ಶಿವರಾಜ್‌ಕುಮಾರ್, ಉಪೇಂದ್ರ, ರಾಜ್ ಬಿ ಶೆಟ್ಟಿ ಅಭಿನಯದ ‘45’ ಚಿತ್ರತಂಡ ಶಿವಸ್ಮರಣೆ ಮಾಡಿದೆ. ಚಿತ್ರದ ಮೊದಲ ಹಾಡು ‘ಶಿವಂ ಶಿವಂ ಸನಾತನಂ’ ಗೀತೆ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ಅರ್ಜುನ್ ಜನ್ಯ ಚೊಚ್ಚಲ ನಿರ್ದೇಶನದ ಚಿತ್ರವಿದು. ಈ ಹಾಡಿನಲ್ಲಿ ಶಿವನ ರೌದ್ರಾವತಾರ ದರ್ಶನ ಮಾಡಿಸಲಾಗಿದೆ.
‘ಮೊದಲ ಚಿತ್ರದಿಂದಲೇ ಅರ್ಜುನ್ ಜನ್ಯ ಭಾರತದ ಒಳ್ಳೆಯ ನಿರ್ದೇಶಕ ಎನಿಸಿಕೊಳ್ಳುತ್ತಾರೆ ಎಂಬ ಭರವಸೆಯಿದೆ. ಸಿನಿಮಾಗೆ ಪೂರಕವಾಗಿ ಭಾವನೆ ತರುವ ಹಾಡಿದು. ನಾಗೇಂದ್ರ ಪ್ರಸಾದ್ ಅದ್ಭುತವಾದ ಸಾಹಿತ್ಯ ರಚಿಸಿದ್ದಾರೆ. ಅವರು ಸರಸ್ವತಿ ಪುತ್ರರು. ನನ್ನ ಬದುಕಿಗೆ ಬೆಸೆದುಕೊಳ್ಳುವ ಸಾಕಷ್ಟು ಅಂಶಗಳು ಈ ಸಿನಿಮಾದಲ್ಲಿದೆ. ಈ ಸಿನಿಮಾ ಭಾರತದಲ್ಲಿ ಟ್ರೆಂಡ್ ಆಗಬೇಕೆಂಬ ಆಸೆ. ಗ್ರಾಫಿಕ್ಸ್ ಸೂಪರ್ ಆಗಿದೆ. ಸಿನಿಮಾದಲ್ಲಿ ಸಾಕಷ್ಟು ವಿಷಯಗಳಿವೆ. ಸಿನಿಮಾ ಯಾವಾಗ ನೋಡುತ್ತೇನೆ ಎಂಬ ಆಸೆ ಶುರುವಾಗಿದೆ. ಕಳೆದ ವರ್ಷ ಕನ್ನಡ ಪೂರ್ತಿ ಡಬ್ ಮಾಡಿದೆ. ಈಗ ತಮಿಳು ಡಬ್ ಮಾಡುತ್ತಿದ್ದೇನೆ. ಎಲ್ಲ ಭಾಷೆಯಲ್ಲಿಯೂ ಪ್ರಯತ್ನ ಮಾಡುತ್ತೇನೆ. ನನ್ನ ಧ್ವನಿ ಎಲ್ಲ ಭಾಷೆಯಲ್ಲಿಯೂ ತಲುಪಲಿ ಎಂಬ ಆಸೆ’ ಎಂದರು ಶಿವಣ್ಣ.
