ADVERTISEMENT

ಟರ್ಕಿ ಅಧ್ಯಕ್ಷರ ಪತ್ನಿ ಜೊತೆಗೆ ಅಮೀರ್‌ ಖಾನ್ ಮಾತುಕತೆ: ನೆಟ್ಟಿಗರು ಗರಂ‌

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2020, 10:04 IST
Last Updated 17 ಆಗಸ್ಟ್ 2020, 10:04 IST
ಎಮೈನ್ ಎರ್ಡೊಗನ್ ಮತ್ತು ಅಮೀರ್‌ ಖಾನ್‌ ಮಾತುಕತೆಯಲ್ಲಿ ತೊಡಗಿರುವುದು
ಎಮೈನ್ ಎರ್ಡೊಗನ್ ಮತ್ತು ಅಮೀರ್‌ ಖಾನ್‌ ಮಾತುಕತೆಯಲ್ಲಿ ತೊಡಗಿರುವುದು   

ಬಾಲಿವುಡ್ ನಟ ಅಮೀರ್‌ ಖಾನ್‌ ನಟನೆಯ ‘ಲಾಲ್‌ ಸಿಂಗ್‌ ಛಡ್ಡಾ’ ಚಿತ್ರ ಇಂಗ್ಲಿಷ್‌ನ ‘ಫಾರೆಸ್ಟ್‌ ಗಂಪ್’ ಸಿನಿಮಾದ ಹಿಂದಿ ರಿಮೇಕ್‌ ಎಂಬುದು ಹಳೆಯ ಸಂಗತಿ. ಕೋವಿಡ್‌–19 ಪರಿಣಾಮ ಇದರ ಶೂಟಿಂಗ್‌ ಸ್ಥಗಿತಗೊಂಡಿತ್ತು. ಈಗ ಶೂಟಿಂಗ್‌ ನಡೆಸಲು ಚಿತ್ರತಂಡ ನಿರ್ಧರಿಸಿದ್ದು, ಅಮೀರ್‌ ಖಾನ್‌ ಟರ್ಕಿಗೆ ತೆರಳಿದ್ದಾರೆ. ಅಲ್ಲಿ ಅವರು ಪಾಕಿಸ್ತಾನವನ್ನು ಬೆಂಬಲಿಸಿದ್ದ ಟರ್ಕಿ ದೇಶದ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಅವರ ಪತ್ನಿಯೂ ಆಗಿರುವ, ಆ ದೇಶದ ಪ್ರಥಮ ಮಹಿಳೆ ಎಮೈನ್ ಎರ್ಡೊಗನ್ ಅವರನ್ನು ಭೇಟಿ ಮಾಡುವುದು ಈಗ ವಿವಾದಕ್ಕೆ ನಾಂದಿ ಹಾಡಿದೆ.

ಇಸ್ತಾಂಬುಲ್‌ನಲ್ಲಿರುವ ಅಧ್ಯಕ್ಷರ ನಿವಾಸದಲ್ಲಿಯೇ ಈ ಭೇಟಿ ನಡೆದಿದೆ. ಅಂದಹಾಗೆ ಈ ಭೇಟಿ ನಡೆದಿರುವುದು ಸ್ವಾತಂತ್ರ್ಯ ದಿನಾಚರಣೆಯ ದಿನದಂದೇ. ಈ ಬಗ್ಗೆ ನೆಟ್ಟಿಗರು ‘ಮಿಸ್ಟರ್‌ ಪರ್ಫೆಕ್ಟ್’ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವಾಕ್ಸಮರ ನಡೆಸಿದ್ದಾರೆ.

ಕಳೆದ ವರ್ಷ ಕೇಂದ್ರ ಸರ್ಕಾರವು ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿತ್ತು. ಈ ಬೆಳವಣಿಗೆಯ ಬಳಿಕ ಟರ್ಕಿಯು ಪಾಕಿಸ್ತಾನದ ಜೊತೆಗೆ ಕೈಜೋಡಿಸಿತ್ತು. ಮತ್ತೊಂದೆಡೆ ಟರ್ಕಿಯ ವಿದೇಶಾಂಗ ಸಚಿವಾಲಯದ ವಕ್ತಾರರು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದಾಗಿದ್ದರಿಂದ ಆ ಪ್ರದೇಶದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಹದಗೆಡುತ್ತಿದೆ ಎಂದು ಇತ್ತೀಚೆಗೆ ಪ್ರತಿಕ್ರಿಯಿಸಿದ್ದು ದೊಡ್ಡ ಸುದ್ದಿಯಾಗಿತ್ತು. ಈ ನಡುವೆಯೇ ಅಮೀರ್‌ ಅವರ ಭೇಟಿ ವಿವಾದಕ್ಕೆ ಕಾರಣವಾಗಿದೆ.

