ADVERTISEMENT

ಯೋಗ ಮುದ್ರೆಯಲ್ಲಿ ‘ದೇವಸೇನಾ’ ಅನುಷ್ಕಾ ಶೆಟ್ಟಿ

ವಿಶಾಖ ಎನ್.
Published 7 ನವೆಂಬರ್ 2019, 4:40 IST
Last Updated 7 ನವೆಂಬರ್ 2019, 4:40 IST
   

ಪ್ರಯೋಗಶೀಲ ಚಿತ್ರಗಳು, ಸವಾಲು ಎನಿಸುವಂಥ ಪಾತ್ರಗಳನ್ನು ಸಾಲುಸಾಲಾಗಿ ನಿರ್ವಹಿಸಿರುವ ಕನ್ನಡತಿ ಅನುಷ್ಕಾ ಶೆಟ್ಟಿಗೆ ದೊಡ್ಡಮಟ್ಟದಲ್ಲಿ ಹೆಸರು ತಂದುಕೊಟ್ಟಿದ್ದು ‘ಬಾಹುಬಲಿ’ಯ ದೇವಸೇನಾ ಪಾತ್ರ. ‘ವೇದಂ’, ‘ಭಾಗಮತಿ’ಯಂಥ ಹಲವು ಚಿತ್ರಗಳಲ್ಲಿ ಅನುಷ್ಕಾ ಅಭಿನಯವನ್ನು ಚಿತ್ರರಸಿಕರು ಅಷ್ಟು ಸುಲಭವಾಗಿ ಮರೆಯಲಾರರು.

ಅನುಷ್ಕಾ–ಮಾಧವನ್ ಅಭಿನಯದ ‘ನಿಶ್ಯಬ್ದಂ’ ಚಿತ್ರದ ಟ್ರೇಲರ್ ಇದೀಗ ಯಟ್ಯೂಬ್‌ನಲ್ಲಿ ಸದ್ದು ಮಾಡುತ್ತಿದೆ. ಕನ್ನಡ, ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಸಿದ್ಧಗೊಳ್ಳುತ್ತಿರುವ ಈ ಚಿತ್ರವು ಮುಂದಿನ ವರ್ಷ ತೆರೆ ಕಾಣಲಿದೆ.

ಅಂದಹಾಗೆ ಇಂದು ನ.7, ಅನುಷ್ಕಾ ಶೆಟ್ಟಿ ಜನ್ಮದಿನವೂ ಹೌದು. ಪ್ರತಿಭೆ, ಅಂದ ಮೇಳೈಸಿರುವ ಈ ಅಪರೂಪದ ನಟಿ ನಡೆದು ಬಂದ ಹಾದಿಯ ಕಿರುಪರಿಚಯ ಇಲ್ಲಿದೆ.

ADVERTISEMENT

ಯೋಗ ಟೀಚರ್

ಬೆಂಗಳೂರಿನಲ್ಲಿ ಯೋಗ ಹೇಳಿಕೊಡುತ್ತಿದ್ದ ಎ.ಎನ್. ವಿಠಲ ಶೆಟ್ಟರ ಮಗಳು ಪ್ರಾಯದಲ್ಲೇ ಅನೇಕರ ಮನೋನಂದನ ಗಮನಿಸಿದ್ದರು. ಅಮ್ಮ ಪ್ರಫುಲ್ಲ ಮಗಳಿಗೆ ಸಂಸ್ಕಾರ ಕಲಿಸಿದ್ದರು. ಉಡುಗೆ-ತೊಡುಗೆ ಹೇಗಿರಬೇಕು ಎಂದು ಬೋಧಿಸಿದ್ದರು. ಮೌಂಟ್ ಕಾರ್ಮೆಲ್ ಕಾಲೇಜಿನ ಬಹು ಸಂಸ್ಕೃತಿಯ ಪರಿಚಯವೂ ಇತ್ತು.

