ADVERTISEMENT

‘ಕೈ’ಗೆ ಪ್ರಚಾರದ ಸರಕಾದ ತೆರಿಗೆ ಅನ್ಯಾಯ: ಮನೆ ಮನೆಗೆ ಮುದ್ರಿತ ಪುಸ್ತಿಕೆ ಹಂಚಿಕೆ

ಓದೇಶ ಸಕಲೇಶಪುರ
Published 8 ಏಪ್ರಿಲ್ 2024, 5:01 IST
Last Updated 8 ಏಪ್ರಿಲ್ 2024, 5:01 IST
<div class="paragraphs"><p>ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್&nbsp; ಅಭ್ಯರ್ಥಿ ಡಿ.ಕೆ. ಸುರೇಶ್ ಪರವಾಗಿ ಮನೆ ಮನೆಗೆ ತೆರಳಿ ಪ್ರಚಾರ ನಡೆಸುತ್ತಿರುವ ಪಕ್ಷದ ಕಾರ್ಯಕರ್ತರು, ಕರಪತ್ರದ ಜೊತೆಗೆ ಕೇಂದ್ರ ಸರ್ಕಾರದ ತೆರಿಗೆ ಅನ್ಯಾಯ ಕುರಿತ ಪುಸ್ತಿಕೆಯನ್ನು ವಿತರಿಸಿ ಮತ ಯಾಚಿಸುತ್ತಿದ್ದಾರೆ</p></div>

ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್  ಅಭ್ಯರ್ಥಿ ಡಿ.ಕೆ. ಸುರೇಶ್ ಪರವಾಗಿ ಮನೆ ಮನೆಗೆ ತೆರಳಿ ಪ್ರಚಾರ ನಡೆಸುತ್ತಿರುವ ಪಕ್ಷದ ಕಾರ್ಯಕರ್ತರು, ಕರಪತ್ರದ ಜೊತೆಗೆ ಕೇಂದ್ರ ಸರ್ಕಾರದ ತೆರಿಗೆ ಅನ್ಯಾಯ ಕುರಿತ ಪುಸ್ತಿಕೆಯನ್ನು ವಿತರಿಸಿ ಮತ ಯಾಚಿಸುತ್ತಿದ್ದಾರೆ

   

ರಾಮನಗರ: ಕೇಂದ್ರ ಸರ್ಕಾರದ ವಿರುದ್ಧ ತೆರಿಗೆ ಹಂಚಿಕೆ ಅನ್ಯಾಯ ವಿರುದ್ಧ ದನಿ ಮೊಳಗಿಸಿದ ರಾಜ್ಯದ ಏಕೈಕ ಕಾಂಗ್ರೆಸ್ ಸಂಸದ ಹಾಗೂ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯೂ ಆಗಿರುವ ಡಿ.ಕೆ. ಸುರೇಶ್ ಅವರು, ತೆರಿಗೆ ಅನ್ಯಾಯವನ್ನೇ ತಮ್ಮ ಪ್ರಚಾರದ ಅಸ್ತ್ರವನ್ನಾಗಿ ಮಾಡಿಕೊಂಡಿದ್ದಾರೆ.

ಹೌದು. ಎರಡು ತಿಂಗಳ ಹಿಂದೆ ಕೇಂದ್ರ ಸರ್ಕಾರವು ಮಧ್ಯಂತರ ಬಜೆಟ್ ಮಂಡಿಸಿದ್ದಾಗ ಸಂಸತ್ ಹೊರಗೆ ಸುರೇಶ್ ಅವರು ರಾಜ್ಯಕ್ಕಾದ ಅನ್ಯಾಯದ ಕುರಿತು ಗುಡುಗಿದ್ದರು. ‘ದಕ್ಷಿಣ ಭಾರತದ ರಾಜ್ಯಗಳಿಗೆ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡುತ್ತಿಲ್ಲ. ಇದೇ ಧೋರಣೆ ಮುಂದುವರಿಸಿದರೆ ಪ್ರತ್ಯೇಕ ರಾಷ್ಟ್ರದ ಬೇಡಿಕೆ ಮುಂದಿಡಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದ್ದರು.

ADVERTISEMENT

ಸುರೇಶ್ ಅವರ ಈ ಹೇಳಿಕೆಯು ಬಿಜೆಪಿಯೇತರ ರಾಜ್ಯಗಳಲ್ಲಿ, ಅದರಲ್ಲೂ ದಕ್ಷಿಣದ ರಾಜ್ಯಗಳಿಗೆ ತೆರಿಗೆ ಹಂಚಿಕೆ, ಅನುದಾನ ಬಿಡುಗಡೆ ಹಾಗೂ ಅಭಿವೃದ್ಧಿ ವಿಷಯದಲ್ಲಿ ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ಕುರಿತು, ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ನಾಂದಿ ಹಾಡಿತ್ತು. ಇದೀಗ, ಚುನಾವಣಾ ಪ್ರಚಾರದ ಸರಕಾಗಿಯೂ ಈ ವಿಷಯ ಸದ್ದು ಮಾಡುತ್ತಿದೆ.

