ವಿಧಾನ ಪರಿಷತ್ ಅಧಿವೇಶನದ ಸಂದರ್ಭ ಮರಿತಿಬ್ಬೇಗೌಡ
(ಸಂಗ್ರಹ ಚಿತ್ರ)
ಬೆಂಗಳೂರು: ಜೆಡಿಎಸ್ ಪಕ್ಷವು ಜಾತ್ಯತೀತ ತತ್ವಗಳನ್ನು ಗಾಳಿಗೆ ತೂರಿದ ಕಾರಣ ನನ್ನ ಕ್ಷೇತ್ರದ ಶಿಕ್ಷಕರ ಅಭಿಪ್ರಾಯವನ್ನು ಪಡೆದು ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದೇನೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಮರಿತಿಬ್ಬೇಗೌಡ ಹೇಳಿದ್ದಾರೆ.
ಮರಿತಿಬ್ಬೇಗೌಡ ಅವರು ಕೆಪಿಸಿಸಿ ಕಚೇರಿಯಲ್ಲಿ ಇಂದು (ಶುಕ್ರವಾರ) ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾದ ಬಳಿಕ ಮಾತನಾಡಿದರು.
ಜೆಡಿಎಸ್ ಪಕ್ಷದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಗೆ, ಕಾರ್ಯಕರ್ತರ, ಮುಖಂಡರ ಅಭಿಪ್ರಾಯಗಳಿಗೆ ಬೆಲೆಯೇ ಇಲ್ಲ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಮತ್ತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕಾವೇರಿ ವಿಚಾರವನ್ನು ಭಾವನಾತ್ಮಕವಾಗಿ ಬಳಸಿಕೊಂಡು, ರೈತರ ಹೆಸರಿನಲ್ಲಿ ರಾಜಕಾರಣ ಮಾಡಿದ್ದಾರೆ. ಮಂಡ್ಯ ಜಿಲ್ಲೆಗೆ ಆ ಪಕ್ಷದ ಕೊಡುಗೆ ಶೂನ್ಯ ಎಂದು ಆರೋಪಿಸಿದರು.
ಚೆಲುವರಾಯ ಸ್ವಾಮಿ ಅವರು ಆರೋಗ್ಯ ಸಚಿವರಾಗಿದ್ದಾಗ ಮಂಡ್ಯಕ್ಕೆ ವೈದ್ಯಕೀಯ ಕಾಲೇಜು ತಂದರು ಎಂದ ಮರಿತಿಬ್ಬೇಗೌಡ, ಕಳೆದ ಚುನಾವಣೆಯಲ್ಲಿ ಜನತಾ ದಳದವರು ನನಗೆ ಟಿಕೆಟ್ ನೀಡಿ, ಬೆಂಬಲವನ್ನೇ ಕೊಡಲಿಲ್ಲ ಎಂದು ಕಿಡಿಕಾರಿದರು.
ಪಕ್ಷದ ಸಭೆಗಳಲ್ಲಿ ಕುಟುಂಬದ ಪರವಾಗಿ ಮಾತ್ರವೇ ತೀರ್ಮಾನ ತೆಗೆದುಕೊಳ್ಳಲಾಗುತ್ತಿತ್ತು ಎಂದು ಗಂಭೀರ ಆರೋಪ ಮಾಡಿರುವ ಮಾಜಿ ಎಂಎಲ್‌ಸಿ, ಇದರ ವಿರುದ್ಧ ಅನೇಕ ಸಲ ದನಿ ಎತ್ತಿರುವುದಾಗಿಯೂ ಹೇಳಿದರು. ಹಾಗೆಯೇ, ಜೆಡಿಎಸ್ ಪಕ್ಷ ರೈತ ವಿರೋಧಿ ಕಾಯ್ದೆಗಳನ್ನು ಬೆಂಬಲಿಸಿದಾಗಲೂ ವಿರೋಧ ವ್ಯಕ್ತಪಡಿಸಿದ್ದೆ ಎಂದು ತಿಳಿಸಿದರು.
ಕಳೆದ 4 ಬಾರಿ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ಆಯ್ಕೆಯಾಗಿದ್ದೆ. ಮೊದಲನೇ ಸಲ ಡಿ.ಕೆ. ಶಿವಕುಮಾರ್ ಅವರ ಆಶೀರ್ವಾದದಿಂದ ಟಿಕೆಟ್ ಸಿಕ್ಕಿತ್ತು. 1985ರಲ್ಲಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಜೆಡಿಎಸ್ ಸೇರಿದ್ದೆ. ಆ ಪಕ್ಷದಲ್ಲಿ ಇಂದು ಜಾತ್ಯತೀತ ತತ್ವಗಳಿಗೆ ಧಕ್ಕೆ ಆಗಿರುವ ಕಾರಣ, ಮಂಡ್ಯದಲ್ಲಿ ಕಾಂಗ್ರೆಸ್ ಪಕ್ಷದ ಲೋಕಸಭಾ ಅಭ್ಯರ್ಥಿಗೆ ಸಂಪೂರ್ಣವಾಗಿ ಬೆಂಬಲ ನೀಡಲಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.