‘ಒಂದು ತಿಂಗಳಲ್ಲಿ ಮದುವೆ ಇದೆ. ಸಣ್ಣಗಾಗಲು ಎಷ್ಟು ಬೇಕೋ ಅಷ್ಟು ಮಾತ್ರ ಯೋಗ ಹೇಳಿಕೊಡು’ ಎಂದು ಕೇಳಿಕೊಂಡು ಬಂದವರಿಂದ ಹಿಡಿದು, ‘ಮುಂದಿನ ವಾರ ನಿಶ್ಚಿತಾರ್ಥ. ಮದುವೆಯಾಗುವ ಹುಡುಗ ತೊಡೆ ಸಣ್ಣಗೆ ಮಾಡಿಕೋ ಎಂದಿದ್ದಾರೆ... ಹೆಲ್ಪ್ ಮಿ ಪ್ಲೀಸ್’ ಎಂದು ಆತಂಕ ಹೊತ್ತು ಬಂದವರವರೆಗೆ ತರಹೇವಾರಿ ಲಲನೆ- ವನಿತೆಯರನ್ನು ಈ ‘ಯೋಗ ಟೀಚರ್’ ನೋಡಿದ್ದರು.

ಭರತ್ ಠಾಕೂರ್ ಬಳಿ ಹೆಚ್ಚು ಗಂಭೀರವಾಗಿಯೇ ಯೋಗ ಕಲಿತಿದ್ದರಿಂದ ಅದರ ಸೂಕ್ಷ್ಮಗಳ ಅರಿವಿತ್ತು. ಬೆಂಗಳೂರಿನಲ್ಲಷ್ಟೇ ಅಲ್ಲ, ಮುಂಬೈನಲ್ಲೂ ಅನೇಕರಿಗೆ ಯೋಗ ಕಲಿಸಿದರು. 2005ರಲ್ಲಿ ಈ ಯೋಗ ಗುರು ತೆಲುಗಿನ ‘ಸೂಪರ್’ ಚಿತ್ರದ ಮೂಲಕ ಬೆಳ್ಳಿತೆರೆ ಪ್ರವೇಶಿಸಿದರು. ಅಕ್ಕಿನೇನಿ ನಾಗಾರ್ಜುನ ನಾಯಕರಾಗಿದ್ದ ಆ ಸಿನಿಮಾ ನಿರ್ದೇಶಿಸಿದ್ದು ಪೂರಿ ಜಗನ್ನಾಥ್.

‘ನಿನಗೆ ಕೆಟ್ಟ ಹೆಸರು ತರುವುದಿಲ್ಲ’

‘ಇಬ್ಬರೂ ನಾಯಕಿಯರ (ಆ ಚಿತ್ರದಲ್ಲಿ ಅಯೇಷಾ ಟಾಕಿಯಾ ಕೂಡ ಅಭಿನಯಿಸಿದ್ದರು) ದೇಹ ಸೌಂದರ್ಯ ಚಿತ್ರದಲ್ಲಿ ಸೊಗಸಾಗಿ ಅನಾವರಣಗೊಂಡಿದೆ’ ಎಂಬ ವಿಮರ್ಶೆಯ ಸಾಲೊಂದನ್ನು ಕಂಡು ಅಮ್ಮ ಪ್ರಫುಲ್ಲ ಚಿಂತಿತರಾದರು. ‘ಇದೇನು ಮಗಳೇ’ ಎಂಬ ಪ್ರಶ್ನೆ ಮುಂದಿಟ್ಟರು. ಆಗಲೂ ಅವರ ಮಗಳು ಯೋಗ ಮಾಡುತ್ತಾ, ‘ಚಿಂತಿಸಬೇಡ ಅಮ್ಮ… ನಿನ್ನ ಮಗಳು ಕೆಟ್ಟ ಹೆಸರು ತರುವುದಿಲ್ಲ’ ಎಂದು ಸಮಾಧಾನ ಹೇಳಿದ್ದರು.

‘ಬಾಹುಬಲಿ’ ಸರಣಿ ಚಿತ್ರಗಳ ದೇವಸೇನಾಳಾಗಿ 35ನೇ ವಯಸ್ಸಿನಲ್ಲೂ ಮಿಂಚಿರುವ ಅನುಷ್ಕಾ ಶೆಟ್ಟಿ ಹರೆಯದ ಬದುಕಿನ ಕೆಲವು ಪುಟಗಳಿವು.

