ADVERTISEMENT

ಮಂಗಳೂರು | ಮೋದಿ ರೋಡ್‌ ಶೋ: ಜೇನುಗೂಡು ತೆರವಿಗೆ ಪತ್ರ !

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2024, 6:28 IST
Last Updated 12 ಏಪ್ರಿಲ್ 2024, 6:28 IST
<div class="paragraphs"><p>ನರೇಂದ್ರ ಮೋದಿ</p></div>

ನರೇಂದ್ರ ಮೋದಿ

   

(ಸಂಗ್ರಹ ಚಿತ್ರ)

ಮಂಗಳೂರು: ನಗರದಲ್ಲಿ ಏ.14ರಂದು ಪ್ರಧಾನಿ ನರೇಂದ್ರ ಮೋದಿ ಅವರ ರೋಡ್ ಶೋ ನಡೆಯಲಿರುವ ಮಾರ್ಗದಲ್ಲಿ ಇರುವ ಎಲ್ಲ ಜೇನುಗೂಡುಗಳನ್ನು ತೆರವುಗೊಳಿಸುವಂತೆ ನಗರ ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್‌ ಅವರು ಉಪಅರಣ್ಯ ಸಂರಕ್ಷಣಾಧಿಕಾರಿಗೆ ಪತ್ರ ಬರೆದಿದ್ದಾರೆ.

ADVERTISEMENT

ನಗರದ ನಾರಾಯಣಗುರು ವೃತ್ತದಿಂದ ನವಭಾರತ್ ಸರ್ಕಲ್‌ವರೆಗಿನ ರೋಡ್ ಶೋ ನಡೆಯುವ ಸ್ಥಳ, ವಾಹನ ನಿಲುಗಡೆ ಸ್ಥಳ, ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಹೆಲಿಪ್ಯಾಡ್, ಸೇಫ್ ಹೌಸ್ ಮತ್ತು ಸೇಫ್ ಆಸ್ಪತ್ರೆಗಳಾದ ಎ.ಜೆ. ಆಸ್ಪತ್ರೆ, ವೆನ್ಲಾಕ್ ಆಸ್ಪತ್ರೆ, ಕೆಎಂಸಿ, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರ ಕಚೇರಿ, ಎಸ್‌ಡಿಎಂ ಲಾ ಕಾಲೇಜು, ಸರ್ಕ್ಯೂಟ್ ಹೌಸ್ ಮತ್ತು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಗಣ್ಯರು ಸಂಚರಿಸುವ ಕಾರ್ಯಕ್ರಮದ ಸ್ಥಳದವರೆಗಿನ ಎಲ್ಲ ಮಾರ್ಗಗಳಲ್ಲಿ ಈ ಕ್ರಮ ವಹಿಸಬೇಕು ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

ಈ ಪತ್ರದ ಬಗ್ಗೆ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಟೀಕಾ ಪ್ರಹಾರ ನಡೆಸಿದ್ದಾರೆ.

‘ಇದೇನು ಹೊಸ ಕ್ರಮವಲ್ಲ. ಪ್ರಧಾನಿ ಅವರ ಭದ್ರತೆಯ ಮಾರ್ಗಸೂಚಿಯಂತೆಯೇ ನಾನು ಈ ಪತ್ರ ಬರೆದಿದ್ದೇನೆ’ ಎಂದು ಅನುಪಮ್‌ ಅಗ್ರವಾಲ್‌ ಪ್ರತಿಕ್ರಿಯಿಸಿದ್ದಾರೆ.

ನವ ಭಾರತ್ ಸರ್ಕಲ್‌ವರೆಗೆ ರೋಡ್ ಶೋ?

ಮಂಗಳೂರು: ಬಿಜೆಪಿ ಅಭ್ಯರ್ಥಿ ಪರ ಮತಯಾಚಿಸಲು ಪ್ರಧಾನಿ ನರೇಂದ್ರ ಮೋದಿ ಏ.14ರಂದು ಸಂಜೆ 5 ಗಂಟೆಗೆ ನಗರದಲ್ಲಿ ರೋಡ್ ಶೋ ನಡೆಸಲಿರುವುದರಿಂದ ಎಸ್‌ಪಿಜಿ ಅಧಿಕಾರಿಗಳು ಗುರುವಾರ ನಗರದಲ್ಲಿ ಭದ್ರತೆ ಪರಿಶೀಲಿಸಿದರು.

