ADVERTISEMENT

ಒಡಿಶಾ: ಪಟ್ನಾಯಕ್‌ಗೆ ತಮಿಳು ಅಧಿಕಾರಿ ವಿ.ಕೆ. ಪಾಂಡಿಯನ್ ಬೆನ್ನೆಲುಬು!

​ಪ್ರಜಾವಾಣಿ ವಾರ್ತೆ
Published 11 ಮೇ 2019, 7:12 IST
Last Updated 11 ಮೇ 2019, 7:12 IST
ವಿ.ಕೆ. ಪಾಂಡಿಯನ್ (ಎಡ ಚಿತ್ರ) ಮತ್ತು ನವೀನ್ ಪಟ್ನಾಯಕ್
ವಿ.ಕೆ. ಪಾಂಡಿಯನ್ (ಎಡ ಚಿತ್ರ) ಮತ್ತು ನವೀನ್ ಪಟ್ನಾಯಕ್   

ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಬಳಿ ಮಾತನಾಡಬೇಕೆಂದರೆ ಅವರದೇ ಪಕ್ಷ ಬಿಜೆಡಿ (ಬಿಜು ಜನತಾ ದಳ) ಶಾಸಕರು, ಕಾರ್ಯಕರ್ತರೂ ವಿ. ಕಾರ್ತಿಕೇಯನ್ ಪಾಂಡಿಯನ್ ಬಳಿ ಅನುಮತಿ ಪಡೆಯಬೇಕು. ಅಷ್ಟರಮಟ್ಟಿಗೆ ಒಡಿಶಾದ ರಾಜಕೀಯ, ಆಡಳಿತದಲ್ಲಿ ಪ್ರಭಾವ ಬೀರಿದ್ದಾರೆವಿ.ಕೆ. ಪಾಂಡಿಯನ್. ಇವರು ಮತ್ತಾರೂ ಅಲ್ಲ, ಪಟ್ನಾಯಕ್ ಅವರ ಆಪ್ತ ಕಾರ್ಯದರ್ಶಿ.

2000ನೇ ಇಸವಿಯ ಬ್ಯಾಚ್‌ನ ಐಎಎಸ್‌ ಅಧಿಕಾರಿಯಾಗಿರುವ ಪಾಂಡಿಯನ್ ಒಡಿಶಾದಲ್ಲಿ ಸುದೀರ್ಘ ಅವಧಿಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಮಿಳುನಾಡು ಮೂಲದವರು. ಆಡಳಿತಯಂತ್ರವನ್ನು ಮುನ್ನಡೆಸುವ ವಿಚಾರದಲ್ಲಿ ಶಾಸಕರು, ಪಕ್ಷದ ನಾಯಕರ ಬದಲಿಗೆ ಅಧಿಕಾರಿ ವರ್ಗವನ್ನೇ ಹೆಚ್ಚು ನೆಚ್ಚಿಕೊಂಡಿದ್ದಾರೆ ಪಟ್ನಾಯಕ್. ಹೀಗಾಗಿ ಆಡಳಿತ ವಿಚಾರದಲ್ಲಿ ಪಟ್ನಾಯಕ್ ಕಣ್ಣು–ಕಿವಿ ಎಲ್ಲವೂಪಾಂಡಿಯನ್ ಅವರೇ ಆಗಿದ್ದಾರೆ. ಮುಖ್ಯಮಂತ್ರಿ ನಡೆಸುವ ಪ್ರತಿ ಮೀಟಿಂಗ್‌ಗಳಲ್ಲಿಯೂ ಪಾಂಡಿಯನ್ ಇದ್ದೇ ಇರುತ್ತಾರೆ. ಜತೆಗೆ, ಆಗಬೇಕಾದ ಕೆಲಸದ ಬಗ್ಗೆ ವಿವರಣೆ ನೀಡುವವರೂ ಅವರೇ ಎನ್ನುತ್ತಾರೆ ಒಡಿಶಾದ ಅನೇಕ ಅಧಿಕಾರಿಗಳು. ಒಡಿಶಾಗೆ ಭೇಟಿ ನೀಡಿದ್ದ ವೇಳೆ ಒಮ್ಮೆ ಪ್ರಧಾನಿ ನರೇಂದ್ರ ಮೋದಿ, ‘ಒಬ್ಬ ಅಧಿಕಾರಿ ಇಷ್ಟೊಂದು ಅಧಿಕಾರ ಹೊಂದಲು ಹೇಗೆ ಸಾಧ್ಯ?’ ಎಂದು ಪಾಂಡಿಯನ್ ಕುರಿತು ಪ್ರಶ್ನಿಸಿದ್ದರಂತೆ!

