ADVERTISEMENT

ಪ್ರಧಾನಿ ಮೋದಿ ಕಳ್ಳರ ಗುಂಪಿನ ನಾಯಕ: ರಾಹುಲ್‌ ಗಾಂಧಿ ವಾಗ್ದಾಳಿ

ಚುನಾವಣಾ ಪ್ರಚಾರ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2019, 12:52 IST
Last Updated 13 ಏಪ್ರಿಲ್ 2019, 12:52 IST
ಕೋಲಾರದಲ್ಲಿ ಶನಿವಾರ ನಡೆದ ಕಾಂಗ್ರೆಸ್‌– ಜೆಡಿಎಸ್‌ ಮೈತ್ರಿಯ ಚುನಾವಣಾ ಪ್ರಚಾರ ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಕಾರ್ಯಕರ್ತರತ್ತ ಕೈ ಬೀಸಿದರು.
ಕೋಲಾರದಲ್ಲಿ ಶನಿವಾರ ನಡೆದ ಕಾಂಗ್ರೆಸ್‌– ಜೆಡಿಎಸ್‌ ಮೈತ್ರಿಯ ಚುನಾವಣಾ ಪ್ರಚಾರ ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಕಾರ್ಯಕರ್ತರತ್ತ ಕೈ ಬೀಸಿದರು.   

ಕೋಲಾರ: ‘ಪ್ರಧಾನಿ ನರೇಂದ್ರ ಮೋದಿ ಸುಳ್ಳಿನ ಸಾಮ್ರಾಜ್ಯ ಸೃಷ್ಟಿಸುತ್ತಿದ್ದಾರೆ. ಚೌಕೀದಾರ್‌ (ಕಾವಲುಗಾರ) ಎಂದು ಹೇಳಿಕೊಳ್ಳುವ ಅವರು ದೇಶದ ಸಂಪತ್ತು ಲೂಟಿ ಮಾಡಿದ್ದಾರೆ’ ಎಂದು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ತೀವ್ರ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಕೆ.ಎಚ್‌.ಮುನಿಯಪ್ಪ ಪರ ಇಲ್ಲಿ ಶನಿವಾರ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ, ‘ಮೋದಿ ಬಡ ಜನರ ಕಿಸೆಯಿಂದ ಹಣ ಕದ್ದು ನೀರವ್‌ ಮೋದಿ, ಮಲ್ಯ, ಲಲಿತ್‌ ಮೋದಿಯಂತಹ ಕಳ್ಳರಿಗೆ ಕೊಟ್ಟು ವಿದೇಶಕ್ಕೆ ಕಳುಹಿಸಿದ್ದಾರೆ. ಈ ಕಳ್ಳರ ಗುಂಪಿಗೆ ಮೋದಿಯೇ ನಾಯಕ’ ಎಂದು ವ್ಯಂಗ್ಯವಾಡಿದರು.

‘ಮೋದಿ 5 ವರ್ಷದಲ್ಲಿ ಏನು ಸಾಧನೆ ಮಾಡಿದ್ದಾರೆ ಎಂಬ ಬಗ್ಗೆ ಮಾತನಾಡುವುದಿಲ್ಲ. ದೇಶದ ಅಭಿವೃದ್ಧಿ, ನಿರುದ್ಯೋಗ ಸಮಸ್ಯೆ, ರೈತರ ಸಂಕಷ್ಟದ ಬಗ್ಗೆ ತುಟಿ ಬಿಚ್ಚುವುದಿಲ್ಲ. ಬಿಜೆಪಿಯ ಪ್ರಣಾಳಿಕೆಯಲ್ಲೂ ಈ ವಿಚಾರಗಳ ಪ್ರಸ್ತಾಪವಿಲ್ಲ. ದೇಶದ ಕಾವಲುಗಾರ ಎಂದು ಹೇಳಿಕೊಳ್ಳುವ ಮೋದಿ ನೂರಕ್ಕೆ ನೂರರಷ್ಟು ಕಳ್ಳ’ ಎಂದು ಕುಟುಕಿದರು.

