟ್ಯಾಬ್, ರೋಲರ್‌ಗಳನ್ನು ಪ್ರದರ್ಶಿಸಿದರು. ಜಿ.ಪಂ ಮಾಜಿ ಸದಸ್ಯ ಕೆ. ಶ್ರೀನಿವಾಸರಾವ್, ಮುಖಂಡ ಕಟ್ಟೆ ವೆಂಕಟೇಶ್ ಇದ್ದಾರೆ
ಕಂಪ್ಲಿ ತಾಲ್ಲೂಕು ನಂ.10 ಮುದ್ದಾಪುರದಲ್ಲಿ ಶಾಸಕ ಜೆ.ಎನ್. ಗಣೇಶ್ ಬಿಜೆಪಿ ಯುವಕರಿಂದ ವಶಕ್ಕೆ ಪಡೆದ ವಿದ್ಯುನ್ಮಾನ ಉಪಕರಣ, ಟ್ಯಾಬ್, ರೋಲರ್‌ಗಳನ್ನು ಪ್ರದರ್ಶಿಸಿದರು. ಜಿ.ಪಂ ಮಾಜಿ ಸದಸ್ಯ ಕೆ. ಶ್ರೀನಿವಾಸರಾವ್, ಮುಖಂಡ ಕಟ್ಟೆ ವೆಂಕಟೇಶ್ ಇದ್ದಾರೆ   

ಕಂಪ್ಲಿ: ಇಲ್ಲಿನ ವಿಧಾನಸಭಾ ಕ್ಷೇತ್ರ ಚುನಾವಣಾಧಿಕಾರಿ, ತಹಶೀಲ್ದಾರ್ ಮತ್ತು ಪೊಲೀಸ್ ಇನ್‌ಸ್ಪೆಕ್ಟರ್ ಅವರು ಬಿಜೆಪಿ ಏಜೆಂಟರಂತೆ ಕಾರ್ಯನಿರ್ವಹಿಸುತ್ತಿದ್ದು, ಕೂಡಲೇ ಅವರನ್ನು ವರ್ಗಾವಣೆ ಮಾಡುವಂತೆ ಶಾಸಕ ಜೆ.ಎನ್. ಗಣೇಶ್ ಒತ್ತಾಯಿಸಿದರು.

ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ’ಚುನಾವಣೆ ಮಾದರಿ ನೀತಿ ಸಂಹಿತೆಯನ್ನು ಬಿಜೆಪಿಯವರು ಉಲ್ಲಂಘಿಸುತ್ತಿರುವ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ಸಾಕ್ಷಿ, ಸ್ಥಳ ಸಹಿತ ಅಧಿಕಾರಿಗಳಿಗೆ ಖಚಿತ ಮಾಹಿತಿ ನೀಡಿದರೂ ನಿರ್ಲಕ್ಷಿಸಲಾಗುತ್ತಿದೆ‘ ಎಂದು ಆರೋಪಿಸಿದರು.

‘ಪೊಲೀಸ್ ಅಧಿಕಾರಿಗಳು ಕಾಂಗ್ರೆಸ್ ಕಾರ್ಯಕರ್ತರನ್ನು ಬೆದರಿಸುವುದು, ಚುನಾವಣಾಧಿಕಾರಿಗಳು ಕಾರ್ಯಕರ್ತರ ಮನೆ ಮೇಲೆ ವಿನಾಕಾರಣ ದಾಳಿ ನಡೆಸುವುದು ಮುಂದುವರಿದಿದೆ. ಈ ಬಗ್ಗೆ ರಾಜ್ಯ ಚುನಾವಣಾ ಅಧಿಕಾರಿಗೆ ಮತ್ತು ಜಿಲ್ಲಾಧಿಕಾರಿಗೆ ಮನವಿಪತ್ರ ಸಲ್ಲಿಸಲಾಗುವುದು. ಮುಂದಿನ ಎರಡು ದಿನಗಳಲ್ಲಿ ಕ್ರಮ ತೆಗೆದುಕೊಳ್ಳದಿದ್ದಲ್ಲಿ ಚುನಾವಣಾ ಪ್ರಚಾರ ಬಿಟ್ಟು ಪಕ್ಷದ ಕಾರ್ಯಕರ್ತರೊಂದಿಗೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಲಾಗುವುದು‘ ಎಂದು ಎಚ್ಚರಿಸಿದರು.

ADVERTISEMENT

‘ಕ್ಷೇತ್ರದ ಸುಮಾರು 224 ಬೂತ್‍ಗಳಲ್ಲಿ 120 ಯುವಕರು ಬಿಜೆಪಿ ಅಭ್ಯರ್ಥಿ ಸುರೇಶ್ ಬಾಬು ಮತ್ತು ಕಮಲ ಚಿಹ್ನೆ ಇರುವ ಚೀಟಿ ವಿತರಿಸುತ್ತಿದ್ದಾರೆ. ಚೀಟಿಯಲ್ಲಿ ಮತದಾರ ಹೆಸರು, ಗುರುತಿನ ಚೀಟಿ ಸಂಖ್ಯೆ, ಮತದಾನ ಸ್ಥಳ, ದಿನಾಂಕ, ಊರು, ಕಮಲಕ್ಕೆ ಮತ ಚಲಾಯಿಸುವ ಮಾಹಿತಿ ಒಳಗೊಂಡಿದ್ದು, ಮನೆಗೆ ತೆರಳಿ ವಿತರಿಸುವುದರ ಜೊತೆಗೆ ಬ್ಯಾಂಕ್ ಖಾತೆ ನಂಬರ್ ಪಡೆಯುತ್ತಿದ್ದಾರೆ‘ ಎಂದು ಶಾಸಕ ಜೆ.ಎನ್. ಗಣೇಶ್ ಆರೋಪಿಸಿದರು.

ಮುಖಂಡರಾದ ಕೆ. ಶ್ರೀನಿವಾಸರಾವ್, ಎನ್. ಹಬೀಬ್ ರೆಹಮಾನ್, ಕಟ್ಟೆ ವೆಂಕಟೇಶ್, ಕೆ. ಮನೋಹರ್, ಮಾವಿನಹಳ್ಳಿ ಎಸ್.ಬಸವರಾಜ, ಕೆ. ಷಣ್ಮುಖಪ್ಪ, ಬಿ.ಜಾಫರ್, ಆದಿಶೇಷ, ನೆಣಕಿ ಗಿರೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.