ಆರೋಗ್ಯದ ಬಗ್ಗೆಯೂ ಅತೀವ ಕಾಳಜಿ ವಹಿಸುವ ಪಾಂಡಿಯನ್ ದಿನಚರಿ ಬೆಳಿಗ್ಗೆ 4.30ಕ್ಕೇ ಆರಂಭಗೊಳ್ಳುತ್ತದೆ. ಜಾಗಿಂಗ್ ಮುಗಿಸಿದ ಬಳಿಕ ಮುಖ್ಯಮಂತ್ರಿಯವರ ಕಾರ್ಯಕ್ರಮಗಳ ಪಟ್ಟಿ ಸಿದ್ಧಪಡಿಸಿ ಸಂದೇಶ ಕಳುಹಿಸುವ ಪಾಂಡಿಯನ್; ಆ ದಿನ ಯಾರಿಗೆಲ್ಲ ಪಟ್ನಾಯಕ್ ಭೇಟಿಗೆ ಅವಕಾಶ ನೀಡಬೇಕು, ಆಡಳಿತಕ್ಕೆ ಸಂಬಂಧಿಸಿ ಏನೇನು ಕೆಲಸಗಳಾಗಬೇಕು ಎಂಬ ವಿಚಾರಗಳನ್ನೂ ನಿರ್ಧರಿಸಿ ಸಿದ್ಧರಾಗುತ್ತಾರೆ. ಪಟ್ನಾಯಕ್ ಕೂಡ ಹೆಚ್ಚು ಅಧಿಕಾರ ನೀಡಿರುವುದರಿಂದ ಕೆಲವೊಮ್ಮೆಪಾಂಡಿಯನ್‌ ಅವರಿಗಿಂತ ಹಿರಿಯ ಅಧಿಕಾರಿಗಳೂ ಕೆಲಸಕ್ಕಾಗಿ ಅವರ ಮುಂದೆ ಸರದಿಯಲ್ಲಿ ನಿಲ್ಲುವ ಪರಿಸ್ಥಿತಿ ಇದೆ.

ADVERTISEMENT

ಮಾಧ್ಯಮ ನಿರ್ವಹಣೆಯಲ್ಲಿಯೂ ಪಾಂಡಿಯನ್ ಪಾತ್ರ ಹೆಚ್ಚಿನದ್ದು. ಪಕ್ಷದ ಮೂಲಗಳ ಪ್ರಕಾರ, ಇತ್ತೀಚೆಗೆ ಬಿಜೆಡಿ ವಕ್ತಾರರೂ ಮಾಧ್ಯಮ ಪ್ರಕಟಣೆಗಳನ್ನು ನೀಡುವ ಮೊದಲು ಪಾಂಡಿಯನ್ ಅವರ ಬಳಿ ಮಾಹಿತಿ ನೀಡುತ್ತಾರಂತೆ. ಈ ಕುರಿತು ಬಿಜೆಡಿಯ ಕೆಲವು ಹಿರಿಯ ನಾಯಕರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಐಎಎಸ್‌ ಅಧಿಕಾರಿಯೊಬ್ಬರು ಪಕ್ಷದ ಆಂತರಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವುದನ್ನು ವಿರೋಧಿಸಿ ಕೆಲವು ನಾಯಕರು ಪಕ್ಷತ್ಯಾಗವನ್ನೂ ಮಾಡಿದ್ದಾರೆ. ಇಷ್ಟಾದರೂ ಪಾಂಡಿಯನ್ ಇನ್ನೂ ಒಡಿಶಾದ ಪ್ರಮುಖ ರಾಜಕೀಯ ಮತ್ತು ಆಡಳಿತಾತ್ಮಕ ವಿಚಾರಗಳ ನಿರ್ವಹಣೆಯಲ್ಲಿಪಟ್ನಾಯಕ್ ಅವರಿಗೆ ಬೆನ್ನೆಲುಬಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.