ADVERTISEMENT

ನಾತಿಚರಾಮಿ: ಇದು ಮಂಸೋರೆ ಮಾತು

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2018, 19:30 IST
Last Updated 1 ಮಾರ್ಚ್ 2018, 19:30 IST
ನಾತಿಚರಾಮಿ: ಇದು ಮಂಸೋರೆ ಮಾತು
ನಾತಿಚರಾಮಿ: ಇದು ಮಂಸೋರೆ ಮಾತು   

ಮಂಸೋರೆ ಮತ್ತೊಂದು ಚಿತ್ರ ನಿರ್ದೇಶನ ಮಾಡಲು ಅಣಿಯಾಗಿ ನಿಂತಿದ್ದಾರೆ. ಈ ಬಾರಿ ಅವರು ಶ್ರುತಿ ಹರಿಹರನ್‌ ಅವರನ್ನು ಚಿತ್ರತಂಡದಲ್ಲಿ ಸೇರಿಸಿಕೊಂಡು, ನಗರದ ಒತ್ತಡದ ಬದುಕಿನ ನಡುವೆ ಹೆಣ್ಣೊಬ್ಬಳು ಅನುಭವಿಸುವ ಸಂಕಟಗಳನ್ನು ಕಥೆಯ ರೂಪದಲ್ಲಿ ಹೇಳುವ ಯತ್ನಕ್ಕೆ ಮುಂದಾಗಿದ್ದಾರೆ.

ಮಂಸೋರೆ ಅವರ ಈ ಚಿತ್ರದ ಹೆಸರು ‘ನಾತಿಚರಾಮಿ’. ವಿವಾಹದ ಸಂದರ್ಭದಲ್ಲಿ ಹೇಳುವ ‘ಧರ್ಮೇ ಚ ಅರ್ಥೇ ಚ ಕಾಮೇ ಚ ನಾತಿಚರಾಮಿ’ ಎನ್ನುವ ಸಾಲಿನ ಒಂದು ಪದವನ್ನು ಅವರು ಶೀರ್ಷಿಕೆಯಾಗಿ ಆಯ್ಕೆ ಮಾಡಿಕೊಂಡಿದ್ದಾರೆ.

‘ನಾತಿಚರಾಮಿ ಅಂದರೆ ವಚನ ನೀಡುವುದು ಎಂಬ ಅರ್ಥ ಇದೆ. ವಚನ ನೀಡುವುದರ ಇನ್ನೊಂದು ಮುಖವನ್ನು ಹುಡುಕಲು ಯತ್ನಿಸುತ್ತಿದ್ದೇನೆ. ಬೆಂಗಳೂರಿನಲ್ಲಿ ಬದುಕು ಸಾಗಿಸುವ ಗೌರಿ ಎನ್ನುವ ಹೆಣ್ಣುಮಗಳ ಮೇಲೆ ಇಲ್ಲಿನ ಜೀವನಶೈಲಿ ಯಾವ ರೀತಿಯ ಪ್ರಭಾವ ಬೀರುತ್ತದೆ ಎಂಬುದನ್ನು ಕಂಡುಕೊಳ್ಳುವುದು ಈ ಚಿತ್ರ’ ಎಂದರು ಮಂಸೋರೆ.

ADVERTISEMENT

ಸಿನಿಮಾ ಕುರಿತು ಮಂಸೋರೆ ಆಡಿದ ಮಾತಿಗೆ ತಮ್ಮದೂ ಒಂದು ಮಾತನ್ನು ಶ್ರುತಿ ಥಟ್ಟನೆ ಸೇರಿಸಿದರು. ‘ಮದುವೆ ಎಂಬ ವ್ಯವಸ್ಥೆ ಏನು ಎಂಬ ಬಗ್ಗೆ ನಮ್ಮೊಳಗಿನ ಹುಡುಕಾಟವೂ ಹೌದು ಈ ಚಿತ್ರ’ ಎಂದರು ಶ್ರುತಿ.

