ADVERTISEMENT

ಪ್ರಜ್ವಲ್‌ ಪ್ರಚಾರಕ್ಕೆ ಬರುವುದಾಗಿ ಯಡಿಯೂರಪ್ಪ ಭರವಸೆ: ಎಚ್‌.ಡಿ. ರೇವಣ್ಣ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2024, 13:43 IST
Last Updated 22 ಮಾರ್ಚ್ 2024, 13:43 IST
ಎಚ್.ಡಿ. ರೇವಣ್ಣ
ಎಚ್.ಡಿ. ರೇವಣ್ಣ   

ಹಾಸನ: ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌. ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಭೇಟಿ ಮಾಡಿದ್ದು, ಚುನಾವಣಾ ಪ್ರಚಾರಕ್ಕಾಗಿ ಹಾಸನ ಕ್ಷೇತ್ರಕ್ಕೆ ಬರುವುದಾಗಿ ಭರವಸೆ ನೀಡಿದ್ದಾರೆ ಎಂದು ಶಾಸಕ ಎಚ್.ಡಿ. ರೇವಣ್ಣ ತಿಳಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್- ಬಿಜೆಪಿ ಮೈತ್ರಿಕೂಟದಲ್ಲಿ ಮೂರೂ ಕ್ಷೇತ್ರಗಳಲ್ಲಿ ಜೆಡಿಎಸ್ ಸ್ಪರ್ಧಿಸಲು ಒಪ್ಪಿಗೆ ದೊರೆತಿದೆ. ಈ ಬಾರಿಯಾ ಲೋಕಸಭೆ ಚುನಾವಣೆಯಲ್ಲಿ ನಿಮ್ಮೊಂದಿಗೆ ನಾವಿದ್ದೇವೆ ಎಂದು ಯಡಿಯೂರಪ್ಪ ವಿಜಯೇಂದ್ರ, ಆರ್. ಅಶೋಕ್ ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಚುನಾವಣಾ ಪ್ರಚಾರಕ್ಕೆ ಹಾಗೂ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಬರುವುದಾಗಿ ಯಡಿಯೂರಪ್ಪ ತಿಳಿಸಿದ್ದಾರೆ ಎಂದು ರೇವಣ್ಣ ಹೇಳಿದರು.

ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ನಾವು ಗೆಲ್ಲುವುದಕ್ಕಿಂತ, ಮತ್ತೊಮ್ಮೆ ಮೋದಿ ಪ್ರಧಾನಿಯಾಗಿ ಕಾಣುವುದೇ ಮುಖ್ಯ ಉದ್ದೇಶವಾಗಿದೆ. ಈ ಬಗ್ಗೆ ಎಚ್.ಡಿ. ದೇವೇಗೌಡರೂ ಹಲವು ಬಾರಿ ಹೇಳಿದ್ದಾರೆ ಎಂದರು.

ADVERTISEMENT

ಮೈತ್ರಿ ಅಭ್ಯರ್ಥಿ ಪಟ್ಟಿ ಅಂತಿಮವಾಗಿ ಘೋಷಣೆಯಾದ ನಂತರ ಜಿಲ್ಲೆಯ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರನ್ನು ಭೇಟಿ ಮಾಡಿ ಬೆಂಬಲ ಕೋರಲಾಗುವುದು. ನಮಗೆ ಯಾವುದೇ ಅಭ್ಯಂತರವಿಲ್ಲ ಎಂದು ಸ್ಪಷ್ಟಪಡಿಸಿದರು.

ಇಂದು ಚುನಾವಣಾ ಪ್ರಚಾರ ಆರಂಭಿಸಿದ್ದು, ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ನಡೆಯಲಿದೆ. ನಂತರ ಜಿಲ್ಲಾ ವ್ಯಾಪ್ತಿಯಲ್ಲಿ ಮೈತ್ರಿ ಸಂಬಂಧ ಸಭೆಗಳನ್ನು ನಡೆಸಿ ಪ್ರಚಾರ ಆರಂಭಿಸಲಾಗುವುದು ಎಂದು ರೇವಣ್ಣ ಹೇಳಿದರು.

ಕಾಂಗ್ರೆಸ್ ಕೊಡುಗೆ ಏನು?: 60 ವರ್ಷ ರಾಜಕೀಯದಲ್ಲಿರುವ ರಾಷ್ಟ್ರೀಯ ಪಕ್ಷ ಕಾಂಗ್ರೆಸ್, ಅಲ್ಪಸಂಖ್ಯಾತರಿಗೆ, ಹಿಂದುಳಿದ ವರ್ಗದವರಿಗೆ ಯಾವ ಕೊಡುಗೆ ನೀಡಿದೆ. ಇಂದು ರಾಜ್ಯದಲ್ಲಿ ಒರಿಜಿನಲ್ ಕಾಂಗ್ರೆಸ್ ಇಲ್ಲ ಎಂದು ರೇವಣ್ಣ ಟೀಕಿಸಿದರು.

ಕಾಂಗ್ರೆಸ್ ಪಕ್ಷದ ನಾಯಕರು ಕೇವಲ ಅಧಿಕಾರಕ್ಕಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಜನರನ್ನು ಸೆಳೆಯುತ್ತಾರೆ ನಂತರ ಅವರ ಅಭಿವೃದ್ಧಿಗೆ ತೊಡಕಾಗಿದ್ದಾರೆ. ಗಂಗಾ ಕಲ್ಯಾಣ ಯೋಜನೆಯಡಿ ಜಿಲ್ಲೆಯಲ್ಲಿ ಸಾವಿರಾರು ಬೋರ್‌ವೆಲ್‌ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ. ಹಲವರಿಗೆ ಪರಿವರ್ತಕ ಒದಗಿಸುವಲ್ಲಿಯೂ ಸರ್ಕಾರ ವಿಫಲವಾಗಿದೆ ಎಂದು ದೂರಿದರು.

