ADVERTISEMENT

28ರಲ್ಲೂ ಗೆಲುವು ಸಾಧ್ಯವೇ? ನಾವು 20 ಕ್ಷೇತ್ರಗಳಲ್ಲಿ ಗೆಲ್ತೀವಿ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2024, 8:20 IST
Last Updated 24 ಮಾರ್ಚ್ 2024, 8:20 IST
   

ಮೈಸೂರು: ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲೂ ಗೆಲ್ಲುತ್ತೇವೆ ಎಂದು ಬಿಜೆಪಿಯವರಂತೆ ಹೇಳುವುದಿಲ್ಲ. ನಾವು 20 ಸ್ಥಾನಗಳನ್ನು ಗಳಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಇಲ್ಲಿ ಪತ್ರಕರ್ತರೊಂದಿಗೆ ಭಾನುವಾರ ಮಾತನಾಡಿದ ಅವರು, 28 ಕ್ಷೇತ್ರಗಳಲ್ಲೂ ಗೆಲ್ಲಲು ಸಾಧ್ಯವೇ? ನಾವು ಬಿಜೆಪಿಯವರಂತೆ ಸುಳ್ಳು ಹೇಳುವುದಿಲ್ಲ ಎಂದರು.

ಕಾಂಗ್ರೆಸ್ ಟಿಕೆಟ್ ಹಂಚಿಕೆಯಲ್ಲಿ ಯಾವ ಕಗ್ಗಂಟೂ ಆಗಿಲ್ಲ. ಎಳೆದಾಟವೂ ಆಗಿಲ್ಲ. ನಾಳೆ ಅಥವಾ ನಾಳಿದ್ದು ಉಳಿದ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಲಿದೆ. ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ನಮಗೆ ಅನುಕೂಲ ಆಗಲಿದೆ. ಈ ಹಿಂದೆ ಜೆಡಿಎಸ್ ಜೊತೆ ಮೈತ್ರಿ ಆಗಿದ್ದಾಗ ನಮಗೆ ಅನಾನುಕೂಲ ಆಗಿತ್ತು ಎಂದು ಹೇಳಿದರು.

ADVERTISEMENT

ನಾವು ನುಡಿದಂತೆ ನಡೆದಿದ್ದೇವೆ. ಬಿಜೆಪಿಯವರಂತೆ ಸುಳ್ಳು ಹೇಳಲ್ಲ.ಬಿಜೆಪಿಯವರು 600 ಭರವಸೆಗಳಲ್ಲಿ ಶೇ 10ರಷ್ಟನ್ನೂ ಈಡೇರಿಸಿಲ್ಲ. ಮೋದಿಯವರು ಜನಕ್ಕೆ ₹ 15 ಲಕ್ಷ ಕೋಟ್ರಾ, ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡಿದರಾ?ರೈತರ ಆದಾಯ ದ್ವಿಗುಣ ಮಾಡಿದಾರೆಯೇ? ಎಂದು ಕೇಳಿದರು.

ಕಾಂಗ್ರೆಸ್ ಟಿಕೆಟ್ ಹಂಚಿಕೆಯಲ್ಲಿ ಕುಟುಂಬ ರಾಜಕಾರಣಕ್ಕೆ ಆದ್ಯತೆ ನೀಡಲಾಗಿದೆ ಎಂಬ ಆರೋಪವನ್ನು ನಿರಾಕರಿಸಿದ ಅವರು, ಜನರು ಬಯಸಿದವರಿಗೆ ಟಿಕೆಟ್ ಕೊಟ್ಟಿದ್ದೇವೆ. ಇದರಲ್ಲಿ ಕುಟುಂಬ ರಾಜಕಾರಣ ಇಲ್ಲ ಎಂದು ಸಮರ್ಥಿಸಿಕೊಂಡರು.

ಹೆಚ್ಚಿನ ಕ್ಷೇತ್ರ ಗೆಲ್ಲದಿದ್ದರೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾಗಬಹುದು ಎಂಬ ಶಾಸಕ ಗುಬ್ಬಿ ಶ್ರೀನಿವಾಸ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಗುಬ್ಬಿ ಶ್ರೀನಿವಾಸ್ ಹೇಳಿಕೆಯನ್ನು‌ ಮಾಧ್ಯಮದವರು ಸಂಪೂರ್ಣವಾಗಿ ತೋರಿಸಿಲ್ಲ. ಅರ್ಧ ಮಾತ್ರ ಹಾಕಿದ್ದೀರಿ. ಸಿದ್ದರಾಮಯ್ಯ ಬಡವರ ಪರವಾಗಿ ಕೆಲಸ ಮಾಡಿದ್ದಾರೆ‌. ಜನರು ಅವರನ್ನು ಬೆಂಬಲಿಸಬೇಕು ಎಂದು ಅವರು ಹೇಳಿದ್ದಾರೆ. ಇದನ್ನು ಬಿಟ್ಟು ಬೇರೇನನ್ನೂ ಅವರು ಹೇಳಿಲ್ಲ ಎಂದು ತಿಳಿಸಿದರು.

ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ಕೆ.ವೆಂಕಟೇಶ್, ಶಾಸಕ ಡಿ.ರವಿಶಂಕರ್, ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಮುಡಾ ಅಧ್ಯಕ್ಷ ಕೆ.ಮರೀಗೌಡ, ಮಾಜಿ ಸಂಸದ ಕಾಗಲವಾಡಿ ಶಿವಣ್ಣ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.