ADVERTISEMENT

ಕಾಂಗ್ರೆಸ್‌ನ 40 ಶಾಸಕರ ಜತೆ ಬಿಜೆಪಿಗೆ ಬರಲು ಕಾದಿರುವ ಡಿಕೆಶಿ: ಮುನಿರತ್ನ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2024, 15:33 IST
Last Updated 23 ಮಾರ್ಚ್ 2024, 15:33 IST
ಮುನಿರತ್ನ
ಮುನಿರತ್ನ   

ಬೆಂಗಳೂರು: ‘ಕಾಂಗ್ರೆಸ್‌ನ 40 ಶಾಸಕರ ಜತೆ ಬಿಜೆಪಿಗೆ ಬರಲು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಕಾಯುತ್ತಿದ್ದಾರೆ’ ಎಂದು ಬಿಜೆಪಿ ಶಾಸಕ ಮುನಿರತ್ನ ಹೇಳಿದರು.

‘ಮುನಿರತ್ನ ಅವರು ಬಿಜೆಪಿಯವರನ್ನು ಕಾಂಗ್ರೆಸ್‌ಗೆ ಕಳುಹಿಸುತ್ತಿದ್ದಾರೆ’ ಎಂಬ ಶಿವಕುಮಾರ್‌ ಹೇಳಿಕೆ ಕುರಿತು ಸುದ್ದಿಗಾರರಿಗೆ ಶನಿವಾರ ಪ್ರತಿಕ್ರಿಯಿಸಿದ ಅವರು, ‘ಕಾಂಗ್ರೆಸ್‌ನಲ್ಲಿ ನಾಲ್ವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂಬ ಬೇಡಿಕೆ ಇದೆ. ಅಲ್ಲಿ ಇರುವುದಕ್ಕಿಂತ ಬಿಜೆಪಿ ಸೇರುವುದು ಒಳ್ಳೆಯದು ಎಂದು ಶಿವಕುಮಾರ್‌ ನಿರ್ಧರಿಸಿದ್ದಾರೆ’ ಎಂದರು.

‘40 ಶಾಸಕರ ಜತೆ ಬಿಜೆಪಿ ಸೇರಲು ಅವರು ಬಾಗಿಲು ಕಾಯುತ್ತಿದ್ದಾರೆ. ನಾವು ಬಾಗಿಲು ತೆರೆಯುತ್ತಿಲ್ಲ. ಬಾಗಿಲು ತೆರೆದರೆ ತಕ್ಷಣ ಪಕ್ಷ ಸೇರಲು ಸಿದ್ಧರಾಗಿದ್ದಾರೆ. ಸದ್ಯಕ್ಕೆ ಅವರು ಅಲ್ಲಿಯೇ ಇರಲಿ’ ಎಂದು ಹೇಳಿದರು.

ADVERTISEMENT

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಭಾರಿ ಪ್ರಮಾಣದ ಚುನಾವಣಾ ಅಕ್ರಮಗಳನ್ನು ಎಸಗುತ್ತಿದ್ದಾರೆ. ಮಹಿಳಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷೆಯೊಬ್ಬರ ಮೇಲೆ ಕಾಂಗ್ರೆಸ್‌ ಮುಖಂಡರು ಹಲ್ಲೆ ನಡೆಸಿದ್ದಾರೆ. ತಕ್ಷಣವೇ ಕ್ಷೇತ್ರಕ್ಕೆ ಅರೆ ಸೇನಾಪಡೆ ನಿಯೋಜಿಸುವಂತೆ ಮುಖ್ಯ ಚುನಾವಣಾಧಿಕಾರಿಯವರಿಗೆ ಮನವಿ ಮಾಡಲಾಗಿದೆ ಎಂದರು.

‘ಜೈಲಿನಲ್ಲಿದ್ದ ರೌಡಿಗಳನ್ನು ಜಾಮೀನು ಕೊಡಿಸಿ, ಹೊರಗೆ ಕರೆತಂದು ಜನರನ್ನು ಬೆದರಿಸುವ ಕೆಲಸವನ್ನು ಕಾಂಗ್ರೆಸ್‌ನವರು ಮಾಡುತ್ತಿದ್ದಾರೆ. ಬಿಜೆಪಿ ಮುಖಂಡರಿಗೆ ಬೆದರಿಕೆ ಇದೆ. ಕನಕಪುರದಲ್ಲಿ ಪ್ರಕರಣ ದಾಖಲು ಮಾಡಿಸಿ ಜನರನ್ನು ಬೆದರಿಸುತ್ತಿದ್ದ ಶಿವಕುಮಾರ್‌ ಸಹೋದರರು ಇಲ್ಲಿಯೂ ಅದನ್ನೇ ಮಾಡುತ್ತಿದ್ದಾರೆ’ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.