ADVERTISEMENT

ಕಲಬುರಗಿ ಉತ್ತರ ಕ್ಷೇತ್ರ ಚುನಾವಣೆ ಕಣದಿಂದ ಆಪ್ ಅಭ್ಯರ್ಥಿ ಹಿಂದಕ್ಕೆ; JDSಗೆ ಬೆಂಬಲ

​ಪ್ರಜಾವಾಣಿ ವಾರ್ತೆ
Published 8 ಮೇ 2023, 12:56 IST
Last Updated 8 ಮೇ 2023, 12:56 IST
ಸಜ್ಜಾದ್ ಅಲಿ ಇನಾಮದಾರ್
ಸಜ್ಜಾದ್ ಅಲಿ ಇನಾಮದಾರ್   

ಕಲಬುರಗಿ: ಕಲಬುರಗಿ ಉತ್ತರ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಸಜ್ಜಾದ್ ಅಲಿ ಇನಾಮದಾರ್ ಅವರು ಚುನಾವಣೆ ಕಣದಿಂದ ಹಿಂದಕ್ಕೆ ಸರಿದಿದ್ದು, ಜೆಡಿಎಸ್ ಅಭ್ಯರ್ಥಿ ಉಸ್ತಾದ್ ನಾಸಿರ್ ಹುಸೇನ್ ಅವರಿಗೆ ಬೆಂಬಲ ಘೋಷಿಸಿದ್ದಾರೆ.

ಇತ್ತೀಚಿನವರೆಗೂ ಚುನಾವಣಾ ಕಣದಲ್ಲಿ ಸಕ್ರಿಯವಾಗಿದ್ದ ಸಜ್ಜಾದ್ ಅಲಿ ಪರವಾಗಿ ಇತ್ತೀಚೆಗೆ ಆಮ್ ಆದ್ಮಿ ಪಕ್ಷದ ರಾಜ್ಯಸಭೆ ಸದಸ್ಯ ಸಂಜಯ್ ಸಿಂಗ್ ಪ್ರಚಾರ ನಡೆಸಿದ್ದರು. ಮುಂಚೆ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿದ್ದ ಸಜ್ಜಾದ್ ಅಲಿ ಅವರು ನಂತರ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಸೋಮವಾರ ಕಣದಿಂದ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ಜೆಡಿಎಸ್ ಸೇರ್ಪಡೆಯಾದರು.

‘ಕ್ಷೇತ್ರದಲ್ಲಿ ಮುಸ್ಲಿಂ ಬಾಹುಳ್ಯವಿದ್ದು, ಮುಸ್ಲಿಂ ಸಮುದಾಯದವರೇ ಶಾಸಕರಾಗಿ ಆಯ್ಕೆಯಾಗುತ್ತಿದ್ದಾರೆ. ನಾನು ಸ್ಪರ್ಧಿಸುವುದರಿಂದ ಸುಮಾರು 10ರಿಂದ 12 ಸಾವಿರ ಮತಗಳು ಬೀಳಬಹುದು. ಇದರಿಂದ ಜೆಡಿಎಸ್ ಅಭ್ಯರ್ಥಿ ಉಸ್ತಾದ್ ನಾಸಿರ್ ಹುಸೇನ್ ಅವರಿಗೆ ಸೋಲುಂಟಾಗಬಹುದು. ಆದ್ದರಿಂದ ಅವರನ್ನು ಗೆಲ್ಲಿಸಲು ಸ್ಪರ್ಧೆಯಿಂದ ಹಿಂದಕ್ಕೆ ಸರಿದಿದ್ದೇನೆ’ ಎಂದರು.

ADVERTISEMENT

ಕಣದಿಂದ ಪಕ್ಷದ ಅಭ್ಯರ್ಥಿ ಹಿಂದಕ್ಕೆ ಸರಿದ ಕುರಿತು ಪ್ರತಿಕ್ರಿಯಿಸಿದ ಆಮ್ ಆದ್ಮಿ ಪಕ್ಷದ ರಾಜ್ಯ ಜಂಟಿ ಕಾರ್ಯದರ್ಶಿ ದರ್ಶನ್ ಜೈನ್, ‘ಸಜ್ಜಾದ್ ಅಲಿ ಅವರು ಹಿಂದೆಯೇ ತಮ್ಮ ನಿಲುವು ತಿಳಿಸಿದ್ದರೆ ಬೇರೆ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿದ್ದೆವು. ಇವರ ಹಿರಿತನವನ್ನು ಪರಿಗಣಿಸಿ ಬೇರೆಯವರಿಗೆ ಟಿಕೆಟ್ ನಿರಾಕರಿಸಿ ನೀಡಿದ್ದೆವು. ಪಕ್ಷಕ್ಕೆ ದ್ರೋಹ ಮಾಡಬಾರದಿತ್ತು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.