ADVERTISEMENT

ಕೋಲಾರ ಕ್ಷೇತ್ರ: ಟಿಕೆಟ್‌ಗೆ ಕೊನೆಯ ಹಂತದ ಕಸರತ್ತು!

ಕಾಂಗ್ರೆಸ್‌, ಜೆಡಿಎಸ್‌ ಟಿಕೆಟ್‌ ಇಂದೇ ಫೈನಲ್‌–ನಾಮಪತ್ರಿಕೆ ಸಲ್ಲಿಕೆ ಆರಂಭಕ್ಕೆ 3 ದಿನ ಬಾಕಿ

ಕೆ.ಓಂಕಾರ ಮೂರ್ತಿ
Published 25 ಮಾರ್ಚ್ 2024, 7:03 IST
Last Updated 25 ಮಾರ್ಚ್ 2024, 7:03 IST
ಮಾಜಿ ಸ್ಪೀಕರ್‌ ಕೆ.ಆರ್‌.ರಮೇಶ್‌ ಕುಮಾರ್‌ ಹಾಗೂ ಸಚಿವ ಕೆ.ಎಚ್‌.ಮುನಿಯಪ್ಪ ಬೆಂಬಲಿಗರು ಎರಡು ದಿನಗಳಿಂದ ಬೆಂಗಳೂರಿನಲ್ಲಿ ಟಿಕೆಟ್‌ಗಾಗಿ ಲಾಬಿ ಮುಂದುವರಿಸಿದ್ದಾರೆ
ಮಾಜಿ ಸ್ಪೀಕರ್‌ ಕೆ.ಆರ್‌.ರಮೇಶ್‌ ಕುಮಾರ್‌ ಹಾಗೂ ಸಚಿವ ಕೆ.ಎಚ್‌.ಮುನಿಯಪ್ಪ ಬೆಂಬಲಿಗರು ಎರಡು ದಿನಗಳಿಂದ ಬೆಂಗಳೂರಿನಲ್ಲಿ ಟಿಕೆಟ್‌ಗಾಗಿ ಲಾಬಿ ಮುಂದುವರಿಸಿದ್ದಾರೆ   

ಕೋಲಾರ: ಭಾರಿ ಕಗ್ಗಂಟಾಗಿ ಪರಿಣಮಿಸಿರುವ ಕೋಲಾರ ಮೀಸಲು ಕ್ಷೇತ್ರದ ಲೋಕಸಭೆ ಚುನಾವಣೆಗೆ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷ ಸೋಮವಾರ ಟಿಕೆಟ್‌ ಘೋಷಿಸುವುದು ಬಹುತೇಕ ನಿಚ್ಚಳವಾಗಿದೆ.

ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮಾರ್ಚ್‌ 28ರಂದು ಆರಂಭವಾಗಲಿದ್ದು, ಕೇವಲ ಮೂರು ದಿನ ಬಾಕಿ ಉಳಿದಿದೆ. ಆದರೆ, ಟಿಕೆಟ್‌  ಹಗ್ಗಜಗ್ಗಾಟ ನಿಂತಿಲ್ಲ.

ಸೋಮವಾರ ದೆಹಲಿಯಲ್ಲಿ ಕಾಂಗ್ರೆಸ್‌ ಕೇಂದ್ರೀಯ ಚುನಾವಣಾ ಸಮಿತಿ ಸಭೆ ನಡೆಯಲಿದ್ದು, ಕೋಲಾರ ಕ್ಷೇತ್ರದ ಅಭ್ಯರ್ಥಿಯ ಹೆಸರು ಪ್ರಕಟಿಸಲಾಗುತ್ತದೆ ಎಂದು ಕಾಂಗ್ರೆಸ್‌ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ADVERTISEMENT

ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಬಣದ ಸಿ.ಎಂ.ಮುನಿಯಪ್ಪ, ಆಹಾರ ಸಚಿವ ಕೆ.ಎಚ್‌.ಮುನಿಯಪ್ಪ ಅವರ ಅಳಿಯ ಕೆ.ಜಿ.ಚಿಕ್ಕಪೆದ್ದಣ್ಣ ಹಾಗೂ ರಾಜ್ಯಸಭೆ ಮಾಜಿ ಸದಸ್ಯ ಎಲ್‌.ಹನುಮಂತಯ್ಯ ಟಿಕೆಟ್‌ ಗಿಟ್ಟಿಸಿಕೊಳ್ಳಲು ಭಾರಿ ಕಸರತ್ತು ನಡೆಸಿದ್ದಾರೆ.

ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ ಬೆನ್ನಲೇ ಭಾನುವಾರ ಬೆಂಗಳೂರಿನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸಕ್ಕೆ ತೆರಳಿ ಟಿಕೆಟ್‌ಗೆ ದುಂಬಾಲು ಬಿದ್ದಿದ್ದಾರೆ.

ಈ ಬಾರಿ ಪರಿಶಿಷ್ಟ ಜಾತಿಯ ಬಲಗೈ ಸಮುದಾಯದ ಸಿ.ಎಂ.ಮುನಿಯಪ್ಪ ಅವರಿಗೆ ಟಿಕೆಟ್‌ ನೀಡದಿದ್ದರೆ ಘಟಬಂಧನ್‌ನ ಯಾರೊಬ್ಬರೂ ಚುನಾವಣೆ ಪ್ರಚಾರದಲ್ಲಿ ಭಾಗಿಯಾಗುವುದಿಲ್ಲವೆಂದು ನೇರವಾಗಿ ಹೇಳಿರುವುದು ಗೊತ್ತಾಗಿದೆ. ಅಲ್ಲದೇ, ತಮ್ಮ ಬೆಂಬಲಕ್ಕಿರುವ ಶಾಸಕರ ಪಟ್ಟಿಯನ್ನೂ ಈಗಾಗಲೇ ಹೈಕಮಾಂಡ್‌ಗೆ ನೀಡಿದ್ದಾರೆ. ಈ ಪತ್ರದಲ್ಲಿ ರಮೇಶ್‌ ಕುಮಾರ್‌, ಸಚಿವ ಡಾ.ಎಂ.ಸಿ.ಸುಧಾಕರ್‌, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಸೀರ್‌ ಅಹ್ಮದ್‌, ಶಾಸಕರಾದ ಕೊತ್ತೂರು ಮಂಜುನಾಥ್‌, ಕೆ.ವೈ.ನಂಜೇಗೌಡ, ವಿಧಾನ ಪರಿಷತ್‌ ಸದಸ್ಯ ಎಂ.ಎಲ್‌.ಅನಿಲ್‌ ಕುಮಾರ್ ಅವರ ಸಹಿ ಇದೆ ಎನ್ನಲಾಗಿದೆ.

ಈ ಮಧ್ಯೆ, ಕೆ.ಎಚ್‌.ಮುನಿಯಪ್ಪ ಹಾಗೂ ಚಿಕ್ಕಪೆದ್ದಣ್ಣ ಅವರು ತಮ್ಮನ್ನು ಬೆಂಬಲಿಸುವಂತೆ ಮನವಿ ಮಾಡಲು ರಮೇಶ್‌ ಕುಮಾರ್‌ ನಿವಾಸಕ್ಕೆ ಹೋಗಿದ್ದರು ಎನ್ನಲಾಗಿದೆ. ಆದರೆ, ಭೇಟಿಗೆ ಅವಕಾಶ ಸಿಕ್ಕಿಲ್ಲ ಎಂಬುದು ಗೊತ್ತಾಗಿದೆ.

‘ಭೇಟಿ ಮಾಡಲು ಹೋದ ವೇಳೆ ರಮೇಶ್‌ ಕುಮಾರ್‌ ಮನೆಯಲ್ಲಿ ಇರಲಿಲ್ಲ. ಹಿಂದಿನ ದಿನವಷ್ಟೇ ರಮೇಶ್‌ ಕುಮಾರ್ ಹಾಗೂ ಮುನಿಯಪ್ಪ ಅಕ್ಕಪಕ್ಕ ಕುಳಿತು ಚೆನ್ನಾಗಿ ಮಾತನಾಡಿದ್ದಾರೆ. ಜಿಲ್ಲೆಯಲ್ಲಿನ ವಾತಾವರಣ ತಿಳಿಗೊಳಿಸಲು ಪ್ರಯತ್ನಿಸಿರುವುದು ಉತ್ತಮ ಹೆಜ್ಜೆ. ಟಿಕೆಟ್‌ ವಿಚಾರ ಹೈಕಮಾಂಡ್‌ ಅಂಗಳದಲ್ಲಿದೆ’ ಎಂದು ಜಿಲ್ಲಾ ಕಾಂಗ್ರೆಸ್‌ ಕಾರ್ಯಾಧ್ಯಕ್ಷ ಊರುಬಾಗಿಲು ಶ್ರೀನಿವಾಸ್‌ ಸ್ಪಷ್ಟಪಡಿಸಿದರು.

