ADVERTISEMENT

ಅಸಹಾಯಕ ಪ್ರಧಾನಿಯ ಅಣಕ

ನವೀನ ಕುಮಾರ್ ಜಿ.
Published 11 ಜನವರಿ 2019, 19:29 IST
Last Updated 11 ಜನವರಿ 2019, 19:29 IST
‘ದಿ ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ಚಿತ್ರದ ದೃಶ್ಯ
‘ದಿ ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ಚಿತ್ರದ ದೃಶ್ಯ   

‘ದಿ ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ಸಿನಿಮಾ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ಮಾಧ್ಯಮ ಸಲಹೆಗಾರರಾಗಿದ್ದ ಸಂಜಯ್ ಬಾರು ಅವರ ಪುಸ್ತಕವನ್ನು ಆಧರಿಸಿ ನಿರ್ಮಿಸಿರುವ ಚಿತ್ರ. ಟ್ರೇಲರ್ ಬಿಡುಗಡೆಯಾದಾಗಿನಿಂದಲೂ ಇದು ವಿವಾದದ ಕೇಂದ್ರ ಬಿಂದುವಾಗಿತ್ತು. ರಾಜಕೀಯ ಹಿತಾಸಕ್ತಿಯಿಂದ ಇದನ್ನು ನಿರ್ಮಿಸಲಾಗಿದೆ ಎಂಬ ಆರೋಪಗಳು ಕೇಳಿಬಂದಿದ್ದವು.

ಆರ್‌ಬಿಐ ಗವರ್ನರ್, ಹಣಕಾಸು ಸಚಿವ ಮೊದಲಾದ ಹುದ್ದೆಗಳನ್ನು ನಿರ್ವಹಿಸಿದ್ದ ಸಮರ್ಥ ವ್ಯಕ್ತಿಯೊಬ್ಬರು ಪ್ರಧಾನಿ ಹುದ್ದೆಗೇರಿದರೂ ಪಕ್ಷದ ಅಧ್ಯಕ್ಷೆಯ ಕೈಗೊಂಬೆಯಾಗಿ ಹೇಗೆ ಕಾರ್ಯ ನಿರ್ವಹಿಸಬೇಕಾಯಿತು ಎಂಬುದರ ಚಿತ್ರಣವನ್ನು ನಿರ್ದೇಶಕರು ನೀಡಿದ್ದಾರೆ.

2004ರಲ್ಲಿ ಯುಪಿಎ ಸರ್ಕಾರ ಅಧಿಕಾರಕ್ಕೆ ಬಂದಾಗ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಪ್ರಧಾನಿಯಾಗಿ ಘೋಷಿಸಬೇಕು ಎಂದು ಪಕ್ಷದ ಮುಖಂಡರು ಒತ್ತಾಯಿಸುತ್ತಾರೆ. ಆದರೆ, ಸೋನಿಯಾ ಅವರು ವಿದೇಶಿ ಪ್ರಜೆ ಎಂಬ ಕಾರಣಕ್ಕೆ ವಿರೋಧ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸುತ್ತವೆ. ಆಗ ಸೋನಿಯಾ ಅವರೇ ಮನಮೋಹನ್ ಸಿಂಗ್ ಅವರನ್ನು ಪ್ರಧಾನಿ ಹುದ್ದೆಗೆ ಆಯ್ಕೆ ಮಾಡುತ್ತಾರೆ. ಈ ಸನ್ನಿವೇಶದಿಂದ ಆರಂಭವಾಗುವ ಸಿನಿಮಾದ ಕತೆ ಮುಂದೆ ಸಂಜಯ್ ಬಾರು ಪಾತ್ರಧಾರಿಯ ನಿರೂಪಣೆಯ ಮೂಲಕ ಮುಂದೆ ಸಾಗುತ್ತದೆ.

