ADVERTISEMENT

ಗಾಂಧಿನಗರ ಕ್ಷೇತ್ರ: ಕಾಂಗ್ರೆಸ್‌–ಬಿಜೆಪಿ ಮಧ್ಯೆ ‘ಕ್ಲೈಮಾಕ್ಸ್‌’

ಸಾಕ್ಷಾತ್ ಸಮೀಕ್ಷೆ

ರವಿ ಪ್ರಕಾಶ್
Published 7 ಮೇ 2023, 21:15 IST
Last Updated 7 ಮೇ 2023, 21:15 IST
ದಿನೇಶ್ ಗುಂಡೂರಾವ್
ದಿನೇಶ್ ಗುಂಡೂರಾವ್   

ಬೆಂಗಳೂರು: ನಗರದ ವಾಣಿಜ್ಯ ಕೇಂದ್ರ ಬಿಂದುವಾಗಿರುವ ಗಾಂಧಿನಗರ ವಿಧಾನಸಭೆ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ತುರುಸಿನ ಪೈಪೋಟಿ ನಡೆದಿದೆ.

ಕೋವಿಡ್ ಬಳಿಕ ನಡೆಯುತ್ತಿರುವ ಈ ಚುನಾವಣೆ ಗಾಂಧಿ ನಗರದಲ್ಲಿ ಕೋವಿಡ್ ಕಾಲದ ಚರ್ಚೆ ಈಗಲೂ ನಡೆಯುತ್ತಿರುವುದು ವಿಶೇಷ. ಆಡಳಿತಾರೂಢ ಬಿಜೆಪಿ ಪರ ಮತ್ತು ವಿರೋಧ ಅಭಿಪ್ರಾಯಗಳು ಕೇಳಿ ಬರುತ್ತಿದೆ. ಇತರೆ ಯಾವುದೇ ಕ್ಷೇತ್ರಕ್ಕಿಂತ ಇಲ್ಲಿ ಕೋವಿಡ್‌ನಿಂದ ಬಾಧಿತರಾದವರು ಹೆಚ್ಚು. ಅಂಗಡಿಗಳು ಇರುವ ಇಲ್ಲಿ ಕಾರ್ಮಿಕರ ಸಂಖ್ಯೆಯೂ ಅಧಿಕ. ಸಂಕಷ್ಟಕ್ಕೀಡಾದವರಲ್ಲಿ ಇವರೇ ಅಧಿಕ. ಹೀಗಾಗಿ ಕಣ ರಂಗೇರಿದೆ.

ಕಾಂಗ್ರೆಸ್‌ನಿಂದ ದಿನೇಶ್‌ ಗುಂಡೂರಾವ್‌ ಈ ಬಾರಿಯೂ ಕಣದಲ್ಲಿದ್ದಾರೆ. ಐದು ಬಾರಿ ಗೆದ್ದಿರುವ ಅವರು ಆರನೇ ಬಾರಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಬಿಜೆಪಿಯಿಂದ ಸಪ್ತಗಿರಿಗೌಡ ಕಠಿಣ ಸ್ಪರ್ಧೆ ನೀಡಿದ್ದಾರೆ. ಆದರೆ, ಬಿಜೆಪಿಯ ಟಿಕೆಟ್ ಆಕಾಂಕ್ಷಿಯಾಗಿ ಎರಡು ವರ್ಷಗಳಿಂದ ಈ ಕ್ಷೇತ್ರದಲ್ಲಿ ಓಡಾಟ ನಡೆಸಿ, ಜನರ ಮನಗೆಲ್ಲುವ ಪ್ರಯತ್ನ ನಡೆಸಿದ್ದ ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಪಕ್ಷೇತರರಾಗಿ ಕಣಕ್ಕೆ ಇಳಿದಿದ್ದಾರೆ. ಇವರು ಬಿಜೆಪಿ ಅಭ್ಯರ್ಥಿಯ ಮತಗಳನ್ನು ಕಸಿಯುವ ಭೀತಿ ಎದುರಾಗಿದೆ.

ADVERTISEMENT

ಜೆಡಿಎಸ್‌ನಿಂದ ವಿ.ನಾರಾಯಣಸ್ವಾಮಿ ಅವರೂ ಕಣದಲ್ಲಿದ್ದಾರೆ. ಕಳೆದ ಬಾರಿ ಇವರು ಪ್ರಬಲ ಪೈಪೋಟಿ ನೀಡಿದ್ದರು. ಸಪ್ತಗಿರಿ ಗೌಡ ಮತ್ತು ಇವರ ನಡುವಿನ ಮತಗಳ ಅಂತರ ಸುಮಾರು 1,500 ದಷ್ಟಿತ್ತು. ಈ ಬಾರಿ ಒಟ್ಟು 15 ಮಂದಿ ಹುರಿಯಾಳುಗಳಿದ್ದಾರೆ. ಕೊಳೆಗೇರಿಗಳೇ ಹೆಚ್ಚಾಗಿದ್ದು ನಾಗರಿಕ ಸಮಸ್ಯೆಗಳೂ ಹೆಚ್ಚು. ಅಭಿವೃದ್ಧಿ ವಿಚಾರದಲ್ಲಿ ಅಕ್ಕಪಕ್ಕದ ಕ್ಷೇತ್ರಗಳಿಗೆ ಹೋಲಿಸಿದರೆ ಇಲ್ಲಿ ಏನೇನೂ ಸಾಲದು ಎಂಬ‌ ಮಾತು ಕೇಳಿಬರುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸು ಮತ್ತು ಸರ್ಕಾರದ ಅಭಿವೃದ್ಧಿ ಕೆಲಸಗಳು ಸಹಾಯವಾಗಬಹುದು ಎಂಬ ಲೆಕ್ಕಾಚಾರ ಬಿಜೆಪಿಯದು. ಇಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡ, ತಮಿಳರು, ಮಾರ್ವಾಡಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ.

ಸಪ್ತಗಿರಿ ಗೌಡ
ಕೃಷ್ಣಯ್ಯ ಶೆಟ್ಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.