ADVERTISEMENT

ಹಳೆ ಮೈಸೂರು, ಬೆಂಗಳೂರು ಪ್ರದೇಶದಲ್ಲಿ ಕಾಂಗ್ರೆಸ್‌ ಅಬ್ಬರಕ್ಕೆ ಕುಸಿದ ಜೆಡಿಎಸ್‌

ವಿ.ಎಸ್.ಸುಬ್ರಹ್ಮಣ್ಯ
Published 13 ಮೇ 2023, 19:32 IST
Last Updated 13 ಮೇ 2023, 19:32 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಹಳೇ ಮೈಸೂರು ಮತ್ತು ಬೆಂಗಳೂರು ಭಾಗದ 11 ಜಿಲ್ಲೆಗಳ ವ್ಯಾಪ್ತಿಯಲ್ಲಿ ಕಾಂಗ್ರೆಸ್‌ನ ಅಬ್ಬರಕ್ಕೆ ಜೆಡಿಎಸ್‌ ಬಲ ಸಂಪೂರ್ಣವಾಗಿ ಕುಸಿದುಹೋಗಿದೆ. ಈ ಜಿಲ್ಲೆಗಳಲ್ಲಿ 2018 ರ ಚುನಾವಣೆಗೆ ಹೋಲಿಸಿದರೆ ಈ ಬಾರಿ 14 ಸ್ಥಾನಗಳನ್ನು ಹೆಚ್ಚುವರಿಯಾಗಿ ಗಳಿಸಿದ್ದು, ಅವುಗಳಲ್ಲಿ 17 ಜೆಡಿಎಸ್‌ ಕೈಜಾರಿ ಬಂದಿವೆ.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಹಾಸನ, ಮಂಡ್ಯ, ರಾಮನಗರ ಮೈಸೂರು, ಚಾಮರಾಜನಗರ ಮತ್ತು ಕೊಡಗು ಜಿಲ್ಲೆಗಳಲ್ಲಿ ಕಾಂಗ್ರೆಸ್‌ ಈ ಚುನಾವಣೆಯಲ್ಲಿ ಭಾರಿ ಜಯಭೇರಿ ಬಾರಿಸಿದೆ. ಬೆಂಗಳೂರು ನಗರದಲ್ಲಿ ಮಾತ್ರ ಹಿಂದಿನ ಚುನಾವಣೆಗೆ ಹೋಲಿಸಿದರೆ ಕಾಂಗ್ರೆಸ್‌ ಈ ಬಾರಿ ಎರಡು ಸ್ಥಾನ ಕಳೆದುಕೊಂಡಿದೆ.

2018ರ ಚುನಾವಣೆಯಲ್ಲಿ 11 ಜಿಲ್ಲೆಗಳ ಒಟ್ಟು 89 ಕ್ಷೇತ್ರಗಳ ಪೈಕಿ ಬಿಜೆಪಿ 22, ಕಾಂಗ್ರೆಸ್‌ 34 ಮತ್ತು ಜೆಡಿಎಸ್‌ 31 ಸ್ಥಾನ ಗಳಿಸಿದ್ದವು. ಒಂದು ಕಡೆ ಬಿಎಸ್‌ಪಿ ಮತ್ತು ಒಂದು ಕಡೆ ಪಕ್ಷೇತರರು ಗೆದ್ದಿದ್ದರು. ಈ ಬಾರಿ ಕಾಂಗ್ರೆಸ್‌ 52 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದೆ. ಜೆಡಿಎಸ್‌ ಬಲ 14ಕ್ಕೆ ಕುಗ್ಗಿದ್ದರೆ, ಬಿಜೆಪಿ ಕಳೆದ ಬಾರಿಗಿಂತ ಒಂದು ಸ್ಥಾನವನ್ನಷ್ಟೇ ಕಡಿಮೆ ಪಡೆದಿದೆ. ಈ ಬಾರಿಯೂ ಎರಡು ಕ್ಷೇತ್ರಗಳಲ್ಲಿ ಇತರರು ಗೆದ್ದಿದ್ದಾರೆ. ಮೇಲುಕೋಟೆಯಲ್ಲಿ ಸರ್ವೋದಯ ಕರ್ನಾಟಕ ಪಕ್ಷ ಹಾಗೂ ಗೌರಿಬಿದನೂರಿನಲ್ಲಿ ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.