ದೆಹಲಿಯಲ್ಲಿ ನಡೆಯಲಿರುವ ಕಾಂಗ್ರೆಸ್‌ ಕೇಂದ್ರೀಯ ಚುನಾವಣಾ ಸಮಿತಿ ಸಭೆ ಟಿಕೆಟ್‌ ಸಿ.ಎಂ.ಮುನಿಯಪ್ಪಗೋ, ಚಿಕ್ಕಪೆದ್ದಣ್ಣಗೋ? ಒಂದು ಬಣಕ್ಕೆ ನೀಡಿದರೆ ಮತ್ತೊಂದು ಬಣಕ್ಕೆ ಸಿಟ್ಟು
ಖರ್ಗೆ ಭೇಟಿ ಮಾಡಿದ ರಮೇಶ್‌ ಕುಮಾರ್‌
ಸಿ.ಎಂ.ಮುನಿಯಪ್ಪ ಅವರಿಗೆ ಟಿಕೆಟ್‌ ಕೊಡಬೇಕೆಂದು ಕೆ.ಆರ್‌.ರಮೇಶ್‌ ಕುಮಾರ್‌ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಬೆಂಗಳೂರಿನ ನಿವಾಸದಲ್ಲಿ ಭಾನುವಾರ ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಈ ಭೇಟಿ ಸಂದರ್ಭದಲ್ಲಿ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಸೀರ್‌ ಅಹ್ಮದ್‌ ಹಾಗೂ ಸಚಿವ ಡಾ.ಎಂ.ಸಿ.ಸುಧಾಕರ್‌ ಇದ್ದರು. ‘ಸುಮಾರು ಮೂರು ಗಂಟೆ ಚರ್ಚೆ ನಡೆಯಿತು. ದಲಿತ ಹೋರಾಟಗಾರ ಸಿ.ಎಂ.ಮುನಿಯಪ್ಪ ಸ್ಪರ್ಧೆಗೆ ಕೋಲಾರ ಹಾಗೂ ಚಿಕ್ಕಬಳ್ಳಾಪುರದ ಜಿಲ್ಲೆಯ ಎಲ್ಲಾ ಕಾಂಗ್ರೆಸ್‌ ಶಾಸಕರ ಬೆಂಬಲವಿದೆ ಹಾಗೂ ಕ್ಷೇತ್ರದಲ್ಲಿ ಅತಿ ಹೆಚ್ಚು ಮತದಾರರು ಇರುವುದು ಬಲಗೈ ಸಮುದಾಯದವರು ಎಂಬುದನ್ನು ಮನವರಿಕೆ ಮಾಡಲಾಯಿತು’ ಎಂದು ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು. ‘ಸೋಮವಾರ ಟಿಕೆಟ್‌ ಘೋಷಣೆ ಆಗಲಿದೆ. ಕೋಲಾರ ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆಲ್ಲಿಸಿಕೊಂಡು ಬರಬೇಕು ಎಂಬುದಾಗಿ ಖರ್ಗೆ ಸೂಚನೆ ನೀಡಿದರು’ ಎಂದರು.
ಹನುಮಂತಯ್ಯ ಕೂಡ ಖರ್ಗೆ ಭೇಟಿ
ಕೆಪಿಸಿಸಿ ಪ್ರಚಾರ ಸಮಿತಿ ಸಹ ಅಧ್ಯಕ್ಷರಾಗಿ ನೇಮಕವಾಗಿರುವ ರಾಜ್ಯಸಭೆ ಮಾಜಿ ಸದಸ್ಯ ಎಲ್‌.ಹನುಮಂತಯ್ಯ ಕೂಡ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭಾನುವಾರ ಭೇಟಿ ಮಾಡಿ ಚರ್ಚಿಸಿದ್ದಾರೆ. ‘ನನ್ನನ್ನು ಅಭ್ಯರ್ಥಿ ಆಗಿಸಿದ ಕೂಡಲೇ ಪ್ರಚಾರ ಸಮಿತಿ ಸಹ ಅಧ್ಯಕ್ಷ ಸ್ಥಾನ ಬಿಟ್ಟುಕೊಡುತ್ತೇನೆ. ಇದು ಬಹಳ ಹಿಂದೆಯೇ ನಿರ್ಧಾರವಾದ ಪಟ್ಟಿ. ಸ್ಪರ್ಧೆಗೆ ನಾನೂ ತಯಾರಿ ಮಾಡಿಕೊಂಡಿದ್ದೇನೆ. ಸ್ಥಳೀಯ ಶಾಸಕರ ಅಭಿಪ್ರಾಯ ಪಡೆದು ನಿರ್ಧಾರ ಕೈಗೊಳ್ಳುವುದಾಗಿ ಖರ್ಗೆ ಹೇಳಿದರು. ಸಾಮಾಜಿಕ ನ್ಯಾಯದ ಪ್ರಕಾರ ಟಿಕೆಟ್ ಕೊಡಲಾಗುತ್ತದೆ’ ಎಂದು ಹನುಮಂತಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.
ಎಡಗೈ–ಬಲಗೈ ಸಮುದಾಯದ ವಾದ
ಕೆ.ಎಚ್‌.ಮುನಿಯಪ್ಪ ಕೂಡ ಎಲ್ಲರ ವಿಶ್ವಾಸ ಪಡೆದುಕೊಳ್ಳಲು ಮುಂದಾಗಿದ್ದಾರೆ. ಎಡಗೈ ಸಮುದಾಯದ ಚಿಕ್ಕಪೆದ್ದಣ್ಣ (ಅಳಿಯ) ಅವರನ್ನು ಗೆಲ್ಲಿಸಿಕೊಡುವ ಭರವಸೆಯನ್ನೂ ನೀಡಿದ್ದಾರೆ. ಸಾಮಾಜಿಕ ನ್ಯಾಯದ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ‘ವಿಜಯಪುರ ಕಲಬುರಗಿಯಲ್ಲಿ ಪರಿಶಿಷ್ಟ ಜಾತಿಯ ಬಲಗೈ ಸಮುದಾಯದವರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಲಾಗಿದೆ. ಚಾಮರಾಜನಗರದಲ್ಲೂ ಬಲಗೈ ಸಮುದಾಯಕ್ಕೆ ಸಿಗುವ ಸಾಧ್ಯತೆ ಇದೆ. ಚಿತ್ರದುರ್ಗದಲ್ಲಿ ಎಡಗೈ ಸಮುದಾಯಕ್ಕೆ ಸಿಕ್ಕಿದ್ದು ಕೋಲಾರದಲ್ಲೂ ಇದೇ ಸಮುದಾಯಕ್ಕೆ ಸಿಗಬೇಕು’ ಎಂಬ ವಾದ ಮಂಡಿಸಿರುವುದು ಗೊತ್ತಾಗಿದೆ.
ಸಮೃದ್ಧಿ–ಮಲ್ಲೇಶ್‌ ಬಾಬು: ಟಿಕೆಟ್‌ ಯಾರಿಗೆ?
ಚೆನ್ನೈನಲ್ಲಿ ಚಿಕಿತ್ಸೆ ಪಡೆದು ಎಚ್‌.ಡಿ.ಕುಮಾರಸ್ವಾಮಿ ವಾಪಸ್‌ ಆಗುತ್ತಿದ್ದಂತೆ ಜೆಡಿಎಸ್‌ನಲ್ಲೂ ರಾಜಕೀಯ ಚಟುವಟಿಕೆಗಳು ಚುರುಕು ಪಡೆದುಕೊಂಡಿವೆ. ಈಗಾಗಲೇ ಬಿಜೆಪಿ ಕೋಲಾರ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿದ್ದು ಟಿಕೆಟ್‌ಗೆ ಮುಳಬಾಗಿಲು ವಿಧಾನಸಭೆ ಕ್ಷೇತ್ರದ ಶಾಸಕ ಸಮೃದ್ಧಿ ಮಂಜುನಾಥ್‌ ಹೆಸರು ಮುಂಚೂಣಿಯಲ್ಲಿದೆ. ಬಂಗಾರಪೇಟೆ ಪರಾಜಿತ ಅಭ್ಯರ್ಥಿ ಮಲ್ಲೇಶಬಾಬು ಹಾಗೂ ದೇವನಹಳ್ಳಿ ಪರಾಜಿತ ಅಭ್ಯರ್ಥಿ ನಿಸರ್ಗ ನಾರಾಯಣಸ್ವಾಮಿ ಹೆಸರೂ ಪಟ್ಟಿಯಲ್ಲಿದೆ. ಆದರೆ ಈ ಮೂವರಲ್ಲಿ ಟಿಕೆಟ್‌ ತಮಗೇ ಬೇಕೆಂದು ಯಾರೂ ಪಟ್ಟು ಹಿಡಿಯದಿರುವುದು ಕುತೂಹಲ ಮೂಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.