ADVERTISEMENT

ಉದ್ಧವ್ ಠಾಕ್ರೆಯ ಟೀಕಿಸಿದ್ದ ಸಂಸದ ಕಿರಿತ್ ಸೋಮಯ್ಯಗಿಲ್ಲ ಬಿಜೆಪಿ ಟಿಕೆಟ್

ಮೈತ್ರಿ ಉಳಿಸಿಕೊಳ್ಳಲು ಹಾಲಿ ಸಂಸದನಿಗೇ ಟಿಕೆಟ್ ನೀಡದ ಬಿಜೆಪಿ

ಏಜೆನ್ಸೀಸ್
Published 3 ಏಪ್ರಿಲ್ 2019, 15:28 IST
Last Updated 3 ಏಪ್ರಿಲ್ 2019, 15:28 IST
ಕಿರಿತ್ ಸೋಮಯ್ಯ
ಕಿರಿತ್ ಸೋಮಯ್ಯ   

ಮುಂಬೈ:ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರನ್ನು 2017ರ ಪುರಸಭೆ ಚುನಾವಣೆ ವೇಳೆ ಟೀಕಿಸಿದ್ದ ಸಂಸದಕಿರಿತ್ ಸೋಮಯ್ಯ ಅವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿದೆ.

ಸೋಮಯ್ಯ ಬದಲಿಗೆ ಮುಂಬೈ ಈಶಾನ್ಯ ಕ್ಷೇತ್ರದಿಂದ ಕಾರ್ಪೊರೇಟರ್ ಮನೋಜ್ ಕೋಟಕ್ ಅವರನ್ನು ಕಣಕ್ಕಿಳಿಸಲಾಗಿದೆ.ಕಿರಿತ್ ಸೋಮಯ್ಯ ಅವರು ಟಿಕೆಟ್ ಆಕಾಂಕ್ಷಿಯಾಗಿದ್ದು ಮೂರು ವಾರಗಳ ಹಿಂದೆಯೇ ಪ್ರಚಾರವನ್ನೂ ಆರಂಭಿಸಿದ್ದರು.

ಮುಂಬೈ ಈಶಾನ್ಯ ಕ್ಷೇತ್ರದಲ್ಲಿ ಸೋಮಯ್ಯ ಅವರಿಗೆ ಟಿಕೆಟ್ ನೀಡುವುದನ್ನು ಶಿವಸೇನಾ ತೀವ್ರವಾಗಿ ವಿರೋಧಿಸಿತ್ತು. ಹೀಗಾಗಿ ಮೈತ್ರಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಬಿಜೆಪಿ ಪರ್ಯಾಯ ಅಭ್ಯರ್ಥಿಗೆ ಅವಕಾಶ ನೀಡಿದೆ.

ADVERTISEMENT

ಪುರಸಭೆ ಚುನಾವಣೆ ವೇಳೆ ಸೋಮಯ್ಯ ಅವರು ಠಾಕ್ರೆ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದರು. ಬಳಿಕ ಬಿಜೆಪಿ–ಶಿವಸೇನಾ ನಡುವಣ ಮೈತ್ರಿ ಹಳಸಿತ್ತು. ಒಂದು ಹಂತದಲ್ಲಿ, ಲೋಕಸಭೆ ಚುನಾವಣೆಯನ್ನು ಏಕಾಂಗಿಯಾಗಿ ಎದುರಿಸುವುದಾಗಿಯೂ ಶಿವಸೇನಾ ಹೇಳಿತ್ತು.

ಇತ್ತೀಚೆಗೆ ಉಭಯ ಪಕ್ಷಗಳೂ ಜತೆಯಾಗಿ ಲೋಕಸಭೆ ಚುನಾವಣೆಯ ಎದುರಿಸುವುದಾಗಿ ಘೋಷಿಸಿದ್ದವು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಗುಜರಾತ್‌ನ ಗಾಂಧಿನಗರದಲ್ಲಿ ನಾಮಪತ್ರ ಸಲ್ಲಿಸುವ ವೇಳೆ ಉದ್ಧವ್ ಠಾಕ್ರೆ ಸಹ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.