ಪುಸ್ತಿಕೆ ಮುದ್ರಣ: ‘ನನ್ನ ತೆರಿಗೆ, ನನ್ನ ಹಕ್ಕು– ಕರ್ನಾಟಕಕ್ಕೆ ಅನ್ಯಾಯ, ಕೇಂದ್ರದಿಂದ ಕರ್ನಾಟಕದ ಅವನತಿ’ ಹೆಸರಿನ ಹನ್ನೆರಡು ಪುಟಗಳ ಮಾಹಿತಿ ಪುಸ್ತಿಕೆಯನ್ನು ಮುದ್ರಿಸಲಾಗಿದೆ. ಕ್ಷೇತ್ರದಾದ್ಯಂತ ಕಾಂಗ್ರೆಸ್‌ ಕಾರ್ಯಕರ್ತರು ಈ ಪುಸ್ತಿಕೆಯನ್ನು ಮನೆ ಮನೆಗೆ ಹಂಚುವ ಮೂಲಕ, ಕೇಂದ್ರ ಸರ್ಕಾರದ ಅನ್ಯಾಯವನ್ನು ಮತದಾರರಿಗೆ ಮನವರಿಕೆ ಮಾಡಿಕೊಟ್ಟು ಮತ ಯಾಚಿಸುತ್ತಿದ್ದಾರೆ.

‘ಕರ್ನಾಟಕಕ್ಕೆ ಆಗಿರುವ ಅನ್ಯಾಯವನ್ನು ಸುರೇಶ್ ಅವರು ದಾಖಲೆ ಸಮೇತ ವಿವರಗಳೊಂದಿಗೆ ಪುಸ್ತಿಕೆಯನ್ನು ಮುದ್ರಿಸಿದ್ದಾರೆ. ಜಿಎಸ್‌ಟಿ ಸಂಗ್ರಹ ಎಷ್ಟಾಗುತ್ತದೆ? ರಾಜ್ಯಗಳಿಗೆ ಎಷ್ಟೆಷ್ಟು ಹಂಚಿಯಾಗುತ್ತದೆ? ಬೇರೆ ರಾಜ್ಯಗಳಿಗೆ ಹೋಲಿಸಿದರೆ, ನಮ್ಮ ರಾಜ್ಯಕ್ಕೆ ಹಂಚಿಕೆಯಲ್ಲಿ ಎಷ್ಟು ಅನ್ಯಾಯವಾಗಿದೆ? ಅದರಲ್ಲೂ ಉತ್ತರ ಭಾರತದ ರಾಜ್ಯಗಳಿಗೂ ನಮ್ಮ ರಾಜ್ಯಕ್ಕೂ ಹೋಲಿಕೆ ಹೇಗಿದೆ ಎಂಬ ವಿವರ ಪುಸ್ತಕದಲ್ಲಿದೆ’ ಎಂದು ಕಾಂಗ್ರೆಸ್ ಕಾರ್ಯಕರ್ತ ಗೋವಿಂದಸ್ವಾಮಿ ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಸಿದರು.

‘ಕೇಂದ್ರಕ್ಕೆ ನಾವು ₹100 ತೆರಿಗೆ ಕೊಟ್ಟರೆ, ನಮಗೆ ಮರಳಿ ಬರುವುದು ಕೇವಲ ₹13 ಮಾತ್ರ. ಅದೇ ಉತ್ತರ ಪ್ರದೇಶಕ್ಕೆ ₹333, ಬಿಹಾರಕ್ಕೆ ₹922... ಹೀಗೆ ಉತ್ತರದ ರಾಜ್ಯಗಳಿಗೆ ಹೆಚ್ಚು ಸಿಗುತ್ತಿದೆ. ಕರ್ನಾಟಕಕ್ಕೆ ಮಾತ್ರ ಅನ್ಯಾಯವಾಗುತ್ತಿದೆ. ಅದೇ ರೀತಿ ಬಜೆಟ್‌ ಹಾಗೂ ಹಣಕಾಸು ಆಯೋಗದಲ್ಲಿ ಯಾವ ರಾಜ್ಯಗಳಿಗೆ ಎಷ್ಟು ಮೊತ್ತ ಹಂಚಿಕೆಯಾಗಿದೆ? ಅಭಿವೃದ್ಧಿ ವಿಷಯದಲ್ಲಿ ಹೇಗೆ ತಾರತಮ್ಯ ಮಾಡಲಾಗುತ್ತಿದೆ? ಎಂಬೆಲ್ಲಾ ಮಾಹಿತಿಯು ಅಂಕಿಅಂಶ ಸಮೇತ ಪುಸ್ತಿಕೆಯಲ್ಲಿದೆ. ಅದನ್ನೇ ನಾವು ಮನೆ ಮನೆಗೆ ಹಂಚಿ ಮತದಾರರಿಗೆ ಕೇಂದ್ರದ ಅನ್ಯಾಯದ ಕುರಿತು ತಿಳಿ ಹೇಳುತ್ತಿದ್ದೇವೆ’ ಎಂದು ತಿಳಿಸಿದರು.