ADVERTISEMENT

ಅಮೀರ್‌ ಅವರ ಮನವಿ ಮೇರೆಗೆಯೇ ಈ ಮೀಟಿಂಗ್‌ ನಡೆದಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಅಮೀರ್‌ ಮತ್ತು ಅವರ ಪತ್ನಿ ಕಿರಣ್‌ ರಾವ್‌, ತಮ್ಮ ಪಾನಿ ಪೌಂಡೇಶನ್‌ನ ಕಾರ್ಯ ಚಟುವಟಿಕೆಗಳು ಸೇರಿದಂತೆ ವಿವಿಧ ವಿಷಯ ಕುರಿತು ಎಮೈನ್ ಎರ್ಡೊಗನ್ ಜೊತೆಗೆ ಚರ್ಚಿಸಿದ್ದಾರೆ. ಕೆಲಕಾಲ ಟರ್ಕಿಯಲ್ಲಿ ಕಿರಣ್‌ ರಾವ್‌ ತಂಗಿದ್ದರಂತೆ. ಆ ವಿಷಯವನ್ನು ಅಮೀರ್‌ ಮಾತುಕತೆ ವೇಳೆ ಹಂಚಿಕೊಂಡಿದ್ದಾರೆ.

ಅಮೀರ್‌ ಖಾನ್‌ ಅವರ ಭೇಟಿಯ ಬಗ್ಗೆ ಎಮೈನ್ ಎಡೊರ್ಗನ್ ಟ್ವೀಟ್‌ ಕೂಡ ಮಾಡಿದ್ದಾರೆ. ‘ಇಸ್ತಾಂಬುಲ್‌ನಲ್ಲಿ ವಿಶ್ವದ ಖ್ಯಾತ ನಟ, ನಿರ್ಮಾಪಕ ಅಮೀರ್‌ ಖಾನ್‌ ಅವರನ್ನು ಭೇಟಿ ಮಾಡಿದ್ದು ಸ್ಮರಣೀಯ ಕ್ಷಣ. ಟರ್ಕಿಯ ವಿವಿಧೆಡೆ ಲಾಲ್‌ ಸಿಂಗ್‌ ಛಡ್ಡಾ ಸಿನಿಮಾದ ಚಿತ್ರೀಕರಣಕ್ಕೆ ಅವರು ನಿರ್ಧರಿಸಿರುವುದು ಖುಷಿ ತಂದಿದೆ’ ಎಂದಿದ್ದಾರೆ.

ಈಗಾಗಲೇ, ‘ಲಾಲ್‌ ಸಿಂಗ್‌ ಛಡ್ಡಾ’ ಚಿತ್ರದ ಶೂಟಿಂಗ್‌ ಚಂಡೀಗಢ, ಕೋಲ್ಕತ್ತ ಹಾಗೂ ಅಮೃತಸರದಲ್ಲಿ ನಡೆದಿದೆ. ಈ ವರ್ಷವೇ ಸಿನಿಮಾ ಬಿಡುಗಡೆಗೆ ದಿನಾಂಕ ನಿಗದಿಯಾಗಿತ್ತು. ಕೊರೊನಾ ಪರಿಣಾಮ ಶೂಟಿಂಗ್‌ ಪೂರ್ಣಗೊಂಡಿಲ್ಲ. ಅದ್ವೈತ್‌ ಚಂದ್ರನ್ ನಿರ್ದೇಶನದ ಈ ಸಿನಿಮಾವು 2021ರ ಕ್ರಿಸ್‌ಮಸ್‌ ಹಬ್ಬದಂದು ತೆರೆ ಕಾಣುವ ನಿರೀಕ್ಷೆಯಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.