ನವದೆಹಲಿ: ಚಿತ್ರದುರ್ಗ (ಮೀಸಲು) ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯು ಮಾಜಿ ಸಚಿವ ಗೋವಿಂದ ಕಾರಜೋಳ ಅವರನ್ನು ಕಣಕ್ಕಿಳಿಸುವ ಸಂಭವವಿದೆ. ಕ್ಷೇತ್ರದ ಸಂಸದರಾಗಿರುವ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅವರಿಗೆ ಟಿಕೆಟ್ ನೀಡಲು ವರಿಷ್ಠರಿಗೆ ಒಲವಿಲ್ಲ.
ಕ್ಷೇತ್ರದಲ್ಲಿ ನಾರಾಯಣಸ್ವಾಮಿ ಅವರಿಗೆ ಆಡಳಿತ ವಿರೋಧಿ ಅಲೆ ತೀವ್ರವಾಗಿದೆ. ಕ್ಷೇತ್ರದಲ್ಲಿ ಅಚ್ಚರಿಯ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಕಮಲ ಪಾಳಯ ಯೋಜಿಸಿತ್ತು. ಈ ಸಂಬಂಧ ಮಾದಾರ ಚನ್ನಯ್ಯ ಸ್ವಾಮೀಜಿ ಅವರನ್ನು ಸಂಪರ್ಕಿಸಿತ್ತು. ಆದರೆ, ಅವರು ಚುನಾವಣಾ ರಾಜಕಾರಣಕ್ಕೆ ಬರಲು ನಿರಾಕರಿಸಿದ್ದರು.
ಪಕ್ಷದ ಪರವಾಗಿ ರಾಜ್ಯದಾದ್ಯಂತ ಚುನಾವಣಾ ಪ್ರಚಾರದಲ್ಲಿ ತೊಡಗುವಂತೆ ನಾರಾಯಣಸ್ವಾಮಿ ಅವರಿಗೆ ಸೂಚಿಸಲಾಗಿದೆ. 2028ರ ವಿಧಾನಸಭಾ ಚುನಾವಣೆಯಲ್ಲಿ ಆನೇಕಲ್ ಕ್ಷೇತ್ರದ ಟಿಕೆಟ್ ನೀಡುವುದಾಗಿ ವರಿಷ್ಠರು ವಾಗ್ದಾನ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬಾಗಲಕೋಟೆ ಜಿಲ್ಲೆಯವರಾದ ಕಾರಜೋಳ, ಪರಿಶಿಷ್ಟ ಜಾತಿಯ ಎಡಗೈ ಪಂಗಡಕ್ಕೆ ಸೇರಿದವರು. ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅವರು ಸೋತಿದ್ದರು. ಬಿ.ಎಸ್.ಯಡಿಯೂರಪ್ಪ ಸರ್ಕಾರದಲ್ಲಿ ಅವರು ಉಪಮುಖ್ಯಮಂತ್ರಿಯಾಗಿದ್ದರು.
ಚಿತ್ರದುರ್ಗ ಕ್ಷೇತ್ರಕ್ಕೆ ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ. ಚಿತ್ರದುರ್ಗ, ಉತ್ತರ ಕನ್ನಡ, ರಾಯಚೂರು, ಬೆಳಗಾವಿ ಹಾಗೂ ಚಿಕ್ಕಬಳ್ಳಾಪುರ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಬಿಜೆಪಿ ಈವರೆಗೆ ಪ್ರಕಟಿಸಿಲ್ಲ. ಒಂದೆರಡು ದಿನಗಳಲ್ಲಿ ಪಟ್ಟಿ ಪ್ರಕಟವಾಗುವ ನಿರೀಕ್ಷೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.