ADVERTISEMENT

ಕಿಮ್ಮನೆ ರತ್ನಾಕರ್‌ಗೆ ತೀರ್ಥಹಳ್ಳಿ ಟಿಕೆಟ್‌

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2023, 18:42 IST
Last Updated 1 ಏಪ್ರಿಲ್ 2023, 18:42 IST
   

ಬೆಂಗಳೂರು: ತೀರ್ಥಹಳ್ಳಿ ಕ್ಷೇತ್ರದ ಟಿಕೆಟ್‌ಗಾಗಿ ಪೈಪೋಟಿಗಿಳಿದಿದ್ದ ಕಿಮ್ಮನೆ ರತ್ನಾಕರ್ ಮತ್ತು ಆರ್.ಎಂ. ಮಂಜುನಾಥ್ ಗೌಡ ಮಧ್ಯೆ ಕೆ‍ಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಶನಿವಾರ ಸಂಧಾನ ಸಭೆ ನಡೆಸಿದರು. ಮತ್ತೊಮ್ಮೆ ಕಿಮ್ಮನೆ ರತ್ನಾಕರ್ ಅವರನ್ನೇ ಕಣಕ್ಕಿಳಿಸಲು ಸಭೆಯಲ್ಲಿ ಸಹಮತ ವ್ಯಕ್ತವಾಗಿದೆ ಎಂದೂ ಗೊತ್ತಾಗಿದೆ.

ಕಿಮ್ಮನೆ ರತ್ನಾಕರ್‌ ಕ್ಷೇತ್ರದ ಮಾಜಿ ಶಾಸಕರಾಗಿದ್ದು, ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು. ಆದರೆ, ಈ ಬಾರಿ ಟಿಕೆಟ್ ಕೊಡುವಂತೆ ಮಂಜುನಾಥ್ ಗೌಡ ಬೇಡಿಕೆ ಇಟ್ಟಿದ್ದಾರೆ. ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕಿಮ್ಮನೆ ಅವರಿಗೆ ಚುನಾವಣಾ ಸಿದ್ಧತೆ ನಡೆಸುವಂತೆ ಮೌಖಿಕವಾಗಿ ಸೂಚಿಸಿದ್ದರು. ಅದರಂತೆ ಅವರು ಪ್ರಚಾರ ಆರಂಭಿಸಿದ್ದರು. ಆದರೆ, ಗೊಂದಲ ಕಾರಣದಿಂದಾಗಿ ಮೊದಲ ಪಟ್ಟಿಯಲ್ಲಿ ಕಿಮ್ಮನೆ ಹೆಸರು ‌ಘೋಷಣೆ ಆಗಿರಲಿಲ್ಲ.

ಸಭೆಯ ಬಳಿಕ ಮಾತನಾಡಿದ ಕಿಮ್ಮನೆ ರತ್ನಾಕರ್, ‘ತೀರ್ಥಹಳ್ಳಿ ಕ್ಷೇತ್ರದ ಟಿಕೆಟ್ ಯಾರಿಗೆ ಕೊಡಬೇಕು ಎಂಬುದು ಪಕ್ಷದ ತೀರ್ಮಾನಕ್ಕೆ ಬಿಟ್ಟಿದ್ದೇನೆ. ಯಾರ ವಕ್ರದೃಷ್ಟಿ ಬಿದ್ದಿದೆಯೋ ಗೊತ್ತಿಲ್ಲ, ಅವೆಲ್ಲಾ ಹೇಳೋಕೆ ನಾನು ಜ್ಯೋತಿಷ್ಯ ಕಲಿಯಬೇಕಷ್ಟೇ’ ಎಂದರು.

ADVERTISEMENT

‘ನಾನು ಒಂದಲ್ಲ ಮೂರು ಮೆಟ್ಟಿಲು ಇಳಿಯೋದಕ್ಕೆ ತಯಾರಿದ್ದೇನೆ. ಟಿಕೆಟ್ ವಿಚಾರವಾಗಿ ನಡೆದ ಸಭೆಯಲ್ಲಿ ನಮ್ಮಿಬ್ಬರ ಕಡೆಯಿಂದಲೂ ಒಂದೇ ರೀತಿಯ ಅಭಿಪ್ರಾಯ ವ್ಯಕ್ತವಾಗಿದೆ. ಯಾರಿಗೆ ಟಿಕೆಟ್ ನೀಡಿದರೂ ಒಗ್ಗಟ್ಟಾಗಿ ಕೆಲಸ ಮಾಡುವುದಾಗಿ ತಿಳಿಸಿದ್ದೇವೆ’ ಎಂದರು.

ಮಂಜುನಾಥ್ ಗೌಡ ಮಾತನಾಡಿ, ‘ಒಬ್ಬರಿಗೆ ವಿಧಾನಸಭೆ, ಒಬ್ಬರಿಗೆ ವಿಧಾನ ಪರಿಷತ್ ಎಂದು ಹೇಳಿದ್ರು. ಇಬ್ಬರೂ ಒಗ್ಗಟ್ಟಾಗಿ ಹೋಗಿ ಎಂದಿದ್ದಾರೆ. ನನ್ನ ಪ್ರಕಾರ ನನಗೇ ಟಿಕೆಟ್‌ ಕೊಡ್ತಾರೆ ಅಂದುಕೊಂಡಿದ್ದೇನೆ. ಯಾವುದೇ ಭಿನ್ನಾಭಿಪ್ರಾಯ ಇಲ್ಲದೇ ಕೆಲಸ ಮಾಡಬೇಕು ಎಂದು ಸೂಚಿಸಿದ್ದಾರೆ’ ಎಂದರು.

‘ಏಪ್ರಿಲ್ 4ರಂದು ಅಭ್ಯರ್ಥಿ ಘೋಷಣೆ ಮಾಡುವುದಾಗಿ ಹೇಳಿದ್ದಾರೆ. ಬಿಜೆಪಿಯನ್ನು ಸೋಲಿಸುವುದು ನಮ್ಮ ಗುರಿ. ಈ ಸಲ ನಾವು ಗೆಲ್ಲುವುದರಲ್ಲಿ ಅನುಮಾನ ಇಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.