ADVERTISEMENT

ಬ್ಯಾಡಗಿ ಕ್ಷೇತ್ರ: ಬಿಜೆಪಿ– ಕಾಂಗ್ರೆಸ್‌ನಲ್ಲಿ ಭಿನ್ನಮತದ ಘಾಟು!

ಬ್ಯಾಡಗಿ ವಿಧಾನಸಭಾ ಕ್ಷೇತ್ರದಲ್ಲಿ 7 ಬಾರಿ ಕಾಂಗ್ರೆಸ್‌ಗೆ, 3 ಬಾರಿ ಬಿಜೆಪಿಗೆ ಗೆಲುವು

ಸಿದ್ದು ಆರ್.ಜಿ.ಹಳ್ಳಿ
Published 10 ಏಪ್ರಿಲ್ 2023, 19:30 IST
Last Updated 10 ಏಪ್ರಿಲ್ 2023, 19:30 IST
ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ
ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ   

ಹಾವೇರಿ: ಅಂತರರಾಷ್ಟ್ರೀಯ ಮಟ್ಟದ ಖ್ಯಾತಿಯ ಮೆಣಸಿನಕಾಯಿ ಮಾರುಕಟ್ಟೆಯನ್ನು ಹೊಂದಿರುವ ಬ್ಯಾಡಗಿ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಯ ಘಾಟು ಕ್ಷೇತ್ರದ ತುಂಬ ಹರಡಿದೆ. ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ಇಲ್ಲಿ ನೇರ ಹಣಾಹಣಿ ಇದ್ದು, ಎರಡೂ ಪಕ್ಷಗಳಿಗೆ ‘ಆಂತರಿಕ ಭಿನ್ನಮತ’ದ್ದೇ ಚಿಂತೆಯಾಗಿದೆ.

2018ರ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಬಿಜೆಪಿಗೆ ಕ್ಷೇತ್ರ ಉಳಿಸಿಕೊಳ್ಳುವ ಅನಿವಾರ್ಯತೆ. 2013ರ ಚುನಾವಣೆಯಲ್ಲಿ ಜಯ ಸಾಧಿಸಿದ್ದ ಕಾಂಗ್ರೆಸ್‌ಗೆ ಕ್ಷೇತ್ರವನ್ನು ಮತ್ತೆ ‘ಕೈ’ವಶ ಮಾಡಿಕೊಳ್ಳುವ ತವಕವಿದೆ.

7 ಬಾರಿ ಕಾಂಗ್ರೆಸ್‌ಗೆ ಬೆಂಬಲ:

ADVERTISEMENT

1962ರಿಂದ 1972ವರೆಗೆ ಸಾಮಾನ್ಯ ಕ್ಷೇತ್ರವಾದ ಬ್ಯಾಡಗಿ, 1978ರಿಂದ 2004ರವರೆಗೆ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಯಿತು. 2008ರಲ್ಲಿ ಕ್ಷೇತ್ರಗಳ ಪುನರ್‌ ವಿಂಗಡಣೆಯಲ್ಲಿ ಮತ್ತೆ ಸಾಮಾನ್ಯ ಕ್ಷೇತ್ರವಾಗಿ ಪರಿವರ್ತನೆಗೊಂಡಿತು. ಒಟ್ಟು ಇಲ್ಲಿವರೆಗೆ ನಡೆದ 13 ಚುನಾವಣೆಗಳಲ್ಲಿ ಇಲ್ಲಿನ ಮತದಾರರು ಏಳು ಬಾರಿ ಕಾಂಗ್ರೆಸ್ ಬೆಂಬಲಿಸಿದ್ದರೆ, ಉಳಿದ ಐದು ಚುನಾವಣೆಗಳಲ್ಲಿ ಜನತಾ ಪಕ್ಷ, ಪ್ರಜಾ ಸೋಶಿಯಲಿಸ್ಟ್ ಪಕ್ಷ, ಜನತಾದಳಕ್ಕೆ ತಲಾ ಒಂದು ಬಾರಿ ಹಾಗೂ ಬಿಜೆಪಿಯನ್ನು ಮೂರು ಬಾರಿ ಬೆಂಬಲಿಸಿದ್ದಾರೆ.

