ADVERTISEMENT

ಇಂದು ಬಿಜೆಪಿ ಶಾಸಕಾಂಗ ಪಕ್ಷದ ಸಭೆ: ಹೆಚ್ಚಿದ ಕುತೂಹಲ

​ಪ್ರಜಾವಾಣಿ ವಾರ್ತೆ
Published 16 ಮೇ 2018, 2:42 IST
Last Updated 16 ಮೇ 2018, 2:42 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಇಂದು ನಡೆಯಲಿದ್ದು, ಸರ್ಕಾರ ರಚನೆ ನಿಟ್ಟಿನಲ್ಲಿ ಬಿಜೆಪಿಯ ಮುಂದಿನ ನಡೆ ಏನಿರಬಹುದು ಎಂಬ ಕುತೂಹಲ ಹೆಚ್ಚಿದೆ.

ಬೆಳಿಗ್ಗೆ 10.30ಕ್ಕೆ ಸಭೆ ನಡೆಯಲಿದ್ದು, ಪಕ್ಷದ ಶಾಸಕಾಂಗ ನಾಯಕನ ಆಯ್ಕೆ ನಡೆಯಲಿದೆ.

ಕರ್ನಾಟಕದಲ್ಲಿ ಯಾವುದೇ ಕಾರಣಕ್ಕೂ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿ ಸರ್ಕಾರ ರಚನೆಗೆ ಅವಕಾಶ ನೀಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೇಳಿದ್ದರು.

ADVERTISEMENT

ರಾಜ್ಯದಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಜೆಡಿಎಸ್‌ ಅನ್ನು ಬೆಂಬಲಿಸುವುದಾಗಿ ಕಾಂಗ್ರೆಸ್‌ ಈಗಾಗಲೇ ಘೋಷಿಸಿದೆ. ಈ ಬಗ್ಗೆ ರಾಜ್ಯಪಾಲರಿಗೂ ಪತ್ರ ನೀಡಿದೆ. ಅಲ್ಲದೆ, ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಮತ್ತು ಕಾಂಗ್ರೆಸ್‌ನ ಪ್ರಮುಖ ಮುಖಂಡರು ಜತೆಯಾಗಿ ರಾಜಭವನಕ್ಕೆ ತೆರಳಿ ಸರ್ಕಾರ ರಚನೆಗೆ ಅವಕಾಶ ಕೋರಿದ್ದಾರೆ.

ಈ ಮಧ್ಯೆ, ಸಂಖ್ಯಾ ಬಲದ ಆಧಾರದಲ್ಲಿ ಅತಿ ಹೆಚ್ಚು ಸ್ಥಾನ (104) ಗಳಿಸಿರುವುದರಿಂದ ಸರ್ಕಾರ ರಚನೆಗೆ ಅವಕಾಶ ನೀಡಬೇಕು ಎಂದು ಬಿಜೆಪಿಯೂ ಕೋರಿದೆ. ಒಂದೆಡೆ, ರಾಜ್ಯಪಾಲರು ಯಾರಿಗೆ ಅವಕಾಶ ನೀಡುತ್ತಾರೆ ಎಂಬ ಕುತೂಹಲವಾದರೆ, ಮತ್ತೊಂದೆಡೆ ಬಿಜೆಪಿಯ ಮುಂದಿನ ನಡೆ ಏನೆಂಬ ಕೌತುಕವೂ ಹೆಚ್ಚಾಗಿದೆ.

ಕಾಂಗ್ರೆಸ್‌ 78 ಮತ್ತು ಜೆಡಿಎಸ್‌ 37 ಸ್ಥಾನ ಗಳಿಸಿವೆ. ಜತೆಗೆ ಪಕ್ಷೇತರರ ಬೆಂಬಲವೂ ತಮಗಿದೆ ಎಂದು ಹೇಳಿಕೊಂಡಿವೆ. ರಾಜ್ಯಪಾಲರು ಸರ್ಕಾರ ರಚಿಸಲು ಅವಕಾಶ ನೀಡಿದರೆ ಬಿಜೆಪಿ ಈ ಹಿಂದೆ ಮಾಡಿದಂತೆ ‘ಆಮರೇಷನ್ ಕಮಲ’ ನಡೆಸಲಿದೆಯೇ? ಕಾಂಗ್ರೆಸ್‌, ಜೆಡಿಎಸ್‌ ಮೈತ್ರಿ ಸರ್ಕಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಮೋದಿ ಹೇಳಿರುವುದು ಈ ಪ್ರಶ್ನೆ ಹುಟ್ಟುಹಾಕಿದೆ.

ಇನ್ನಷ್ಟು...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.