ADVERTISEMENT

ಶಿವಮೊಗ್ಗಕ್ಕೆ ಗೀತಾ ಭೇಟಿ; ಸ್ವಾಗತಕ್ಕೆ ಕಾಂಗ್ರೆಸ್ ಪಡೆ ಸಜ್ಜು

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2024, 16:05 IST
Last Updated 19 ಮಾರ್ಚ್ 2024, 16:05 IST
ಎಚ್.ಎಸ್.ಸುಂದರೇಶ್‌
ಎಚ್.ಎಸ್.ಸುಂದರೇಶ್‌   

ಶಿವಮೊಗ್ಗ: ಲೋಕಸಭಾ ಚುನಾವಣೆ ಎದುರಿಸಲು ಜಿಲ್ಲಾ ಕಾಂಗ್ರೆಸ್ ಸಕಲ ಸಿದ್ಧತೆ ಮಾಡಿಕೊಂಡಿದೆ. ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್ ಅವರನ್ನು ಶಿವಮೊಗ್ಗಕ್ಕೆ ಸಂಭ್ರಮದಿಂದ ಬರಮಾಡಿಕೊಳ್ಳುತ್ತಿದ್ದೇವೆ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಸ್. ಸುಂದರೇಶ್ ತಿಳಿಸಿದರು.

ಗೀತಾ ಶಿವರಾಜ್‌ಕುಮಾರ್ ಅವರು ಬುಧವಾರ ಬೆಳಿಗ್ಗೆ 10.30ಕ್ಕೆ ಭದ್ರಾವತಿಯ ಬಾರಂದೂರಿಗೆ ಬರುತ್ತಾರೆ. ಅಲ್ಲಿ ಅವರನ್ನು ಸ್ವಾಗತಿಸಲಾಗುತ್ತದೆ. ನಂತರ ಅವರು ಶಿವಮೊಗ್ಗದ ಎಂಆರ್‌ಎಸ್ ಸರ್ಕಲ್‌ಗೆ ಬರುತ್ತಾರೆ. ಅಲ್ಲಿಂದ ಅವರನ್ನು ಬೃಹತ್ ರ‍್ಯಾಲಿಯೊಂದಿಗೆ ಲಗಾನ್ ಕಲ್ಯಾಣ ಮಂದಿರಕ್ಕೆ ಕರೆತರಲಾಗುವುದು. ರ‍್ಯಾಲಿಯಲ್ಲಿ ನಟ ಶಿವರಾಜ್‌ಕುಮಾರ್ ಹಾಗೂ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಭಾಗವಹಿಸುತ್ತಾರೆ ಎಂದು ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಲಗಾನ್ ಕಲ್ಯಾಣ ಮಂದಿರದಲ್ಲಿ ಬೆಳಿಗ್ಗೆ 11.30ಕ್ಕೆ ಜಿಲ್ಲಾ ಮಟ್ಟದ ಕಾರ್ಯಕರ್ತರ ಸಭೆ ಹಮ್ಮಿಕೊಂಡಿದ್ದು, ಸಚಿವ ಮಧುಬಂಗಾರಪ್ಪ, ಶಾಸಕರಾದ ಸಂಗಮೇಶ್ವರ್‌, ಗೋಪಾಲಕೃಷ್ಣ ಬೇಳೂರು, ಜಿಲ್ಲಾ ಮಟ್ಟದ ಕಾರ್ಯಕರ್ತರು, ವಿವಿಧ ಘಟಕಗಳ ಮುಖ್ಯಸ್ಥರು, ಕಾಂಗ್ರೆಸ್ ಜನಪ್ರತಿನಿಧಿಗಳು ಭಾಗವಹಿಸುತ್ತಾರೆ ಎಂದು ಹೇಳಿದರು.

