ADVERTISEMENT

ವಿಜಯನಗರ | ಚುನಾವಣಾ ಸಿಬ್ಬಂದಿಗೆ ಮತದಾನ ಸಾಮಗ್ರಿ ಹಂಚಿಕೆ

​ಪ್ರಜಾವಾಣಿ ವಾರ್ತೆ
Published 9 ಮೇ 2023, 7:16 IST
Last Updated 9 ಮೇ 2023, 7:16 IST
ಮತ ಕೇಂದ್ರಕ್ಕೆ ತೆರಳಲು ತಯಾರಾದ ಸಿಬ್ಬಂದಿ
ಮತ ಕೇಂದ್ರಕ್ಕೆ ತೆರಳಲು ತಯಾರಾದ ಸಿಬ್ಬಂದಿ   

ಹೊಸಪೇಟೆ (ವಿಜಯನಗರ): ವಿಧಾನಸಭೆ ಚುನಾವಣೆಗೆ ಸಿದ್ಧತೆ ಪೂರ್ಣಗೊಂಡಿದ್ದು, ಬುಧವಾರ (ಮೇ 10) ನಡೆಯಲಿರುವ ಮತದಾನ ಪ್ರಕ್ರಿಯೆಗೆ ಅಗತ್ಯ ಸಾಮಗ್ರಿಗಳ ಹಂಚಿಕೆಯನ್ನು ಸಿಬ್ಬಂದಿಗೆ ನಗರ ಹೊರವಲಯದ ಲಿಟ್ಲ್ ಫ್ಲವರ್ ಶಾಲೆಯಲ್ಲಿ ಮಂಗಳವಾರ ಹಂಚಿಕೆ ಮಾಡಲಾಗುತ್ತಿದೆ.

ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆ ಕೆಲಸಕ್ಕೆ ನೇಮಕಗೊಂಡ ಶಿಕ್ಷಕರು, ಪ್ರಾಧ್ಯಾಪಕರು, ಪೊಲೀಸರು, ಗೃಹರಕ್ಷಕರು ಹಾಗೂ ಅರೆಸೇನಾ ಪಡೆಯವರು ಎಲ್‌ಎಫ್‌ಎಸ್ ಶಾಲೆ ಮೈದಾನದಲ್ಲಿ ಸೇರಿದ್ದಾರೆ.

ಈಗಾಗಲೇ ವಿವಿಧ ಮತಗಟ್ಟೆಗಳಿಗೆ ನೇಮಕಗೊಂಡವರಿಗೆ ಧ್ವನಿವರ್ಧಕಗಳ ಮೂಲಕ ಅವರ ಹೆಸರು ಕರೆದು ವಿದ್ಯುನ್ಮಾನ ಮತಯಂತ್ರ, ವಿ.ವಿ ಪ್ಯಾಟ್, ಕಂಟ್ರೋಲ್ ಪ್ಯಾನಲ್, ಮತದಾರರ ಪಟ್ಟಿ, ಶಾಯಿ ಹಂಚಿಕೆ ಮಾಡಲಾಗುತ್ತಿದೆ. ಸ್ಥಳದಲ್ಲಿ ತಾತ್ಕಾಲಿಕ ಆರೋಗ್ಯ ಕೇಂದ್ರ ತೆರೆಯಲಾಗಿದೆ. ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ನೆರಳಿಗಾಗಿ ಶಾಮಿಯಾನ ಹಾಕಲಾಗಿದೆ.

ADVERTISEMENT

ಜಿಲ್ಲಾಧಿಕಾರಿ ವೆಂಕಟೇಶ್ ಟಿ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿ ಬಾಬು ಬಿ.ಎಲ್. ಅವರು ಶಾಲೆಗೆ ಬಂದು ಸಿದ್ಧತೆ ಪರಿಶೀಲಿಸಿದರು‌.

‘ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮತದಾನಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮಳೆ ಬರುವ ಮುನ್ಸೂಚನೆ ಇದ್ದು ಅದಕ್ಕೂ ಮುನ್ನೆಚ್ಚರಿಕೆ ವಹಿಸಲಾಗಿದೆ. ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿಯೇ ಸಿಬ್ಬಂದಿಗೆ ಅಗತ್ಯ ಸಾಮಗ್ರಿಗಳನ್ನು ವಿತರಿಸಲಾಗುತ್ತಿದೆ. ಮತದಾನ ಮುಗಿದ ನಂತರ ಎಲ್ಲ ತಾಲ್ಲೂಕುಗಳಿಂದ ವಿದ್ಯುನ್ಮಾನ ಮತಯಂತ್ರಗಳನ್ನು ಭದ್ರತೆಯೊಂದಿಗೆ ಹೊಸಪೇಟೆಯ ಪಿಡಿಐಟಿ ಕಾಲೇಜಿನಲ್ಲಿ ತಂದು ಇರಿಸಲಾಗುವುದು‘ ಎಂದು ವೆಂಕಟೇಶ್ ಟಿ. ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.