ಭದ್ರತೆ ದೃಷ್ಟಿಯಿಂದ ನಾರಾಯಣಗುರು ವೃತ್ತದಿಂದ ನವಭಾರತ್ ಸರ್ಕಲ್‌ವರೆಗೆ ಮಾತ್ರ ರೋಡ್ ಶೋ ನಡೆಸಲು ಎಸ್‌ಪಿಜಿ ಭದ್ರತಾ ವಿಭಾಗದ ಅಧಿಕಾರಿಗಳು ಒಪ್ಪಿಗೆ ಸೂಚಿಸಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.

ರೋಡ್ ಶೋ ನಡೆಯಲಿರುವ ರೂಟ್ ಮ್ಯಾಪ್ ಅನ್ನು ಬಿಜೆಪಿ ಸಿದ್ಧಪಡಿಸಿದೆ. ಇದರ ಪ್ರಕಾರ ನಗರದ ನಾರಾಯಣ ಗುರು ವೃತ್ತದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಪ್ರಾರಂಭವಾಗುವ ರೋಡ್ ಶೋ ಲಾಲ್ ಬಾಗ್, ಪಿವಿಎಸ್ ವೃತ್ತದ ಮಾರ್ಗವಾಗಿ ನವಭಾರತ್ ಸರ್ಕಲ್ ಮೂಲಕ ಕೆ.ಎಸ್‌.ರಾವ್ ರಸ್ತೆಯಲ್ಲಿ ಸಾಗಿ, ಹಂಪನಕಟ್ಟೆಯಲ್ಲಿ ಸಮಾಪ್ತಿಗೊಳ್ಳಲಿದೆ. ಈ ಮಾರ್ಗದಲ್ಲಿ ಭದ್ರತಾ ಅಧಿಕಾರಿಗಳ ಜೊತೆಗೆ ಸ್ಥಳೀಯ ಪೊಲೀಸ್ ಅಧಿಕಾರಿಗಳು ಕಾಲ್ನಡಿಗೆಯಲ್ಲಿ ಸಾಗಿ ಪರಿಶೀಲಿಸಿದರು. ಅವರ ಜೊತೆ ಬಿಜೆಪಿ ಪ್ರಮುಖರು, ಕಾರ್ಯಕರ್ತರು ಇದ್ದರು.

‘ರೋಡ್ ಶೋ ನಡೆಸಲು ಉದ್ದೇಶಿಸಿರುವ ರೂಟ್ ಮ್ಯಾಪ್ ಅನ್ನು ಭದ್ರತಾ ವಿಭಾಗದ ಅಧಿಕಾರಿಗಳಿಗೆ ನೀಡಲಾಗಿದೆ. ಮೋದಿ ಅವರ ಸುರಕ್ಷತೆ ದೃಷ್ಟಿಯಿಂದ ಅವರು ನೀಡಿದ ಸಲಹೆಯನ್ನು ಒಪ್ಪಿಕೊಳ್ಳಲಾಗುವುದು. ರೋಡ್ ಶೋ ವೇಳೆ ಮೋದಿ ಅವರು ಸಂಚರಿಸಲಿರುವ ವಾಹನ ಶುಕ್ರವಾರ ನಗರಕ್ಕೆ ಬಂದು ತಲುಪಲಿದೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್ ಕುಂಪಲ ಹೇಳಿದರು.

‘ಜಿಲ್ಲೆಯ ಎಲ್ಲ ಬೂತ್‌ಗಳಿಂದ ಕಾರ್ಯಕರ್ತರು ಬರಲಿದ್ದಾರೆ. ಎಲ್ಲ ಮಂಡಲಗಳನ್ನು ಸಂಪರ್ಕಿಸಿ ಮಾಹಿತಿ ನೀಡಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು, ಸಾರ್ವಜನಿಕರು ಸೇರುವ ನಿರೀಕ್ಷೆ ಇದೆ’ ಎಂದು ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.