‘ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವ ಒಂದು ಹೆಣ್ಣಿನ ಕಥೆ ಇದು. ಈ ಸಿನಿಮಾದ ಸ್ಕ್ರಿಪ್ಟ್‌ ನನ್ನೆದುರು ಬಂದಾಗ, ನನಗೊಂದು ಒಳ್ಳೆಯ ಅವಕಾಶ ಸಿಕ್ಕಿದೆ ಎಂದೇ ಭಾವಿಸಿದೆ. ಕಳೆದ ಐದು ವರ್ಷಗಳ ಅವಧಿಯಲ್ಲಿ ನನ್ನೊಳಗೆ ಒಂದು ಬದಲಾವಣೆ ನಡೆದಿದೆ. ನನ್ನಲ್ಲಿ ಪಕ್ವತೆ ಬಂದಿದೆ. ನನ್ನೊಳಗಿನ ಭಾವನೆಗಳನ್ನು ಅಭಿವ್ಯಕ್ತಿಸಲು ಈ ಸಿನಿಮಾ ಒಳ್ಳೆಯ ಅವಕಾಶ’ ಎಂದು ಒಂದೇ ಉಸುರಿನಲ್ಲಿ ಹೇಳಿದರು ಶ್ರುತಿ.

ಈ ಚಿತ್ರದಲ್ಲಿ ಬರುವ ಗೌರಿ ವೃತ್ತಿ ಜೀವನದಲ್ಲಿ ಯಶಸ್ಸು ಕಂಡಿದ್ದರೂ, ವೈಯಕ್ತಿಕ ಜೀವನದಲ್ಲಿ ತೊಂದರೆ ಎದುರಿಸುವ ಹೆಣ್ಣು. ಮಂಸೋರೆ ಮತ್ತು ಶ್ರುತಿ ಇಷ್ಟೆಲ್ಲ ಮಾಹಿತಿ ನೀಡಿದ್ದು ಚಿತ್ರದ ಮುಹೂರ್ತ ಕಾರ್ಯಕ್ರಮದ ನಂತರ.

ಸಿನಿಮಾ ಬದುಕಿನ ಸ್ವಾರಸ್ಯವೊಂದನ್ನು ಮಂಸೋರೆ ಇದೇ ಸಂದರ್ಭದಲ್ಲಿ ಹಂಚಿಕೊಂಡರು. ‘ಸಿನಿಮಾ ಮಾಡಲು ನಿರ್ಮಾಪಕರನ್ನು ಹುಡುಕಿಕೊಳ್ಳುವುದು ಎಷ್ಟು ಕಷ್ಟ ಎಂಬುದು ನನಗೆ ರಾಷ್ಟ್ರ ಪ್ರಶಸ್ತಿ ಗೆದ್ದ ನಂತರ ಗೊತ್ತಾಯಿತು. ನೀವು ಅವಾರ್ಡ್‌ ಪಡೆದವರಾ, ನಿಮ್ಮ ಸಿನಿಮಾಕ್ಕೆ ಹೆಚ್ಚಿನ ಬಂಡವಾಳ ಹೂಡುವುದು ಆಗದು, ಅವಾರ್ಡ್‌ ಸಿನಿಮಾಗಳಿಂದ ಹಣ ಅಷ್ಟೊಂದು ಪ್ರಮಾಣದಲ್ಲಿ ಬರುವುದಿಲ್ಲ ಎಂಬ ಮಾತುಗಳನ್ನು ಕೇಳಿಸಿಕೊಂಡೆ. ಸಿನಿಮಾ ಸಹವಾಸವೇ ಬೇಡ ಎನ್ನುವ ತೀರ್ಮಾನ ಕೈಗೊಳ್ಳುವವನಿದ್ದೆ’ ಎಂದರು ಮಂಸೋರೆ. ಆ ಒಂದು ಹಂತದಲ್ಲಿ ಈ ಚಿತ್ರದ ನಿರ್ಮಾಪಕರ ಭೇಟಿ ಆಯಿತಂತೆ, ಅವರು ಸಿನಿಮಾಕ್ಕೆ ಹಣ ಹೂಡಲು ಒಪ್ಪಿದರಂತೆ.


ಮಂಸೋರೆ

ಜಗನ್ಮೋಹನ ರೆಡ್ಡಿ, ಶಿವಕುಮಾರ ರೆಡ್ಡಿ ಈ ಚಿತ್ರದ ನಿರ್ಮಾಪಕರು. ಚಿತ್ರದ ಕಥೆ ಮತ್ತು ಸಂಭಾಷಣೆ ಎನ್. ಸಂಧ್ಯಾರಾಣಿ ಅವರದ್ದು. ಬಿಂದು ಮಾಲಿನಿ ಅವರು ಸಂಗೀತ ನಿರ್ದೇಶನದ ಹೊಣೆ ಹೊತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.