ADVERTISEMENT

ತೆಲುಗು ನಿರ್ದೇಶಕನೊಂದಿಗೆ ಕೈಜೋಡಿಸಿದ ಅಮಿರ್‌ ಖಾನ್‌?

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2025, 19:01 IST
Last Updated 16 ಏಪ್ರಿಲ್ 2025, 19:01 IST
ಅಮಿರ್‌ ಖಾನ್‌
ಅಮಿರ್‌ ಖಾನ್‌   

ಬಾಲಿವುಡ್‌ನ ಸ್ಟಾರ್‌ ನಟರು ದಕ್ಷಿಣ ಭಾರತದ ನಿರ್ದೇಶಕರತ್ತ ಒಲುವು ತೋರುತ್ತಿದ್ದಾರೆ. ದಕ್ಷಿಣದ ಸಿನಿಮಾಗಳು ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಬಾಲಿವುಡ್‌ ಚಿತ್ರಗಳಿಗಿಂತ ಹೆಚ್ಚು ಸದ್ದು ಮಾಡುತ್ತಿರುವುದೇ ಇದಕ್ಕೆ ಮುಖ್ಯ ಕಾರಣ. ಪ್ರಶಾಂತ್‌ ನೀಲ್‌, ಲೋಕೇಶ್‌ ಕನಕರಾಜು ಸೇರಿದಂತೆ ಕೆಲ ನಿರ್ದೇಶಕರು ಬಾಲಿವುಡ್‌ನಲ್ಲಿ ಸಿನಿಮಾ ಮಾಡಲಿದ್ದಾರೆ ಎಂಬ ವದಂತಿ ವರ್ಷಗಳಿಂದಲೂ ಇದೆ. ಆ ಸಾಲಿನಲ್ಲಿ ಈಗ ತೆಲುಗಿನ ಜನಪ್ರಿಯ ನಿರ್ದೇಶಕ ವಂಶಿ ಪೈಡಿಪಲ್ಲಿ ಹೆಸರು ಕೇಳಿ ಬಂದಿದೆ.

ಬಾಲಿವುಡ್‌ನ ಸೂಪರ್‌ಸ್ಟಾರ್‌ ಅಮೀರ್‌ ಖಾನ್‌, ವಂಶಿ ಪೈಡಿಪಲ್ಲಿ ಜೊತೆ ಕೈಜೋಡಿಸಲಿದ್ದಾರೆ ಎಂದು ತೆಲುಗು ಮಾಧ್ಯಮಗಳು ವರದಿ ಮಾಡಿವೆ. ತೆಲುಗಿನ ‘ಮಹರ್ಷಿ’, ತಮಿಳಿನ ‘ವಾರಿಸು’ ಮೊದಲಾದ ಮಾಸ್‌ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಇದೀಗ ಅಮೀರ್‌, ವಂಶಿ ಜೋಡಿಯಾಗಿ ಪ್ಯಾನ್‌ ಇಂಡಿಯಾ ಸಿನಿಮಾ ಮಾಡಲು ಮುಂದಾಗಿದ್ದಾರೆ. ಇವರು ಈಗಾಗಲೇ ಒಂದೆಳೆ ಕಥೆಯನ್ನು ಅಮೀರ್‌ ಖಾನ್‌ಗೆ ಹೇಳಿದ್ದು, ಕಥೆ ವಿಸ್ತರಣೆ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ವರದಿ ತಿಳಿಸಿದೆ. 

ದಿಲ್‌ ರಾಜು ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ. ಇವರ ನಿರ್ಮಾಣದ ‘ಗೇಮ್‌ ಚೇಂಜರ್‌’ ಚಿತ್ರ ಅಷ್ಟೇನು ಯಶಸ್ಸು ಕಂಡಿರಲಿಲ್ಲ. ಹೀಗಾಗಿ ದಿಲ್‌ ರಾಜು ಮತ್ತೊಂದು ಹಿಟ್‌ ಕಾಂಬಿನೇಷನ್‌ಗೆ ಎದುರು ನೋಡುತ್ತಿದ್ದಾರೆ. 

ADVERTISEMENT

ಅಮೀರ್‌ ಖಾನ್‌ ಇತ್ತೀಚಿನ ಸಿನಿಮಾಗಳು ಕೂಡ ನಿರೀಕ್ಷಿತ ಯಶಸ್ಸು ಕಂಡಿಲ್ಲ. ಸದ್ಯ ಅವರು ‘ಸಿತಾರೆ ಜಮೀನ್‌ ಪರ್‌’ ಚಿತ್ರದಲ್ಲಿ ಮಗ್ನರಾಗಿದ್ದಾರೆ. ಜೊತೆಗೆ ರಜನಿಕಾಂತ್‌ ‘ಕೂಲಿ’ ಚಿತ್ರದಲ್ಲಿಯೂ ಕಾಣಿಸಿಕೊಂಡಿದ್ದಾರೆ. ‘ಸಿತಾರೆ..’ ಬಳಿಕ ವಂಶಿ ಜೊತೆಗಿನ ಈ ಚಿತ್ರ ಪ್ರಾರಂಭವಾಗಲಿದೆ ಎಂಬ ಸುದ್ದಿಯಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.