ಪ್ರಥಮ ಶಾಸಕಿ:

ಸ್ವಾತಂತ್ರ್ಯಕ್ಕಾಗಿ ಪ್ರಾಣ ತ್ಯಾಗ ಮಾಡಿದ ಮೈಲಾರ ಮಹದೇವಪ್ಪ ಅವರಿಗೆ ಜನ್ಮ ನೀಡಿದ ಪುಣ್ಯಭೂಮಿ ಬ್ಯಾಡಗಿ ಕ್ಷೇತ್ರ. ಹುತಾತ್ಮ ಮೈಲಾರ ಮಹದೇವಪ್ಪ ಅವರ ಪತ್ನಿ ಸಿದ್ದಮ್ಮ ಮೈಲಾರ, ಕೆ.ಎಫ್.ಪಾಟೀಲ, ಮಹದೇವ ಬಣಕಾರ ಅವರಂಥ ಸಾಧಕರನ್ನು ವಿಧಾನಸೌಧಕ್ಕೆ ಕಳುಹಿಸಿದೆ. ಕ್ಷೇತ್ರ ರಚನೆಯಾದ ನಂತರ 1962ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಸಿದ್ದಮ್ಮ ಮಹದೇವಪ್ಪ ಮೈಲಾರ ಅವರು ಕಾಂಗ್ರೆಸ್‌ನಿಂದ ಗೆದ್ದು, ಪ್ರಥಮ ಶಾಸಕಿ ಎಂಬ ಶ್ರೇಯ ಪಡೆದಿದ್ದಾರೆ.

ಹಾಲಿ ಶಾಸಕರಿಗೆ ಕೈತಪ್ಪಿದ್ದ ಟಿಕೆಟ್‌:

2013ರ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಬಸವರಾಜ ಶಿವಣ್ಣನವರ ಜಯ ಸಾಧಿಸಿದ್ದರು. 2018ರ ಚುನಾವಣೆಯಲ್ಲಿ ಹಾಲಿ ಶಾಸಕರಿಗೆ ‘ಟಿಕೆಟ್ ಪಕ್ಕಾ’ ಎಂಬ ಮಾತು ಸುಳ್ಳಾಗಿ, ಸ್ಥಳೀಯ ಮುಖಂಡ ಕೋಟಾದಡಿ ಎಸ್.ಆರ್.ಪಾಟೀಲ ಅವರಿಗೆ ಕಾಂಗ್ರೆಸ್ ಟಿಕೆಟ್ ಸಿಕ್ಕಿತ್ತು. ಆದರೆ, ಎಸ್‌.ಆರ್.ಪಾಟೀಲ ಅವರು ಬಿಜೆಪಿ ಅಭ್ಯರ್ಥಿ ವಿರೂಪಾಕ್ಷಪ್ಪ ಬಳ್ಳಾರಿ ಎದುರು ಸೋಲು ಅನುಭವಿಸಿದ್ದರು.

2013ರಲ್ಲಿ ಕೆಜೆಪಿ ಪ್ರಬಲವಾಗಿದ್ದರೂ ಬಿಜೆಪಿಯಿಂದ ಸ್ಪರ್ಧಿಸಿ ಗಣನೀಯ ಮತಗಳನ್ನು ಪಡೆದಿದ್ದ ವಿರುಪಾಕ್ಷಪ್ಪ ಬಳ್ಳಾರಿಗೆ 2018ರಲ್ಲಿ ಪಕ್ಷವು ಮತ್ತೆ ಟಿಕೆಟ್ ನೀಡಿತ್ತು. ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದ ಬಳ್ಳಾರಿ ಪ್ರಥಮ ಬಾರಿಗೆ ಶಾಸಕರಾಗಿ ಆಯ್ಕೆಯಾದರು. ಆಗ ಬಿಜೆಪಿಯಿಂದ ಕಾಂಗ್ರೆಸ್‍ಗೆ ಹೋಗಿದ್ದ ಸುರೇಶಗೌಡ್ರ ಪಾಟೀಲ ಈಗ ಮರಳಿ ಬಿಜೆಪಿಗೆ ಬಂದು ಟಿಕೆಟ್ ಕೇಳುತ್ತಿದ್ದಾರೆ.

ಈ ಬಾರಿ ಬಸವರಾಜ ಶಿವಣ್ಣನವರಗೆ ಕಾಂಗ್ರೆಸ್‌ ಟಿಕೆಟ್‌ ಘೋಷಿಸಿದ್ದು, ಎಸ್‌.ಆರ್.ಪಾಟೀಲ ಬಂಡಾಯದ ಬಾವುಟ ಹಾರಿಸಿದ್ದಾರೆ. ಏಪ್ರಿಲ್‌ 8ರವರೆಗೆ ಕಾದು ನೋಡಿ, ನಂತರ ಬೆಂಬಲಿಗರ ಜೊತೆ ಸಭೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.

ಬಿಜೆಪಿಯಿಂದ ಹಾಲಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಅವರ ಸಹೋದರ ಸಿ.ಆರ್‌.ಬಳ್ಳಾರಿ, ಮಾಜಿ ಶಾಸಕ ಸುರೇಶಗೌಡ್ರ ಪಾಟೀಲ, ಮುರುಗೆಪ್ಪ ಶೆಟ್ರು, ಎಂ.ಎಸ್‌.ಪಾಟೀಲ ಮುಂತಾದವರು ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ. ಬಿಜೆಪಿಯ ಮೊದಲ ಪಟ್ಟಿ ಇದುವರೆಗೂ ಬಿಡುಗಡೆಯಾಗದ ಕಾರಣ ಆಕಾಂಕ್ಷಿಗಳಲ್ಲಿ ಟಿಕೆಟ್‌ಗಾಗಿ ತಳಮಳ ಜೋರಾಗಿದೆ.