ADVERTISEMENT

ಆಕಸ್ಮಿಕವಾಗಿ ಪ್ರಧಾನಿಯಾದ ಸಿಂಗ್ ಅವರು ಯಾವುದೇ ಸ್ವತಂತ್ರ ತೀರ್ಮಾನಗಳನ್ನು ತೆಗೆದುಕೊಳ್ಳಲಾಗದ ಅಸಹಾಯಕ ವ್ಯಕ್ತಿಯಾಗಿ ಚಿತ್ರದಲ್ಲಿ ಕಂಡು ಬರುತ್ತಾರೆ. ಆದರೆ, ಸುತ್ತಲೂ ಹಗರಣಗಳು ನಡೆದರೂ ಅವರು ಕಳಂಕ ಅಂಟಿಕೊಳ್ಳದ ವ್ಯಕ್ತಿ ಎಂಬುದನ್ನು ನಿರ್ದೇಶಕರು ತೋರಿಸಿದ್ದಾರೆ.

ಚಿತ್ರದ ಮೊದಲಾರ್ಧವನ್ನು ಪ್ರಧಾನಿ ಆಯ್ಕೆ, ಅಮೆರಿಕ ಜೊತೆಗಿನ ಪರಮಾಣು ಒಪ್ಪಂದ, ಎಡಪಕ್ಷಗಳ ಜೊತೆಗಿನ ವಿರೋಧ ಮೊದಲಾದ
ವುಗಳ ಚಿತ್ರಣಕ್ಕೆ ಮೀಸಲಿರಿಸಿದರೆ, ದ್ವಿತೀಯಾರ್ಧದಲ್ಲಿ ಸಿಂಗ್ ಅವರು ಎರಡನೇ ಅವಧಿಗೆ ಪ್ರಧಾನಿಯಾಗಿ ಆಯ್ಕೆಯಾಗಿದ್ದು, ಸರ್ಕಾರ ಹಗರಣಗಳ ಸುಳಿಗೆ ಸಿಲುಕುವುದನ್ನು ತೋರಿಸಿದ್ದಾರೆ.

ಅನುಪಮ್ ಖೇರ್ ಅವರು ಮನಮೋಹನ್ ಸಿಂಗ್ ಅವರ ಮಾತು, ನಡಿಗೆ, ಹಾವಭಾವ ಎಲ್ಲವನ್ನೂ ಅನುಕರಿಸಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ಸಂಜಯ್ ಬಾರು ಪಾತ್ರದಲ್ಲಿ ನಟಿಸಿರುವ ಅಕ್ಷಯ್ ಖನ್ನಾ ಕೂಡ ಗಮನ ಸೆಳೆಯುತ್ತಾರೆ. ಜರ್ಮನ್ ನಟಿ ಸುಜೇನ್ ಬರ್ನರ್ಟ್ ಸೋನಿಯಾ ಗಾಂಧಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದುದ್ದಕ್ಕೂ ರಾಹುಲ್ ಗಾಂಧಿ ಪಾತ್ರಧಾರಿ ಅಪ್ರಬುದ್ಧನಂತೆ ಕಾಣಿಸಿಕೊಂಡಿದ್ದಾರೆ.

ಅಮೆರಿಕದ ಜೊತೆ ಮಹತ್ವದ ಪರಮಾಣು ಒಪ್ಪಂದ ನಡೆಸುವ ಸಂದರ್ಭದಲ್ಲಿ ವಿರೋಧ ಪಕ್ಷ, ಎಡಪಕ್ಷಗಳು ಮತ್ತು ತಮ್ಮದೇ ಪಕ್ಷದಿಂದ ಸಿಂಗ್ ಅವರು ವಿರೋಧ ಎದುರಿಸಿದ್ದಾರೆ ಎಂದು ಸಂಜಯ್ ಬಾರು ಪಾತ್ರದ ಮೂಲಕ ಹೇಳಿಸುವ ನಿರ್ದೇಶಕರು, ಪ್ರಧಾನಿಯ ಅಸಹಾಯಕತೆಯನ್ನು ಎತ್ತಿ ತೋರಿಸುವ ಪ್ರಯತ್ನ ಮಾಡಿದ್ದಾರೆ. ಇದೊಂದು ಜೀವನ ಕಥೆಯಾಧರಿತ ಸಿನಿಮಾ ಎನ್ನುವುದಕ್ಕಿಂತಲೂ ಡಾಕ್ಯುಮೆಂಟ್ರಿ ಚಿತ್ರ ಎನ್ನಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.