ಗೀತಾ ಶಿವರಾಜ್‌ಕುಮಾರ್ ಈ ಬಾರಿ ಗೆದ್ದೇ ಗೆಲ್ಲುತ್ತಾರೆ. ಬಿಜೆಪಿಯಲ್ಲಿನ ಭಿನ್ನಮತ ನೆರವಾಗಲಿದೆ. ಒಂದು ಪಕ್ಷ ಕೆ.ಎಸ್.ಈಶ್ವರಪ್ಪನವರು ಸ್ವತಂತ್ರ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆಗೆ ನಿಂತರೆ ಅದು ಕಾಂಗ್ರೆಸ್ ಪಕ್ಷಕ್ಕೆ ಬಹುದೊಡ್ಡ ಕೊಡುಗೆಯಾಗಲಿದೆ ಎಂದು ಹೇಳಿದರು.

ADVERTISEMENT

ಪ್ರಮುಖರಾದ ಆಯನೂರು ಮಂಜುನಾಥ್, ಆರ್.ಪ್ರಸನ್ನಕುಮಾರ್, ಕಲಗೋಡು ರತ್ನಾಕರ್, ಎಸ್.ಟಿ.ಚಂದ್ರಶೇಖರ್, ಚಂದ್ರಭೂಪಾಲ್, ರಮೇಶ್ ಶಂಕರಘಟ್ಟ, ಎಚ್.ಸಿ.ಯೋಗೀಶ್, ಮಂಜುನಾಥ್ ಬಾಬು, ಜಿ.ಡಿ.ಮಂಜುನಾಥ್, ಚಂದನ್, ಎನ್.ಡಿ. ಪ್ರವೀಣ್‌ಕುಮಾರ್, ಜಿ.ಪದ್ಮನಾಭ್, ಶಿ.ಜು.ಪಾಶ ಉಪಸ್ಥಿತರಿದ್ದರು.

‘ಮೋದಿ ಹವಾ–ಗಿವಾ ಏನು ಇಲ್ಲ’
ಕಾಂಗ್ರೆಸ್ ನುಡಿದಂತೆ ನಡೆದ ಸರ್ಕಾರ. ಜನರ ಆಶೋತ್ತರಗಳಿಗೆ ಸದಾ ಸ್ಪಂದಿಸುತ್ತಾ ಬಂದಿದೆ. ಗ್ಯಾರಂಟಿಗಳ ಬಲ ನಮಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಗ್ಯಾರಂಟಿಗಳು ಸುಳ್ಳು ಎಂಬುದು ಜನರಿಗೆ ಗೊತ್ತಾಗಿದೆ. ಇದು ಸುಳ್ಳು ಮತ್ತು ಸತ್ಯದ ನಡುವಿನ ಚುನಾವಣೆಯಾಗಿದೆ ಎಂದು ಎಚ್‌.ಎಸ್.ಸುಂದರೇಶ್‌ ತಿಳಿಸಿದರು. ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್‌ನಲ್ಲಿ ಭ್ರಷ್ಟಚಾರವಿದೆ ಎನ್ನುತ್ತಾರೆ. ಆದರೆ ಸುಪ್ರೀಂ ಕೋರ್ಟ್ ಮೋದಿ ಸರ್ಕಾರಕ್ಕೆ ಚುನಾವಣಾ ಬಾಂಡ್‌ಗೆ ಸಂಬಂಧಿಸಿದಂತೆ ಕಪಾಳ ಮೋಕ್ಷ ಮಾಡಿದೆ. ಅದನ್ನು ಮರೆತ್ತಿದ್ದಾರೆ. ಎಸ್‌ಬಿಐ ಚುನವಣಾ ಬಾಂಡ್‌ ವಿವರ ಕೂಡಲೇ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಈಗಾಗಲೇ ತರಾಟೆ ತೆಗೆದುಕೊಂಡಿದೆ. ಕಳ್ಳರು ಕೊಟ್ಟ ಕೋಟ್ಯಂತರ ಹಣ ಚುನಾವಣಾ ಬಾಂಡ್ ಆಗಿದೆ. ಯಾವ ನೈತಿಕತೆಯ ಮೇಲೆ ಮೋದಿ ಅವರು ಕಾಂಗ್ರೆಸ್ ಪಕ್ಷವನ್ನು ಟೀಕಿಸುತ್ತಾರೆ. ಮೋದಿ ಹವಾ–ಗಿವಾ ಏನೂ ಇಲ್ಲ ಎಂದು ವ್ಯಂಗ್ಯವಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.