ಗೌರಿ ಸ್ಪ್ರಾಟ್ ಹಾಗೂ ಅಮೀರ್ ಖಾನ್
ಚಿತ್ರಕೃಪೆ: X/@GauriSpratt and DH Photo
ಮುಂಬೈ: ಬಾಲಿವುಡ್ ನಟ, 'ಮಿಸ್ಟರ್ ಪರ್ಫೆಕ್ಷನಿಸ್ಟ್' ಖ್ಯಾತಿಯ ಅಮೀರ್ ಖಾನ್ ಅವರ ಜನ್ಮದಿನ ಇಂದು (ಮಾರ್ಚ್ 14). ತಮ್ಮದೇ ಶೈಲಿಯಲ್ಲಿ ಸಂಭ್ರಮ ಆಚರಿಸಿಕೊಂಡಿರುವ ಅವರು, 60ನೇ ವಸಂತಕ್ಕೆ ಕಾಲಿಡುವ ಮುನ್ನಾದಿನ (ಗುರುವಾರ) ನಡೆದ ಕಾರ್ಯಕ್ರಮದಲ್ಲಿ ತಮ್ಮ ಹೊಸ ಸಂಗಾತಿ ಗೌರಿ ಸ್ಪ್ರಾಟ್ ಅವರನ್ನು ಮಾಧ್ಯಮದವರಿಗೆ ಪರಿಚಯಿಸಿದ್ದಾರೆ.
ತಾವಿಬ್ಬರು 25 ವರ್ಷಗಳಿಂದ ಪರಿಚಿತರು ಎಂದು ಕಾರ್ಯಕ್ರಮದಲ್ಲಿ ಖಾನ್ ತಿಳಿಸಿದ್ದಾರೆ.
ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್/ಟ್ವಿಟರ್‌ನಲ್ಲಿ ಖಾತೆ ಹೊಂದಿರುವ ಗೌರಿ, ತಮ್ಮನ್ನು ಬೆಂಗಳೂರಿನವರೆಂದು ಪರಿಚಯಿಸಿಕೊಂಡಿದ್ದಾರೆ.
ಯಾರು ಈ ಗೌರಿ ಸ್ಪ್ರಾಟ್?
ಲಂಡನ್ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರುವ ಗೌರಿ ಆಂಗ್ಲೋ–ಇಂಡಿಯನ್. ಅವರ ತಂದೆ ತಮಿಳುನಾಡು ಮೂಲದ ಬ್ರಿಟನ್ ಪ್ರಜೆ ಹಾಗೂ ತಾಯಿ ಪಂಜಾಬ್ ಮೂಲದ ಐರ್ಲೆಂಡ್‌ನವರು. ತಮ್ಮ ಗುರುತಿನ ಬಗ್ಗೆ ಕೇಳಿದರೆ ಗೌರಿ ಭಾರತೀಯಳೆಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.
ಗೌರಿ ಅವರ ತಾತ, ಬ್ರಿಟೀಷರ ವಿರುದ್ಧ ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿದ್ದರು. ಆ ಬಗ್ಗೆ ಇತಿಹಾಸಕಾರ ರಾಮಚಂದ್ರ ಗುಹಾ ಅವರೂ ಉಲ್ಲೇಖಿಸಿದ್ದಾರೆ ಎಂದು ಅಮೀರ್ ಖಾನ್ ತಿಳಿಸಿದ್ದಾರೆ.
ತಮಗಿರುವ 'ಸೂಪರ್‌ಸ್ಟಾರ್' ಹಣೆಪಟ್ಟಿಯ ಬಗ್ಗೆ ತನ್ನ ಸಂಗಾತಿಗೆ ಯಾವ ನಂಬಿಕೆಯೂ ಇಲ್ಲ ಎಂದಿರುವ ಅಮೀರ್, ಗೌರಿ ಇನ್ನಷ್ಟೇ ಬಾಲಿವುಡ್ ಮೋಹಕ್ಕೆ ಬೀಳಬೇಕಿದೆ. ಆ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದ್ದಾರೆ ಎಂದೂ ಹೇಳಿದ್ದಾರೆ.
ಗೌರಿ ಅವರನ್ನು ಸಂಬಂಧಿಯೊಬ್ಬರು ಅಮೀರ್ ಖಾನ್‌ಗೆ ಪರಿಚಯಿಸಿದ್ದರು. ನಂತರ, ಇಬ್ಬರೂ ಪರಸ್ಪರ ಮೊಬೈಲ್ ಸಂಖ್ಯೆ ವಿನಿಮಮ ಮಾಡಿಕೊಂಡಿದ್ದರು. ಒಂದು ವರ್ಷದಿಂದ ಸಹಜೀವನ ನಡೆಸುತ್ತಿದ್ದಾರೆ. ಆದರೆ, ಕಾರ್ಯಕ್ರಮದಲ್ಲಿ ಮದುವೆ ಕುರಿತ ಪ್ರಶ್ನೆಗಳಿಗೆ ನಿರಾಕರಿಸಿದ ಅಮೀರ್, ತಮ್ಮ ಸಂಬಂಧದಲ್ಲಿ ಹರ್ಷವಿದೆ ಎಂದು ಹೇಳಿದ್ದಾರೆ.
ನಟ ಶಾರುಖ್ ಖಾನ್ ಪತ್ನಿ ಗೌರಿ ಖಾನ್ ಅವರನ್ನು ಉಲ್ಲೇಖಿಸಿ ತಮ್ಮ ಸಂಗಾತಿಯನ್ನು 'ಬಾಲಿವುಡ್‌ನ ಮತ್ತೊಬ್ಬ ಗೌರಿ' ಎಂದು ಚಟಾಕಿ ಹಾರಿಸಿದ ಅಮೀರ್, ಇಬ್ಬರ ಸಂಬಂಧವು ಸಂತೋಷ ಮತ್ತು ಬದ್ಧತೆಯಿಂದ ಕೂಡಿದೆ ಎಂದಿದ್ದಾರೆ.
ಅಮೀರ್ ಅವರು ಮನೆಯವರಿಗೆ ತಮ್ಮನ್ನು ಪರಿಚಯಿಸಿದಾಗ ಎಲ್ಲರೂ ತುಂಬುಹೃದಯದಿಂದ ಸ್ವಾಗತಿಸಿದರು ಎಂದು ಗೌರಿ ಹೇಳಿದ್ದಾರೆ.
ಆರು ವರ್ಷದ ಬಾಲಕನ ತಾಯಿಯಾಗಿರುವ ಗೌರಿ, ಅಮೀರ್ ನಟನೆಯ ಎರಡು ಸಿನಿಮಾಗಳನ್ನಷ್ಟೇ (ಲಗಾನ್, ದಂಗಲ್) ನೋಡಿದ್ದೇನೆ ಎಂದಿದ್ದಾರೆ.
ಸಲ್ಮಾನ್ ಖಾನ್ ಹಾಗೂ ಶಾರುಖ್ ಖಾನ್ ಅವರು ಬುಧವಾರ ಅಮೀರ್ ಅವರ ನಿವಾಸಕ್ಕೆ ಭೇಟಿ ನೀಡಿದ್ದರು. ಆ ವೇಳೆ, ಗೌರಿ ಸಹ ಮನೆಯಲ್ಲೇ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.