ADVERTISEMENT

ಬಿಜೆಪಿಯಲ್ಲಿನ ಬಂಡಾಯ ಶಮನಕ್ಕೆ ಯತ್ನ: ಸಚಿವ ಸಿ.ಸಿ.ಪಾಟೀಲ ವಿಶ್ವಾಸ

ಹಿರಿಯರ ಅನುಭವ ಯುವಕರ ಉತ್ಸಾಹ ಒಳಗೊಂಡ ಸಮತೋಲಿತ ಪಟ್ಟಿ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2023, 7:36 IST
Last Updated 13 ಏಪ್ರಿಲ್ 2023, 7:36 IST
   

ಗದಗ: ‘ಬಿಜೆಪಿ ಹೈಕಮಾಂಡ್‌ ಗುಜರಾತ್‌ ಹಾಗೂ ಉತ್ತರ ಪ್ರದೇಶದ ಮಾದರಿಯಲ್ಲಿ ಹಳಬರು ಮತ್ತು ಹೊಸಬರ ಸಮತೋಲಿತ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಅಲ್ಲಿಯಂತೆ ಇಲ್ಲೂ ಬಿಜೆಪಿ ಅಪಾರ ಜನಬೆಂಬಲದೊಂದಿಗೆ ಸ್ವತಂತ್ರ ಸರ್ಕಾರ ರಚನೆ ಮಾಡಲಿದೆ’ ಎಂದು ಸಚಿವ ಸಿ.ಸಿ.ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಮಂಗಳವಾರ 189 ಕ್ಷೇತ್ರಗಳಿಗೆ ಅಭ್ಯರ್ಥಿ ಪ್ರಕಟಿಸಲಾಗಿದ್ದು, ಹಿರಿಯ ನಾಯಕರ ಅನುಭವ ಹಾಗೂ ಹೊಸಬರ ಉತ್ಸಾಹ ಇವೆರಡರ ಸಮ್ಮಿಶ್ರಣದ ಪಟ್ಟಿ ಬಿಜೆಪಿ ಅಧಿಕಾರಕ್ಕೆ ಬರಲು ಪೂರಕವಾಗಿದೆ’ ಎಂದು ತಿಳಿಸಿದರು.

‘ಹಿರಿಯ ನಾಯಕ ಗೋವಿಂದ ಕಾರಜೋಳ ಅವರಿಂದ ಯುವ ಉತ್ಸಾಹಿ ವಿಜಯೇಂದ್ರ ಅವರವರೆಗೆ ಆಯ್ಕೆ ಪಟ್ಟಿಯಲ್ಲಿದ್ದಾರೆ. ಅತ್ಯಂತ ವಿವೇಚನೆಯಿಂದ ಅಳೆದು ತೂಗಿ ಸಮತೋಲಿತ ಪಟ್ಟಿ ಬಿಡುಗಡೆ ಮಾಡಲಾಗಿದೆ. ಯುವಕ ಯುವತಿಯರು ನಮ್ಮ ಪಕ್ಷದೊಂದಿಗೆ ನಿಲ್ಲುವ ವಿಶ್ವಾಸ ಇದೆ’ ಎಂದು ಹೇಳಿದರು.

ADVERTISEMENT

‘ಜಗದೀಶ ಶೆಟ್ಟರ್, ಕೆ.ಎಸ್. ಈಶ್ವರಪ್ಪ ಅವರ ರಾಜಕೀಯ ಅನುಭವ ಪಕ್ಷಕ್ಕೆ ಅಗತ್ಯವಿದೆ. ಹೈಕಮಾಂಡ್ ಅವರನ್ನು ದೆಹಲಿಗೆ ಕರೆಯಿಸಿ ಮಾತನಾಡಲಿದ್ದಾರೆ. ಹೊಸ ಮುಖಗಳಿಗೆ ಅವಕಾಶ ಕಲ್ಪಿಸಿದ್ದರಿಂದ ಹಿರಿಯರು ಮನ ನೋಯಿಸಿಕೊಳ್ಳಬಾರದು. ಹಿರಿಯ ಶಾಸಕರಿಗೆ ಟಿಕೆಟ್ ಕೈತಪ್ಪಿದ್ದರೂ ಸಹ ಮುಂದಿನ ದಿನಗಳಲ್ಲಿ ಪಕ್ಷ ಅವರಿಗೆ ಸೂಕ್ತ ಸ್ಥಾನಮಾನ ನೀಡಲಿದೆ’ ಎಂದು ಹೇಳಿದರು.