ಭಿನ್ನಮತ ಶಮನಕ್ಕೆ ಬಿಜೆಪಿ ತಂತ್ರ

ಟಿಕೆಟ್‌ ಘೋಷಿಸಿದ ನಂತರ ಟಿಕೆಟ್ ವಂಚಿತ ಆಕಾಂಕ್ಷಿಗಳು ಬಂಡಾಯದ ಬಾವುಟ ಹಾರಿಸಬಾರದು ಎಂಬ ಮುನ್ನೆಚ್ಚರಿಕೆಯಿಂದ ಬಿಜೆಪಿ ಹೊಸ ತಂತ್ರ ರೂಪಿಸಿದೆ. ಬ್ಯಾಡಗಿ ಕ್ಷೇತ್ರದ ಪ್ರಬಲ ಟಿಕೆಟ್‌ ಆಕಾಂಕ್ಷಿಗಳಲ್ಲಿರುವ ಭಿನ್ನಮತ ಶಮನ ಮಾಡಲು ಬಿಜೆಪಿ ಹೈಕಮಾಂಡ್‌ ಪಕ್ಷದ ಸಂಸ್ಥಾಪನಾ ದಿನಾಚರಣೆ ಪ್ರಯುಕ್ತ ಎಲ್ಲ ಟಿಕೆಟ್‌ ಆಕಾಂಕ್ಷಿಗಳಿಗೆ ಪರಸ್ಪರ ಕಂಕಣ ಕಟ್ಟಿಸಿದೆ.

ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಅವರ ಸಹೋದರ ಸಿ.ಆರ್‌.ಬಳ್ಳಾರಿ, ಮಾಜಿ ಶಾಸಕ ಸುರೇಶಗೌಡ್ರ ಪಾಟೀಲ ಅವರು ಈಚೆಗೆ ಪರಸ್ಪರ ಕಂಕಣ ಧಾರಣೆ ಮೂಲಕ ಬಿಜೆಪಿಯ ಅಧಿಕೃತ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುತ್ತೇವೆ ಎಂದು ಶಪಥ ಮಾಡಿದ್ದಾರೆ.

***

ಬ್ಯಾಡಗಿ ಕ್ಷೇತ್ರ: ವಿಜೇತರ ವಿವರ

ವರ್ಷ;ವಿಜೇತ ಅಭ್ಯರ್ಥಿ;ಪಕ್ಷ

1962;ಸಿದ್ದಮ್ಮ ಮಹದೇವಪ್ಪ ಮೈಲಾರ;ಕಾಂಗ್ರೆಸ್‌

1967;ಎಂ.ಜಿ.ಬಣಕಾರ;ಪಿಎಸ್‌ಪಿ

1972;ಕೆ.ಎಫ್‌.ಪಾಟೀಲ;ಕಾಂಗ್ರೆಸ್‌

1978;ಎಂ.ಎಂ.ಮಾಳಗಿ;ಕಾಂಗ್ರೆಸ್‌

1983;ಎಚ್‌.ಡಿ.ಲಮಾಣಿ;ಕಾಂಗ್ರೆಸ್‌

1985;ಕೆ.ಎಸ್‌.ಬೀಳಗಿ;ಜನತಾಪಕ್ಷ

1989;ಎಚ್‌.ಡಿ.ಲಮಾಣಿ;ಕಾಂಗ್ರೆಸ್‌

1994;ಕೆ.ಎಸ್‌.ಬೀಳಗಿ;ಜನತಾದಳ

1999;ರುದ್ರಪ್ಪ ಲಮಾಣಿ;ಕಾಂಗ್ರೆಸ್‌

2004;ನೆಹರು ಓಲೇಕಾರ;ಬಿಜೆಪಿ

2008;ಸುರೇಶಗೌಡ್ರ ಪಾಟೀಲ;ಬಿಜೆಪಿ

2013;ಬಸವರಾಜ ಶಿವಣ್ಣನವರ್‌;ಕಾಂಗ್ರೆಸ್‌

2018;ವಿರೂಪಾಕ್ಷಪ್ಪ ಬಳ್ಳಾರಿ;ಬಿಜೆಪಿ

***

ಮತದಾರರ ವಿವರ

1,05,453– ಪುರುಷ ಮತದಾರರು

1,01,730– ಮಹಿಳಾ ಮತದಾರರು

2,07,188– ಒಟ್ಟು ಮತದಾರರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.