‘ನಾನು ತುಂಬ ಒಳ್ಳೆಯವನು ಎನ್ನಲ್ಲ. ನನಗೆ ಪ್ರೀತಿ ಕೊಟ್ಟರೆ ತಿರುಗಿ ಪ್ರೀತಿ ಕೊಡುತ್ತೇನೆ. ಇಲ್ಲವಾದರೆ ಅವರ ಹಣೆಬರಹ, ಶಿವ ಎಂದು ಹೊರಟುಬಿಡುತ್ತೇನೆ. ಹೋಗುತ್ತೇನೆ. ಚಿತ್ರದ ನಿರ್ಮಾಪಕ ರಮೇಶ್ ರೆಡ್ಡಿ ಪ್ರೀತಿ ತೋರಿಸಿ, ನಮ್ಮ ಪ್ರೀತಿ ಗಳಿಸಿಕೊಂಡವರು. ಅವರು ಒಂದು ರೀತಿ ಕುಟುಂಬದ ಸದಸ್ಯ. ನಾಗರಾಜ ಶಿವಪುಟ್ಟಸ್ವಾಮಿ ಎಂದು ನನ್ನನ್ನು ಕರೆಯುತ್ತಾರೆ. ನನ್ನಲ್ಲಿಯೂ ಶಿವನಿದ್ದಾನೆ. ಈ ಹಿಂದೆ ಶಿವನ ಕುರಿತಾದ ಸಾಕಷ್ಟು ಹಾಡುಗಳಲ್ಲಿ ನಟಿಸಿರುವೆ. ಭಕ್ತಿ ಎಂದಿಗೂ ನಮ್ಮನ್ನು ಎಳೆದುಕೊಂಡು ಹೋಗುತ್ತದೆ. ಈ ಹಾಡು ಕೂಡ ಅದೇ ರೀತಿ ಇದೆ. ಸಿನಿಮಾದಲ್ಲಿ ಹಾಡಿನ ಕನೆಕ್ಷನ್ ಗೊತ್ತಾಗುತ್ತದೆ’ ಎಂದರು.
ಗೀತೆಗೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದು, ನಾಗೇಂದ್ರ ಪ್ರಸಾದ್ ಸಾಹಿತ್ಯವಿದೆ. ವಿಜಯ್ ಪ್ರಕಾಶ್ ಹಾಡಿದ್ದಾರೆ. ಸೂರಜ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ರಮೇಶ್ ರೆಡ್ಡಿ ಬಂಡವಾಳ ಹೂಡಿದ್ದಾರೆ. ಸತ್ಯ ಹೆಗಡೆ ಛಾಯಾಚಿತ್ರಗ್ರಹಣವಿದೆ.
‘ಈ ಹಾಡು ಹಾಗೂ ಚಿತ್ರ ಇಷ್ಟು ಚೆನ್ನಾಗಿ ಮೂಡಿಬರಲು ನಿರ್ಮಾಪಕ ರಮೇಶ್ ರೆಡ್ಡಿ ಪ್ರಮುಖ ಕಾರಣ. ಇನ್ನೂ, ನಾನು ನಿರ್ದೇಶನ ಮಾಡಲು ಪ್ರೇರಣೆ ನೀಡಿದವರೆ ಶಿವರಾಜ್‌ಕುಮಾರ್. ಸದ್ಯದಲ್ಲೇ ನಮ್ಮ ಚಿತ್ರತಂಡದಿಂದ ಅಭಿಮಾನಿಗಳಿಗೆ ಮತ್ತೊಂದು ಸಸ್ಪೆನ್ಸ್ ಇದೆ. ಆಗಸ್ಟ್‌ನಲ್ಲಿ ಚಿತ್ರ ತೆರೆಗೆ ಬರಲಿದ್ದು ಪೋಸ್ಟ್‌ಪ್ರೊಡಕ್ಷನ್ ಕೆಲಸಗಳು ಬಿರುಸಿನಿಂದ ನಡೆಯುತ್ತಿವೆ’ ಎಂದರು ಅರ್ಜುನ್ ಜನ್ಯಾ.
‘ಶಿವಂ ಶಿವಂ ಸನಾತನಂ, ಹರಂ ಹರಂ ಪುರಾತನಂ’ ಎಂಬ ಈ ಗೀತೆಯಲ್ಲಿ ಶಿವನ ರೌದ್ರಾವತಾರವನ್ನು ಗ್ರಾಫಿಕ್ಸ್‌ನಲ್ಲಿ ಕಟ್ಟಿಕೊಡಲಾಗಿದೆ. ದುಷ್ಟಶಕ್ತಿಗಳ ವಿರುದ್ಧ ಪರಮೇಶ್ವರನ ಹೋರಾಟದ ಸನ್ನಿವೇಶದ ಗೀತೆಯಿದು ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.