ಮಾಜಿ ಸಚಿವ ಲಕ್ಷ್ಮಣ ಸವದಿ ಬಂಡಾಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ‘ನಾನು, ಸವದಿ ಮತ್ತು ಸಿಎಂ ಬೊಮ್ಮಾಯಿ ಆತ್ಮೀಯರು. ಟಿಕೆಟ್‌ ಸಿಗದ ಕಾರಣಕ್ಕೆ ಸವದಿ ಅಸಮಾಧಾನಗೊಂಡಿದ್ದಾರೆ. ಅವರ ಜತೆಗೆ ನಿರಂತರ ಸಂಪರ್ಕದಲ್ಲಿದ್ದೇನೆ. ಪಕ್ಷ ಬಿಟ್ಟು ಹೋಗದಂತೆ ತಡೆಯುತ್ತೇವೆ. ಸ್ನೇಹಿತರಿಂದಲೂ ಒತ್ತಡ ಹಾಕಿಸಲಾಗುತ್ತಿದೆ’ ಎಂದು ತಿಳಿಸಿದರು.

ಶಿರಹಟ್ಟಿ ಕ್ಷೇತ್ರದಿಂದ ಟಿಕೆಟ್‌ ವಂಚಿತರಾಗಿರುವ ರಾಮಣ್ಣ ಲಮಾಣಿ ಮುನಿಸಿನ ಬಗ್ಗೆ ಪ್ರತಿಕ್ರಿಯಿಸಿ, ‘ಅವರೊಬ್ಬ ಮುಗ್ಧ ವ್ಯಕ್ತಿ. ಹಾಗಂತ, ಯಾವೊಬ್ಬ ರಾಜಕಾರಣಿಯೂ ಸನ್ಯಾಸಿ ಅಲ್ಲ. ಸಹಜವಾದ ಆಸೆ ಆಕಾಂಕ್ಷೆಗಳು ಇದ್ದೇ ಇರುತ್ತವೆ. ಅವರನ್ನೂ ಸಮಾಧಾನಪಡಿಸಲು ಪ್ರಯತ್ನಿಸಲಾಗುವುದು’ ಎಂದು ಹೇಳಿದರು.

‘ಎಲ್ಲರಿಗಿಂತ ಮೊದಲು ತನ್ನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿ, ಏನು ಚುನಾವಣೆ ಮೇ 10ಕ್ಕಿಂತ ಮುಂಚೆಯೇ ನಡೆಯುವಂತೆ ಕಾಂಗ್ರೆಸ್ ಪಕ್ಷದವರು ಬಿಜೆಪಿ ವಿರುದ್ಧ, ಸಿಎಂ ಕ್ಷೇತ್ರ ಬದಲಾವಣೆ ಅಂತೆಲ್ಲ ಅಪಪ್ರಚಾರ ಮಾಡಿದರು. ಆದರೆ, ಬಿಜೆಪಿಯು ಕಾಂಗ್ರೆಸ್ ಪಕ್ಷಕ್ಕೆ ಮಾಸ್ಟರ್ ಸ್ಟ್ರೋಕ್ ನೀಡಿದೆ. ವಿ.ಸೋಮಣ್ಣ ಮತ್ತು ಆರ್‌.ಅಶೋಕ ಅವರಿಗೆ ಎರಡು ಕ್ಷೇತ್ರ ನೀಡಲಾಗಿದೆ. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ವಿರುದ್ಧ ಪ್ರಬಲ ಸ್ಪರ್ಧಿಗಳನ್ನು ಪಕ್ಷ ಕಣಕ್ಕಿಳಿಸಿದ್ದು, ಕಾಂಗ್ರೆಸ್ ದಿಗಿಲುಬಿದ್ದಿದೆ’ ಎಂದು ಲೇವಡಿ ಮಾಡಿದರು.

ಗದಗ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನಿಲ್‌ ಮೆಣಸಿನಕಾಯಿ, ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ, ಗದಗ ಬೆಟಗೇರಿ ನಗರಸಭೆ ಅಧ್ಯಕ್ಷೆ ಉಷಾ ದಾಸರ, ಗದಗ ಶಹರ ಬಿಜೆಪಿ ಅಧ್ಯಕ್ಷ ಅನೀಲ ಅಬ್ಬಿಗೇರಿ, ಮುತ್ತಣ್ಣ ಲಿಂಗನಗೌಡ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.