ADVERTISEMENT

ಸಂಗಣ್ಣ ಕರಡಿ ಕುಟುಂಬಕ್ಕೆ ಬಿಜೆಪಿ ಟಿಕೆಟ್‌; ರಾಜೀನಾಮೆಗೆ ಮುಂದಾದ ಚಂದ್ರಶೇಖರ್‌

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2023, 14:29 IST
Last Updated 17 ಏಪ್ರಿಲ್ 2023, 14:29 IST
ಸಿ.ವಿ. ಚಂದ್ರಶೇಖರ್‌
ಸಿ.ವಿ. ಚಂದ್ರಶೇಖರ್‌   

ಕೊಪ್ಪಳ: ‘ಸಂಸದ ಸಂಗಣ್ಣ ಕರಡಿ ವರಿಷ್ಠರಿಗೆ ಬ್ಲಾಕ್‌ಮೇಲ್ ಮಾಡಿ ನನಗೆ ಟಿಕೆಟ್‌ ಸಿಗದಂತೆ ಮಾಡಿದ್ದಾರೆ. ಅವರ ತಂತ್ರಕ್ಕೆ ವರಿಷ್ಠರು ಕೂಡ ಮಣಿದಿದ್ದು ಬೇಸರವಾಗಿದೆ. ಆದ್ದರಿಂದ ಪಕ್ಷದ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ‘ ಎಂದು ಕೊಪ್ಪಳ ಕ್ಷೇತ್ರದ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದ ಸಿ.ವಿ. ಚಂದ್ರಶೇಖರ್‌ ಹೇಳಿದ್ದಾರೆ.

2018ರ ಚುನಾವಣೆಯಲ್ಲಿ ಬಿಜೆಪಿ ಚಂದ್ರಶೇಖರ್‌ ಅವರನ್ನೇ ಅಭ್ಯರ್ಥಿಯೆಂದು ಘೋಷಿಸಿ ಅಂತಿಮವಾಗಿ ಸಂಸದ ಸಂಗಣ್ಣ ಕರಡಿ ಪುತ್ರ ಅಮರೇಶ ಕರಡಿಗೆ ಬಿ ಫಾರ್ಮ್‌ ನೀಡಿತ್ತು. ಇದರಿಂದ ಅವರು ತೀವ್ರ ಅಸಮಾಧಾನಗೊಂಡಿದ್ದರು. ಈ ಬಾರಿಯೂ ಮತ್ತೆ ಟಿಕೆಟ್‌ ತಪ್ಪಿದೆ.

ಈ ಸಲವೂ ಸಂಸದ ಸಂಗಣ್ಣ ಕರಡಿ ಮತ್ತು ಚಂದ್ರಶೇಖರ್‌ ನಡುವೆ ಟಿಕೆಟ್‌ಗಾಗಿ ಪೈಪೋಟಿ ನಡೆದಿತ್ತು. ಭಾನುವಾರ ಒಂದೆಡೆ ಸಂಗಣ್ಣ ಸ್ವಾಭಿಮಾನಿ ಕಾರ್ಯಕರ್ತರ ಸಭೆ ನಡೆಸಿದರೆ, ಇನ್ನೊಂದೆಡೆ ಚಂದ್ರಶೇಖರ್‌ ಪಕ್ಷದ ಕಾರ್ಯಕರ್ತರ ಮತ್ತು ಬೆಂಬಲಿಗರ ಸಭೆ ನಡೆಸಿ ’ಟಿಕೆಟ್‌ ನನಗೇ ಸಿಗುತ್ತದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರಲ್ಲದೇ, ಕರಡಿ ಕುಟುಂಬದ ಬಗ್ಗೆ ಅಸಮಾಧಾನ ಹೊರಹಾಕಿದ್ದರು.

ADVERTISEMENT

ಬಿಜೆಪಿಯ ಮೂರನೇ ಪಟ್ಟಿ ಪ್ರಕಟವಾದ ಬಳಿಕ ವರಿಷ್ಠರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ‘ಟಿಕೆಟ್‌ ನನಗೇ ಕೊಡುತ್ತೇವೆ ಎಂದು ವರಿಷ್ಠರು ಹೇಳಿದ್ದರು. ಆದರೆ, ಸಂಸದರ ಬ್ಲಾಕ್‌ಮೇಲ್ ತಂತ್ರಕ್ಕೆ ವರಿಷ್ಠರು ಮಣಿದಿದ್ದಾರೆ. ಈಗಿನ ಕಾಲದಲ್ಲಿ ತತ್ವ ಹಾಗೂ ಸಿದ್ಧಾಂತಕ್ಕೆ ಬೆಲೆಯಿಲ್ಲ. ತತ್ವ ಮಾತಿಗೆ ಮಾತ್ರ ಸೀಮಿತವಾಗಿದೆ. ಆದ್ದರಿಂದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಪಕ್ಷೇತರ ಅಥವಾ ಜೆಡಿಎಸ್‌ನಿಂದ ಸ್ಪರ್ಧೆ ಮಾಡುವೆ’ ಎಂದು ತಿಳಿಸಿದರು.

‘2018ರ ಚುನಾವಣೆಯಲ್ಲಿ ಇದೇ ರೀತಿಯ ಬ್ಲಾಕ್‌ಮೇಲ್ ಮಾಡಿ ನನಗೆ ಟಿಕೆಟ್ ತಪ್ಪಿಸಿದ್ದರು. ಈ ಬಾರಿ ಮೊದಲ ಪಟ್ಟಿಯಲ್ಲಿಯೇ ನನಗೆ ಟಿಕೆಟ್‌ ಸಿಗಬೇಕಿತ್ತು. ಸಂಸದರು ಅಡ್ಡಗಾಲು ಹಾಕಿದ್ದರಿಂದ ವರಿಷ್ಠರು ಟಿಕೆಟ್‌ ತಡೆಹಿಡಿದರು. ಈಗ ನಡೆಯುತ್ತಿರುವ ಎಲ್ಲಾ ಬೆಳವಣಿಗೆಗಳನ್ನು ನನ್ನ ಬೆಂಬಲಿಗರು ನೋಡುತ್ತಿದ್ದಾರೆ. ಯಾರೇ ಅಡ್ಡಗಾಲು ಹಾಕಿದರೂ ಕೇಳುವುದಿಲ್ಲ. ಸ್ಪರ್ಧೆ ಮಾಡುವುದಂತೂ ನಿಶ್ಚಿತ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.