ADVERTISEMENT

ಕರೆ ಮಾಡಿ ಹೊಸಬರಿಗೆ ಅವಕಾಶ ಕೊಡಿ ಎಂದ ಹೈಕಮಾಂಡ್‌: ಜಗದೀಶ್ ಶೆಟ್ಟರ್ ಆಕ್ರೋಶ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಏಪ್ರಿಲ್ 2023, 13:16 IST
Last Updated 11 ಏಪ್ರಿಲ್ 2023, 13:16 IST
ಜಗದೀಶ್ ಶೆಟ್ಟರ್
ಜಗದೀಶ್ ಶೆಟ್ಟರ್   

ಬೆಂಗಳೂರು: ಮಾಜಿ ಸಿಎಂ ಹಾಗೂ ಹುಬ್ಬಳ್ಳಿ ಕೇಂದ್ರ ಬಿಜೆಪಿ ಶಾಸಕ ಜಗದೀಶ್ ಶೆಟ್ಟರ್ ಅವರಿಗೆ ಹೈಕಮಾಂಡ್ ಟಿಕೆಟ್ ನಿರಾಕರಿಸಿರುವ ಸುದ್ದಿ ಹಿನ್ನೆಲೆಯಲ್ಲಿ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪಕ್ಷದ ವರಿಷ್ಠರಿಂದ ಬೆಳಗ್ಗೆ ಫೋನ್ ಬಂದಿತ್ತು. ನೀವು ಸೀನಿಯರ್, ಬೇರಿಯವರಿಗೆ ಅವಕಾಶ ಕೊಡಿ ಎಂದು ಹೇಳಿದ್ದಾರೆ. ನಾನು ಮೂವತ್ತು ವರ್ಷಗಳಿಂದ ಪಕ್ಷ ಕಟ್ಟಿ ಬೆಳೆಸಿದ್ದೇನೆ. ನೂರಾರು ಜನರಿಗೆ ಟಿಕೆಟ್ ಕೊಟ್ಟಿದ್ದೇನೆ. ಆರು ಸಾರಿ ಸ್ಪರ್ಧಿಸಿ ಗೆದ್ದು ಬಂದಿದ್ದೇನೆ. ನನಗೆ ಟಿಕೆಟ್ ನಿರಾಕರಿಸುತ್ತಿರುವುದಕ್ಕೆ ಕಾರಣ ತಿಳಿಸುವಂತೆ ಕೇಳಿದ್ದೇನೆ’ ಎಂದು ಆಕ್ರೋಶ ಹೊರಹಾಕಿದ್ದಾರೆ.

‘ಸಮೀಕ್ಷೆಯಲ್ಲಿ ಪಾಸಿಟಿವ್ ವರದಿ ಬಂದಿದೆ. ನನ್ನ ರಾಜಕೀಯ ಜೀವನದಲ್ಲಿ ಕಪ್ಪು ಚುಕ್ಕೆ ಇಲ್ಲ. ಪಕ್ಷ‌ ನಿಷ್ಠನಾಗಿ ಲಾಯಲ್ ಆಗಿ ಕೆಲಸ ಮಾಡಿದ್ದೇನೆ. ಲಾಯಲ್ ಆಗಿ ಕೆಲಸ ಮಾಡಿದವರಿಗೆ ಗೌರವ ಇಲ್ಲವೇ ಎಂದು ವರಿಷ್ಠರನ್ನು ಪ್ರಶ್ನಿಸಿದ್ದೇನೆ’ ಎಂದು ಶೆಟ್ಟರ್ ಹೇಳಿದ್ದಾರೆ.

ADVERTISEMENT

ವರಿಷ್ಠರ ಮಾತು ಕೇಳಿ ಮನಸ್ಸಿಗೆ ಬೇಸರವಾಗಿದೆ. ಇಷ್ಟು ವರ್ಷ ಪಕ್ಷ ಕಟ್ಟಿದ್ದಕ್ಕೆ ಬೆಲೆಯೇ ಇಲ್ಲವೇ ಎನಿಸಿದೆ. ವರಿಷ್ಠರ ತೀರ್ಮಾನ ನೋಡಿ ಮುಂದಿನ ನಿರ್ಧಾರ ತಿಳಿಸುತ್ತೇನೆ ಎಂದು ತಿಳಿಸಿದ್ದಾರೆ.