ಪುಸ್ತಿಕೆಯ ಮುಖಪುಟ
ಪುಸ್ತಿಕೆಯ ಹಿಂದಿನ ಪುಟ
ಪ್ರತಿ ಪುಟದಲ್ಲೂ ಪಂಚಿಂಗ್ ಸಾಲು
‘ಕರ್ನಾಟಕದ ತೆರಿಗೆ ಕೇಂದ್ರಕ್ಕೆ ಹೋಳಿಗೆ ಕನ್ನಡಿಗರಿಗೆ ಜೋಳಿಗೆ’ ‘ಗುಜರಾತ್ ಪರ ಮೋದಿ ಧ್ವನಿ ಎತ್ತಿದರೆ ದೇಶಪ್ರೇಮ ಕರ್ನಾಟಕದ ಪರ ಡಿ.ಕೆ. ಸುರೇಶ್ ಧ್ವನಿ ಎತ್ತಿದರೆ ದೇಶದ್ರೋಹ’ ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ’ ‘ಬನ್ನಿ ಸುಭದ್ರ ಸುಸ್ಥಿರ ಸ್ವಾಭಿಮಾನದ ಕರ್ನಾಟಕ ಕಟ್ಟೋಣ’.. . ಹೀಗೆ ಪುಸ್ತಿಕೆಯುದ್ದಕ್ಕೂ ಕೇಂದ್ರ ಸರ್ಕಾರದಿಂದಾಗಿರುವ ಅನುದಾನ ಹಂಚಿಕೆಯ ಅಸಮಾನತೆಯ ವಿವರದೊಂದಿಗೆ ಮತದಾರರ ಗಮನ ಸೆಳೆಯುವ ಪಂಚಿಂಗ್ ಡೈಲಾಗ್‌ಗಳಿವೆ. ಭಾಷಣದಲ್ಲೂ ಸುರೇಶ್‌ ವಾಗ್ದಾಳಿ ಡಿ.ಕೆ. ಸುರೇಶ್ ಅವರು ಕಾರ್ಯಕರ್ತರ ಸಭೆ–ಸಮಾವೇಶಗಳಲ್ಲೂ ಕೇಂದ್ರ ಸರ್ಕಾರದ ತೆರಿಗೆ ಅನ್ಯಾಯದ ವಿರುದ್ಧ ಕುರಿತು ವಾಗ್ದಾಳಿ ನಡೆಸುತ್ತಿದ್ದಾರೆ. ‘ಕರ್ನಾಟಕದ ತೆರಿಗೆ ಹಣವು ಉತ್ತರ ಭಾರತದ ಗುಜರಾತ್ ಉತ್ತರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಿಗೆ ಹರಿದು ಹೋಗುತ್ತಿದೆ. ನಮಗಾದ ಅನ್ಯಾಯ ಪ್ರಶ್ನಿಸಿದರೆ ದೇಶದ್ರೋಹಿ ಪಟ್ಟ ಕಟ್ಟುತ್ತಾರೆ’ ಎಂದು ಆಕ್ರೋಶಭರಿತವಾಗಿ ಭಾಷಣ ಮಾಡುತ್ತಿದ್ದಾರೆ. ಆ ಮೂಲಕ ಚುನಾವಣೆಗೆ ಸ್ಥಳೀಯ ರಾಜಕೀಯ ವಿಷಯಗಳ ಜೊತೆಗೆ ಕೇಂದ್ರ ಸರ್ಕಾರದ ತೆರಿಗೆ ಅನ್ಯಾಯದ ಕುರಿತು ಪ್ರಸ್ತಾಪಿಸುತ್ತಾ ಮತದಾರರನ್ನು ಸೆಳೆಯಲು ಯತ್ನಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.