‘ಬಾಹುಬಲಿ’ ಮೊದಲ ಭಾಗ ತೆರೆಕಂಡಾಗಲೂ ಅನೇಕರು ‘ಇಷ್ಟೆಯಾ ನಿನ್ನ ಪಾತ್ರ; ಕಾಲಿಗೆ ಸಂಕೋಲೆ ಹಾಕಿಕೊಂಡು ನಿಂತ ಕಡೆಯೇ ನಿಲ್ಲುವುದು’ ಎಂದು ಕೆಣಕಿದ್ದರು. ‘ಮುಂದಿನ ಭಾಗದವರೆಗೆ ಕಾಯಿರಿ’ ಎಂದು ತನ್ನನ್ನು ಟೀಕಿಸಿದವರಿಗೆ ಅನುಷ್ಕಾ ಉತ್ತರ ಕೊಟ್ಟಿದ್ದರು. 35ನೇ ವಯಸ್ಸಿನಲ್ಲೂ ಪ್ರಮಾಣಬದ್ಧ ದೇಹ ಉಳಿಸಿಕೊಳ್ಳುವುದು ಸವಾಲೇ ಸರಿ. ಆಗೆಲ್ಲ ನೆರವಿಗೆ ಬಂದಿರುವುದು ತಾನು ನಂಬಿದ ಯೋಗ.


ದೇಹದ ಮೇಲೇ ಪ್ರಯೋಗ

2015ರಲ್ಲಿ ‘ಸೈಜ್ ಜೀರೊ’ ಸಿನಿಮಾದ ನಾಯಕಿಯಾದಾಗ ದೇಹತೂಕ ಹೆಚ್ಚಿಸಿಕೊಳ್ಳಬೇಕಾಯಿತು. ಅದರ ಚಿತ್ರೀಕರಣ ಮುಗಿದ ಮೇಲೆ ‘ಬಾಹುಬಲಿ 2’ಗಾಗಿ ತೂಕ ಕಡಿಮೆ ಮಾಡಿಕೊಳ್ಳಬೇಕಾಯಿತು.

ಕೆಲವು ವರ್ಷಗಳ ಹಿಂದೆ ಉಳಿದ ನಟಿಯರಂತೆ ಅನುಷ್ಕಾ ಹೆಚ್ಚು ಡಯೆಟ್ ಮಾಡುತ್ತಿರಲಿಲ್ಲ. ಆಗ ‘ಅನುಷ್ಕಾ ದಿನೇದಿನೇ ದಪ್ಪಗಾಗುತ್ತಿದ್ದಾರೆ. ಅವರಿಗೆ ನಟಿಯಾಗಿ ದೀರ್ಘಕಾಲ ಉಳಿವಿಲ್ಲ’ ಎಂಬ ಧಾಟಿಯ ಗಾಸಿಪ್ ಪ್ರಕಟವಾಗಿತ್ತು. ಅದನ್ನು ಓದಿದ ಡಯಟಿಷಿಯನ್, ಈ ನಟಿಯ ಮನೆಗೆ ಹೋಗಿ ಪಾಠ ಹೇಳಿದ್ದರು.

ಮನಸ್ಸಿನಲ್ಲಿ ಕೆಲವು ದಿನ ಅಳುಕು ಉಳಿದಿತ್ತು. ಅದನ್ನು ಹೊರದೂಡಿದ್ದೂ ಯೋಗದಿಂದಲೇ. ಯಾವುದೋ ಬೇಡವಾದ ಸಂಗತಿ ಕಾಡುವಾಗಲೆಲ್ಲ ಅನುಷ್ಕಾ ಯೋಗ ಮಾಡಿಯೇ ಅದನ್ನು ಮೀರಿದ್ದಿದೆ. ‘ಅರುಂಧತಿ’ ಚಿತ್ರದ ಎರಡು ಭಿನ್ನ ಛಾಯೆಯ ಪಾತ್ರಗಳಲ್ಲಿ ಛಾಪುಮೂಡಿಸಿದ ಈ ನಟಿ, 12 ವರ್ಷಗಳ ವೃತ್ತಿಬದುಕಿನ ಏರಿಳಿತಗಳನ್ನು ನಿಭಾಯಿಸಿರುವ ರೀತಿ ಗಮನಾರ್ಹ. ಪ್ರಯೋಗಮುಖಿಯಾಗಿ, ಟೀಕೆಗಳನ್ನು ಎದುರಿಸಿಯೂ ಸುಖಿಯಾಗಿ ಇರುವುದೆಂದರೆ ತಮಾಷೆಯಾ? ‘ಅದು ನನ್ನ ಯೋಗಾಯೋಗವಷ್ಟೆ’ ಎನ್ನುವ ನಟಿ ತನ್ನೆದುರು ಅನೇಕ ಪ್ರಯೋಗಶೀಲ ಚಿತ್ರಗಳ ಸ್ಕ್ರಿಪ್ಟ್ ಹರಡಿಕೊಂಡು ಕುಳಿತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.