‘ನನಗೆ ಜನರ ಆರ್ಶೀವಾದವಿದೆ. ಹಾಗಾಗಿ ನಾನು ಸ್ಪರ್ಧಿಸುತ್ತೇನೆ. ನಿನ್ನೆ ಮೊನ್ನೆ ನಿಮಗೆ ಟಿಕೆಟ್‌ ಖಚಿತವಾಗಿದೆ ಎಂದು ಹೈಕಮಾಂಡ್ ಮೂಲಗಳು ತಿಳಿಸಿದ್ದವು. ಆದರೆ, ಇಂದು ಟಿಕೆಟ್‌ ನಿರಾಕರಿಸಿದ್ದಾರೆ. ಈಗಾಗಲೇ ಕ್ಷೇತ್ರದಲ್ಲಿ ಪ್ರಚಾರ ಆರಂಭಿಸಿದ್ದೇನೆ’ ಎಂದರು.

ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿರುವುದು ಕೆ.ಎಸ್‌. ಈಶ್ವರಪ್ಪ ಅವರ ವೈಯಕ್ತಿಕ ನಿಲುವು. ಈಶ್ವರಪ್ಪ ನಿರ್ಧಾರದ ಬಗ್ಗೆ ನಾನು ಮಾತನಾಡುವುದಿಲ್ಲ. ಜನ ಸಂಘದ ಕಾಲದಿಂದ ನಮ್ಮ ಕುಟುಂಬ ಬಿಜೆಪಿಯಲ್ಲಿದೆ. ಇಂತಹ ಕುಟುಂಬಕ್ಕೆ ಅನ್ಯಾಯ ಆಗುವುದಿಲ್ಲ ಎಂಬ ಭರವಸೆ ಇದೆ ಎಂದರು.

ಬೇರೆಯವರಿಗೆ ಅವಕಾಶ ಕೊಡಿ ಎಂದು ಹೇಳಿದ್ದಾರೆ. ಬೇರೆ ಯಾರು ಎನ್ನುವ ಬಗ್ಗೆ ಹೆಸರು ಹೇಳಿಲ್ಲ. ನಾನು ಯಡಿಯೂರಪ್ಪ ಜೊತೆ ಮಾತಾಡಿದ್ದೇನೆ. ರಾಜಕಾರಣದಲ್ಲಿ ಯಾವಾಗ ಏನು ಆಗುತ್ತೆ ಗೊತ್ತಿಲ್ಲ. ಕಾದು ನೋಡಿ ಸಮಯ ಬಂದಾಗ ಎಲ್ಲಾ ಹೇಳುತ್ತೇನೆ. ಬೇರೆ ಅವಕಾಶ ಕೊಡುತ್ತೇವೆ ಬಂದು ಭೇಟಿಯಾಗಿ ಎಂದಿದ್ದಾರೆ ಎಂದು ಶೆಟ್ಟರ್ ಹೇಳಿದ್ದಾರೆ.

ನಾನು ರಾಜಕಾರಣದಿಂದ ಹಿಂದೆ ಸರಿಯುವ ಮಾತಿಲ್ಲ. ಇನ್ನೂ ಹತ್ತು ವರ್ಷಗಳ ಕಾಲ ಸಕ್ರೀಯ ರಾಜಕಾರಣದಲ್ಲಿ ಇರುತ್ತೇನೆ. ಚುನಾವಣೆಗೆ ಸ್ಪರ್ಧಿಸುತ್ತೇನೆ, ಅತಿ ಹೆಚ್ಚು ಮತಗಳ ಅಂತರದಿಂದ ಗೆದ್ದು ಬರುತ್ತೇನೆ ಎಂದು ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇವನ್ನೂ ಓದಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.