9 ತಿಂಗಳ ಕಾಂಗ್ರೆಸ್ ಆಡಳಿತದಲ್ಲಿ ಜಿಲ್ಲೆಯಲ್ಲಿ ಒಂದೇ ಒಂದು ಗಂಗಾ ಕಲ್ಯಾಣ ಯೋಜನೆಯಡಿ ಬೋರ್‌ವೆಲ್‌ಗೆ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ. ಈ ರೀತಿಯ ದುರಾಡಳಿತ ಕಾಂಗ್ರೆಸ್ ಸರ್ಕಾರದ್ದಾಗಿದೆ. ಅಲ್ಪಸಂಖ್ಯಾತರು ಹಾಗೂ ಹಿಂದುಳಿದವರಿಗೆ ಅಧಿಕಾರವನ್ನು ನೀಡಿದ್ದು ಜೆಡಿಎಸ್.  ಜಿಲ್ಲಾ ಪಂಚಾಯಿತಿ, ನಗರಸಭೆ, ಪ್ರಾಧಿಕಾರಗಳಿಗೆ ಸಮನಾಗಿ ಅಧಿಕಾರವನ್ನು ಎಲ್ಲ ಸಮುದಾಯಕ್ಕೂ ಹಂಚಿಕೆ ಮಾಡಿದ ಕೀರ್ತಿ ಜೆಡಿಎಸ್‌ಗೆ ಮಾತ್ರ ಸಲ್ಲುತ್ತದೆ ಎಂದರು.

ಜಿಲ್ಲೆಯಲ್ಲಿ ಅಲ್ಪಸಂಖ್ಯಾತರಿಗೆ, ಹಿಂದುಳಿದ ವರ್ಗದವರಿಗೆ ಕಾಂಗ್ರೆಸ್ ಏನಾದರೂ ಮಾಡಿದೆ ಎಂಬುದರ ದಾಖಲೆ ಇದ್ದರೆ ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು.

15 ವರ್ಷ ಶಿವಲಿಂಗೇಗೌಡ ಎಲ್ಲಿದ್ದರು?
ಪರಿಶಿಷ್ಟರಿಗೆ ಜೆಡಿಎಸ್ ಏನೂ ಮಾಡಿಲ್ಲ. ಸಂಸದರು ಎಸ್‍ಸಿ-ಎಸ್‍ಟಿ ಸಭೆ ಕರೆದಿಲ್ಲ ಎಂಬ ಅರಸೀಕೆರೆ ಶಾಸಕ ಶಿವಲಿಂಗೇಗೌಡರ ಆರೋಪಕ್ಕೆ ತಿರುಗೇಟು ನೀಡಿದ ರೇವಣ್ಣ ‘ಅವರು 15 ವರ್ಷ ಎಲ್ಲಿದ್ದರು. ಬಿಳಿಚೌಡಯ್ಯ ಹುಚ್ಚೇಗೌಡರಿಗೆ ಅಧಿಕಾರ ಕೊಟ್ಟಿದ್ದು ಯಾರು’ ಎಂದು ಪ್ರಶ್ನಿಸಿದರು. ಅವರಿಗೆ ಬದ್ಧತೆ ಇದ್ದಿದ್ದರೆ ಬಿಳಿ ಚೌಡಯ್ಯ ಅವರನ್ನು ಗೃಹ ಮಂಡಳಿ ಅಧ್ಯಕ್ಷರನ್ನಾಗಿ ಮಾಡಬೇಕಿತ್ತು. ಪುಟ್ಟೇಗೌಡರನ್ನು ವಿಧಾನ ಪರಿಷತ್‌ ಸದಸ್ಯರನ್ನಾಗಿ ಮಾಡ ಬಹುದಿತ್ತು. ನಮ್ಮಿಂದ ಹೋದ ಕೆಲ ಮುಖಂಡರನ್ನು ಬೀದಿಪಾಲು ಮಾಡಿದ್ದೇಕೆ ಎಂದು ಕೇಳಿದರು. ದೇವೇಗೌಡರ ಹೆಸರಲ್ಲಿ ಶಾಸಕರಾಗಿದ್ದರು. 9 ತಿಂಗಳಿಂದ ಅವರ ಸರ್ಕಾರ ಜಿಲ್ಲೆಗೆ ಏನು ಮಾಡಿದೆ ಹೇಳಲಿ ಎಂದು ಸವಾಲು ಹಾಕಿದ ರೇವಣ್ಣ ಹುಡಾ ಅಧ್ಯಕ್ಷ ಹುದ್ದೆಯನ್ನು ಹರಾಜಿಗೆ ಇಟ್ಟಿದ್ದು ಎಷ್ಟಕ್ಕೆ ಅಂತ ಜನರ ಮುಂದೆ ಹೇಳಲಿ ಎಂದರು ಆಗ್ರಹಿಸಿದರು. ಬಿಜೆಪಿ ಸಂಸದರು ನಪುಂಸಕರು ಎನ್ನುವ ಸಚಿವ ರಾಜಣ್ಣ ಅವರ ಪಕ್ಷದ ಕೊಡುಗೆ ಏನು?  ರಾಜ್ಯದ ನೀರಾವರಿ ಯೋಜನೆಗಳಿಗೆ ಹಣ ಕೊಡಲು ದೇವೇಗೌಡರು ಬರಬೇಕಿತ್ತಾ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.