ADVERTISEMENT

‘ಅನಿಲ್‌ ಅಂಬಾನಿಯನ್ನು ಬಾಚಿ ತಬ್ಬಿಕೊಳ್ಳುವ ಮೋದಿ ರೈತರನ್ನು ಆಲಂಗಿಸಿಕೊಳ್ಳುವುದಿಲ್ಲ. ವಂಚಕರಾದ ನೀರವ್‌ ಮೋದಿ, ಲಲಿತ್‌ ಮೋದಿ, ಮೆಹುಲ್ ಚೋಕ್ಸಿ ಜತೆ ಫೋಟೊ ತೆಗೆಸಿಕೊಳ್ಳುವ ಮೋದಿ ರೈತರನ್ನು ಹತ್ತಿರಕ್ಕೂ ಬಿಟ್ಟುಕೊಳ್ಳುವುದಿಲ್ಲ. ವಂಚಕರ ಹೆಸರೆಲ್ಲಾ ಮೋದಿ ಎಂದೇ ಅಂತ್ಯಗೊಳ್ಳುತ್ತದೆ. ರಫೇಲ್‌ ಹಗರಣ ಬಯಲಾದ ನಂತರ ಚೌಕೀದಾರ ಮೋದಿಯ ಮುಖಚರ್ಯೆಯೇ ಬದಲಾಯಿತು’ ಎಂದು ಟೀಕಿಸಿದರು.

ದೇಶಭಕ್ತರೇ ಅಲ್ಲ: ‘ಈ ಚುನಾವಣೆಯಲ್ಲಿ 2 ಪ್ರಮುಖ ವಿಚಾರಗಳಿವೆ. ಮೋದಿ ದೇಶ ಛಿದ್ರಗೊಳಿಸುವ ವಿಚಾರ ಮುಂದಿರಿಸಿದ್ದಾರೆ. ಕಾಂಗ್ರೆಸ್ ಎಲ್ಲರನ್ನೂ ಜತೆಯಲ್ಲಿ ಕರೆದೊಯ್ಯುವ ವಿಚಾರಾಧಾರೆ ಮುಂದಿಟ್ಟಿದೆ. ಬಿಜೆಪಿಯುವರು ದೇಶಭಕ್ತಿ ಬಗ್ಗೆ ಮಾತನಾಡುತ್ತಾರೆ. ಆದರೆ, ದೇಶಭಕ್ತರು ಕಳ್ಳತನ ಮಾಡುವುದಿಲ್ಲ. ಕಳ್ಳತನ ಮಾಡುವವರು ದೇಶಭಕ್ತರೇ ಅಲ್ಲ’ ಎಂದು ತಿರುಗೇಟು ನೀಡಿದರು.

ಸರಕು ಮತ್ತು ಸೇವಾ ತೆರಿಗೆ ಪದ್ಧತಿಯನ್ನು (ಜಿಎಸ್‌ಟಿ) ಗಬ್ಬರ್‌ ಸಿಂಗ್‌ ಟ್ಯಾಕ್ಸ್‌ ಎಂದು ಜರಿದ ರಾಹುಲ್‌ ಗಾಂಧಿ. ‘ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಜಿಎಸ್‌ಟಿ ರದ್ದುಗೊಳಿಸಿ ದೇಶದಲ್ಲಿ ಸರಳ ತೆರಿಗೆ ವ್ಯವಸ್ಥೆ ಜಾರಿಗೊಳಿಸುತ್ತದೆ. ರೈತರು ಕೃಷಿ ಸಾಲ ತೀರಿಸಲಾಗದೆ ಜೈಲಿಗೆ ಹೋಗದಂತಹ ಪರಸ್ಥಿತಿ ನಿರ್ಮಾಣ ಮಾಡುತ್ತೇವೆ. ಪ್ರತ್ಯೇಕ ಕೃಷಿ ಬಜೆಟ್‌ ಮಂಡಿಸುತ್ತೇವೆ’ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.