ADVERTISEMENT

ಜನರು ಮೂರ್ಖರಲ್ಲ: ಮೋದಿ ಬ್ಲಾಗ್‌ ಬರಹಕ್ಕೆ ಪ್ರಿಯಾಂಕಾ ತಿರುಗೇಟು

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2019, 20:24 IST
Last Updated 20 ಮಾರ್ಚ್ 2019, 20:24 IST
   

ಲಖನೌ:ಮೋದಿ ಅವರ ಬ್ಲಾಗ್‌ ಬರಹಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ‘ದೇಶದ ಜನರು ಮೂರ್ಖರಲ್ಲ, ಅವರು ಎಲ್ಲವನ್ನೂ ಗಮನಿಸುತ್ತಿದ್ದಾರೆ ಎಂಬುದನ್ನು ಮೋದಿ ಅರ್ಥ ಮಾಡಿಕೊಳ್ಳಬೇಕು’ ಎಂದಿದ್ದಾರೆ.

ಉತ್ತರ ಪ್ರದೇಶದ ಚುನಾವಣಾ ರ್‍ಯಾಲಿಯೊಂದರಲ್ಲಿ ಮಾತನಾಡಿದ ಅವರು, ‘ಕಳೆದ ಐದು ವರ್ಷಗಳಲ್ಲಿ ಮೋದಿ ದೇಶದ ಎಲ್ಲ ಸಂಸ್ಥೆಗಳನ್ನು ನಾಶ ಮಾಡಿದ್ದನ್ನು ಜನರು ನೋಡಿದ್ದಾರೆ. ಈ ಸರ್ಕಾರ ಜನರಿಗೆ ‘ಲಾಲಿಪಾಪ್‌’ ಬಿಟ್ಟು ಬೇರೇನನ್ನೂ ಕೊಟ್ಟಿಲ್ಲ. ಬಿಜೆಪಿ ವಿರುದ್ಧ ನಮ್ಮ ಹೋರಾಟ ಮುಂದುವರಿಯುತ್ತದೆ. ನಮಗೆ ಯಾವುದೇ ಭಯವಿಲ್ಲ’ ಎಂದು ಪ್ರಿಯಾಂಕಾ ಹೇಳಿದ್ದಾರೆ.

ಇನ್ನೊಂದು ಚುನಾವಣಾ ರ್‍ಯಾಲಿಯಲ್ಲಿ ಮೋದಿ ಅವರ ಆಡಳಿತವನ್ನು ಟೀಕಿಸಿದ ಪ್ರಿಯಾಂಕಾ, ‘ದೇಶದ ಅಭಿವೃದ್ಧಿಗಾಗಿ ಮೋದಿ ನೇತೃತ್ವದ ಸರ್ಕಾರ ಏನನ್ನೂ ಮಾಡಿಲ್ಲ. ರಾಜಕಾರಣದ ಉದ್ದೇಶ ದೇಶದ ಅಭಿವೃದ್ಧಿ ಆಗಿರಬೇಕೇ ವಿನಾ ಬೇರೇನೂ ಅಲ್ಲ. ಕಾಂಗ್ರೆಸ್‌ ಸರ್ಕಾರವು ದುಡಿಯುವ ಕೈಗಳಿಗೆ ಕೆಲಸ ಕೊಡುವಂಥ ‘ಉದ್ಯೋಗ ಖಾತ್ರಿ ಯೋಜನೆ’ಯನ್ನು ಜಾರಿ ಮಾಡಿತ್ತು. ಆದರೆ ಬಿಜೆಪಿ ಆಡಳಿತದಲ್ಲಿ ಕಾರ್ಮಿಕರು ಇರಬೇಕಾದ ಜಾಗದಲ್ಲಿ ಯಂತ್ರಗಳು ಬಂದು ಕುಳಿತಿವೆ. ನಿರುದ್ಯೋಗ ಹೆಚ್ಚಿದೆ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಬಡವರು ಮತ್ತು ಕೃಷಿಕರ ಪರವಾಗಿ ಕೆಲಸ ಮಾಡಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.