ADVERTISEMENT

ಜೆಡಿಎಸ್‌ನ ಭದ್ರ ಕೋಟೆಗಳಂತಿದ್ದ ಜಿಲ್ಲೆಗಳಲ್ಲೇ ಕಾಂಗ್ರೆಸ್‌ ಪ್ರಾಬಲ್ಯ ಮೆರೆದಿದೆ. ಮಂಡ್ಯ ಜಿಲ್ಲೆಯಲ್ಲಿ ಕಾಂಗ್ರೆಸ್‌ ಸ್ವತಃ ಐದು ಸ್ಥಾನಗಳನ್ನು ಗೆದ್ದಿದ್ದರೆ, ಮೇಲುಕೋಟೆಯಲ್ಲೂ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಹಿಂದಿನ ಚುನಾವಣೆಗಳಲ್ಲಿ ಪೂರ್ತಿ ಏಳು ಕ್ಷೇತ್ರಗಳನ್ನು ಗೆದ್ದು ಬೀಗಿದ್ದ ಜೆಡಿಎಸ್‌ ಈ ಬಾರಿ ಒಂದಕ್ಕೆ ಕುಸಿದಿದೆ. 2019ರಲ್ಲಿ ಆಪರೇಷನ್‌ ಕಮಲದಿಂದ ಬಿಜೆಪಿಗೆ ತೆಕ್ಕೆಗೆ ಹೋಗಿದ್ದ ಕೆ.ಆರ್‌.ಪೇಟೆ ಕ್ಷೇತ್ರವೂ ಕಾಂಗ್ರೆಸ್‌ ವಶಕ್ಕೆ ಬಂದಿದೆ.

ಮೈಸೂರಿನಲ್ಲೂ ಐದು ಕ್ಷೇತ್ರಗಳನ್ನು ಹೆಚ್ಚುವರಿಯಾಗಿ ಕಾಂಗ್ರೆಸ್‌ ಗೆದ್ದುಕೊಂಡಿದೆ. ಅಲ್ಲಿ ಬಿಜೆಪಿ ಎರಡು ಸ್ಥಾನ ಕಳೆದುಕೊಂಡಿದ್ದರೆ, ಜೆಡಿಎಸ್‌ ಮೂರನ್ನು ಕಳೆದುಕೊಂಡಿದೆ. ಬಿಜೆಪಿಯ ಭದ್ರ ನೆಲೆ, ‘ಕೇಸರಿ ರಾಜಕಾರಣ’ದ ನೆಲದಂತೆ ಬಿಂಬಿತವಾಗಿದ್ದ ಕೊಡಗು ಜಿಲ್ಲೆಯ ಎರಡೂ ಕ್ಷೇತ್ರಗಳನ್ನು ಕಾಂಗ್ರೆಸ್‌ ಗೆದ್ದುಕೊಂಡಿದೆ. ತುಮಕೂರಿನಲ್ಲಿ ನಾಲ್ಕು, ಬೆಂಗಳೂರು ಗ್ರಾಮಾಂತರ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ತಲಾ ಒಂದು ಕ್ಷೇತ್ರಗಳು ಕಾಂಗ್ರೆಸ್‌ಗೆ ಹೆಚ್ಚುವರಿಯಾಗಿ ಲಭಿಸಿವೆ.

ಬೆಂಗಳೂರು ನಗರದಲ್ಲಿ ಜೆಡಿಎಸ್‌ ಬಲ ಶೂನ್ಯಕ್ಕೆ ಇಳಿದಿದೆ. ಉಳಿದಂತೆ ಹೆಚ್ಚೇನೂ ಬದಲಾವಣೆಗಳಾಗಿಲ್ಲ. ಬಹುತೇಕ ಹಾಲಿ ಶಾಸಕರು ಗೆದ್ದು ಬಂದಿದ್ದಾರೆ. ರಾಮನಗರದಲ್ಲಿ ಜೆಡಿಎಸ್‌ನ ಕೋಟೆ ಕುಸಿದಿದ್ದು, ಕಾಂಗ್ರೆಸ್‌ ಸಂಪೂರ್ಣ ಮೇಲುಗೈ ಪಡೆದಿದೆ.

ಸಂಖ್ಯೆಯ ದೃಷ್ಟಿಯಿಂದ ಒಕ್ಕಲಿಗ ಮತದಾರರ ಪ್ರಾಬಲ್ಯವಿರುವ ಜಿಲ್ಲೆಗಳಲ್ಲಿ ಕಾಂಗ್ರೆಸ್‌ನ ಸಾಧನೆ ಬಹುತೇಕ ದ್ವಿಗುಣಗೊಂಡಿದೆ. ಜೆಡಿಎಸ್‌ ವರಿಷ್ಠರಾದ ಎಚ್‌.ಡಿ. ದೇವೇಗೌಡ ಮತ್ತು ಎಚ್‌.ಡಿ. ಕುಮಾರಸ್ವಾಮಿ ರಾಜಕೀಯವಾಗಿ ಬಿಗಿ ಹಿಡಿತ ಹೊಂದಿದ್ದ ಜಿಲ್ಲೆಗಳಲ್ಲಿ ಈ ಚುನಾವಣೆಯಲ್ಲಿ ಕಾಂಗ್ರೆಸ್‌ ಮೇಲುಗೈ ಸಾಧಿಸಿದೆ. ಒಕ್ಕಲಿಗ ನಾಯಕತ್ವವನ್ನು ಬೆಂಬಲಿಸುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮಾಡಿದ ಮನವಿ ಇಲ್ಲಿ ಹೆಚ್ಚು ಕೆಲಸ ಮಾಡಿರುವಂತೆ ಗೋಚರಿಸುತ್ತಿದೆ.

ಉರಿಗೌಡ– ನಂಜೇಗೌಡರ ಕಲ್ಪಿತ ಕತೆಯನ್ನು ಹರಿಯಬಿಟ್ಟು ಈ ಭಾಗದಲ್ಲಿ ರಾಜಕೀಯ ಲಾಭ ಪಡೆಯುವ ಪ್ರಯತ್ನ ಬಿಜೆ‍ಪಿಗೆ ಲಾಭ ತಂದುಕೊಟ್ಟಿಲ್ಲ. ಈ ಕತೆಯನ್ನು ಹರಿಯಬಿಟ್ಟ ರಂಗಕರ್ಮಿ ಅಡ್ಡಂಡ ಕಾರ್ಯಪ್ಪ ಅವರ ತವರು ಜಿಲ್ಲೆ ಕೊಡಗಿನಲ್ಲೇ ಬಿಜೆಪಿ ಎರಡೂ ಕ್ಷೇತ್ರಗಳನ್ನು ಕಳೆದುಕೊಂಡಿದೆ.

ಒಕ್ಕಲಿಗರನ್ನು ಕೇಂದ್ರೀಕರಿಸಿಯೇ ರಾಜಕಾರಣ ಮಾಡುವ ಜೆಡಿಎಸ್‌ ಈ ಬಾರಿಯೂ ಸಮುದಾಯ ಪಕ್ಷದ ಕೈ ಹಿಡಿಯಬಹುದು ಎಂಬ ನಂಬಿಕೆಯಲ್ಲಿತ್ತು. ಅದೂ ಹಳೇ ಮೈಸೂರು ಮತ್ತು ಬೆಂಗಳೂರು ಹಾಗೂ ಸುತ್ತಮುತ್ತಲ ಜಿಲ್ಲೆಗಳಲ್ಲಿ ಪ್ರಾಬಲ್ಯ ಮುಂದುವರಿಯುತ್ತದೆ ಎಂಬ ವಿಶ್ವಾಸದಲ್ಲಿತ್ತು. ಆದರೆ, ಜೆಡಿಎಸ್‌ನ ಮತ ಬ್ಯಾಂಕ್‌ ಈ ಬಾರಿ ಕಾಂಗ್ರೆಸ್‌ನತ್ತ ಹರಿದುಹೋಗಿರುವುದು ನಿಚ್ಚಳವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.